

ಸ್ವಿಡನ್: ತಂತ್ರಜ್ಞಾನ ಮುಂದುವರೆದಂತೆಲ್ಲಾ ಮನುಷ್ಯರು ಮಾಡುವ ಕೆಲಸಗಳನ್ನು ಯಂತ್ರಗಳೇ ಮಾಡುತ್ತಿರುವುದು ಹೊಸ ವಿಷಯವಲ್ಲ. ಅದೇ ರೀತಿ ನಾಯಿ, ಬೆಕ್ಕುಗಳಂಥ ಸಾಕು ಪ್ರಾಣಿಗಳು ತಮ್ಮ ಮಾಲೀಕನ ಕೆಲಸಗಳನ್ನು ಮಾಡಿಕೊಡುತ್ತಿರುವುದೂ ಹೊಸ ವಿಷಯವಲ್ಲ. ಆದರೆ ಕಾಗೆ ತಮ್ಮ ಮಾಲೀಕನಿಗೆ ಕೆಲಸ ಮಾಡಿಕೊಡುತ್ತಿವೆ, ಅದೂ ಸಂಬಳಕ್ಕಾಗಿ ಎಂದು ಯಾರಾದರೂ ಹೇಳಿದರೆ ನಂಬುವಿರಾ?
ಸಾಧ್ಯವೇ ಇಲ್ಲ ಎನ್ನುವಿರಿ ಅಲ್ಲವೆ? ಆದರೆ ಈ ವಿಷಯವನ್ನು ನಂಬಲೇಬೇಕು. ಏಕೆಂದರೆ ಇದು ನಿಜವಾಗಿಯೂ ನಡೆಯುತ್ತಿದ್ದು, ಇದರ ವಿಡಿಯೋ ಕೂಡ ಎಲ್ಲೆಡೆ ವೈರಲ್ ಆಗುತ್ತಿದೆ.
ಅಷ್ಟಕ್ಕೂ ಇಂಥದ್ದೊಂದು ಅಚ್ಚರಿ ಘಟನೆ ನಡೆಯುತ್ತಿರುವುದು ಸ್ವೀಡನ್‌ನಲ್ಲಿ. ಅಷ್ಟಕ್ಕೂ ಇವುಗಳ ಕೆಲಸ ಏನಪ್ಪಾ ಎಂದರೆ ಸ್ವೀಡಿಶ್ ನಗರದ ಬೀದಿಗಳಲ್ಲಿ ಸೇದಿ ಬಿಸಾಡಿದ ಸಿಗರೇಟ್ ತುಂಡುಗಳನ್ನು ಸಂಗ್ರಹಿಸುವ ಕೆಲಸ.. ಮೊದಲಿಗೆ ಒಂದೆರಡು ಕಾಗೆಗಳು ಹೀಗೆ ಮಾಡುತ್ತಿದ್ದವು. ಇವುಗಳಿಗೆ ತರಬೇತಿ ನೀಡಲಾಗಿತ್ತು. ನಂತರ ಅದನ್ನೇ ಹಲವು ಕಾಗೆಗಳು ಫಾಲೋ ಮಾಡಿಕೊಂಡು ಬಂದಿದ್ದು, ಯಾವ ಕಾಗೆಗಳನ್ನೂ ಬಲವಂತವಾಗಿ ಈ ಕೆಲಸಕ್ಕೆ ನೇಮಿಸಿಕೊಂಡಿಲ್ಲ, ಅವುಗಳು ಸ್ವಯಂ ಪ್ರೇರಿತವಾಗಿ ಸೇರಿಕೊಂಡಿವೆ ಎನ್ನುತ್ತಿದ್ದಾರೆ ಇಲ್ಲಿಯ ಮಂದಿ.
ಸ್ಟಾರ್ಟ್ಅಪ್ ಮೂಲಕ ಒಂದು ಯಂತ್ರವನ್ನು ವಿನ್ಯಾಸಗೊಳಿಸಲಾಗಿದೆ. ಇಲ್ಲಿ ಕಾಗೆಗಳಿಗೆ ಇಷ್ಟವಾಗುವ ಆಹಾರಗಳನ್ನು ಇಡಲಾಗಿದೆ. ಈ ಯಂತ್ರದೊಳಕ್ಕೆ ಕಾಗೆ ಬಂದು ತಾನು ತಂದಿರುವ ಸಿಗರೆಟ್ ತುಂಡನ್ನು ಹಾಕಿದರೆ, ಅತ್ತ ಕಡೆಯಿಂದ ಆಹಾರ ಹೊರಬರುತ್ತದೆ. ಎಷ್ಟು ಸಿಗರೆಟಿನ ತುಂಡು ಹಾಕಲಾಗುತ್ತದೆಯೋ ಅಷ್ಟು ಆಹಾರಗಳು ಬರುತ್ತವೆ. ಈ ಆಹಾರಗಳೇ ಅವುಗಳಿಗೆ ಸಂಬಳ. ಹೆಚ್ಚೆಚ್ಚು ಆಹಾರ ಬೇಕು ಎಂದರೆ ಹೆಚ್ಚೆಚ್ಚು ಸಿಗರೆಟ್ ತುಂಡುಗಳನ್ನು ತಂದುಹಾಕುವ ಕೆಲಸ ಈ ಕಾಗೆಗಳದ್ದು!
ರಾಜಧಾನಿ ಸ್ಟಾಕ್‍ಹೋಂನ ಸಮೀಪ ಇರುವ ಸೋಡರ್‍ಟೆಲಿಯಾ ನೈರುತ್ಯ ಭಾಗದಲ್ಲಿ ಈ ಯಂತ್ರ ಇಡಲಾಗಿದೆ. ಅಲ್ಲಿ ಸ್ವಯಂಪ್ರೇರಿತವಾಗಿ ಕಾಗೆಗಳು ಬಂದು ಸಿಗರೆಟ್ ತುಂಡನ್ನು ಹಾಕುತ್ತಿವೆ. ಆರಂಭದಲ್ಲಿ ಒಂದೆರಡು ಕಾಗೆಗಳಿಗೆ ತರಬೇತಿ ನೀಡಿದ್ದೆವು. ನಂತರ ಈಗ ತಮಗೆ ಆಹಾರ ಸಿಗುತ್ತದೆ ಎನ್ನುವ ಕಾರಣಕ್ಕೆ ಅನೇಕ ಕಾಗೆಗಳು ಸಿಗರೆಟಿನ ತುಂಡುಗಳನ್ನು ತಂದು ಹಾಕುತ್ತಿವೆ ಎನ್ನುತ್ತಾರೆ ಈ ಹೊಸ ವಿಧಾನ ಕಂಡುಹಿಡಿದಿರುವ ಕಂಪೆನಿ ಕಾರ್ವೀಡ್ ಕ್ಲೀನಿಂಗ್‍ನ ಸ್ಥಾಪಕ ಕ್ರಿಶ್ಚಿಯನ್ ಗುಂಥೇರ್ ಹನ್ಸನ್.
ಕೀಪ್ ಸ್ವೀಡನ್ ಟೈಡಿ ಫೌಂಡೇಶನ್ ಪ್ರಕಾರ, ಪ್ರತಿ ವರ್ಷ ಈ ದೇಶದ ಬೀದಿಗಳಲ್ಲಿ ಒಂದು ಬಿಲಿಯನ್ ಸಿಗರೇಟ್ ತುಂಡುಗಳನ್ನು ಬಿಸಾಡಲಾಗುತ್ತದೆ, ಪ್ರತಿಯೊಂದನ್ನು ಎತ್ತಿ ಹಾಕಲು ಲಕ್ಷಾಂತರ ರೂಪಾಯಿ ಹಣ ಖರ್ಚಾಗುತ್ತಿತ್ತು. ಇದೀಗ ಕಾಗೆಗಳೇ ಎಲ್ಲವನ್ನೂ ಮಾಡುತ್ತಿವೆ. ಇಲ್ಲಿ ಕಾಗೆಗಳು ಮಾತ್ರವಲ್ಲದೇ ಕಾಗೆಗಳ ಪ್ರಭೇದಕ್ಕೆ ಸೇರಿರುವ ರೂಕ್ಸ್‌ಗಳು, ಜ್ಯಾಕ್‍ಡಾವ್‍ಗಳು ಮತ್ತು ಮ್ಯಾಗ್‍ಪೈಗಳು ಲಕ್ಷಗಟ್ಟಲೆ ಸಂಖ್ಯೆಯಲ್ಲಿವೆ, ಇವುಗಳು ಕೂಡ ಈ ಕೆಲಸದಲ್ಲಿ ತೊಡಗಿವೆಯಂತೆ.
ಇಲ್ಲಿದೆ ನೋಡಿ ವಿಡಿಯೋ