ಪಾರ್ಕ್‌ನಲ್ಲಿದ್ದ ಜೋಡಿಗೆ ಮಾಸ್ಕ್‌ ಹಾಕಿಕೊಳ್ಳಿ ಎಂದ ಪೊಲೀಸ್‌: ಕೆನ್ನೆಗೆ ಹೊಡೆದ ಮಹಿಳೆ- ಗುಂಡು ಹಾರಿಸಿದ ವಕೀಲ!

police
ಸಾಂದರ್ಭಿಕ ಚಿತ್ರ
Published on

ನವದೆಹಲಿ: ಪಾರ್ಕಿನಲ್ಲಿ ಕುಳಿತುಕೊಂಡಿದ್ದ ಜೋಡಿಗೆ ಮಾಸ್ಕ್‌ ಹಾಕಿಕೊಳ್ಳಿ ಎಂದು ಪೊಲೀಸ್‌ ಒಬ್ಬ ಹೇಳಿದ್ದರಿಂದ ಸಿಟ್ಟುಗೊಂಡ ಈ ಜೋಡಿ ಭಯಾನಕ ಕೃತ್ಯ ಮಾಡಿದೆ. ಅಲ್ಲಿರುವ ಜೋಡಿಯ ಪೈಕಿ ಮಹಿಳೆ ಪೊಲೀಸ್‌ ಕೆನ್ನೆಗೆ ಹೊಡದರೆ, ಪುರುಷ ತನ್ನಲ್ಲಿದ್ದ ಪಿಸ್ತೂಲ್‌ನಿಂದ ಗುಂಡು ಹಾರಿಸಿದ್ದಾನೆ!

ಇಂಥದ್ದೊಂದು ಭಯಾನಕ ಘಟನೆ ನಡೆದಿರುವುದು ದೆಹಲಿಯ ಶಹದಾರ ಜಿಲ್ಲೆಯ ಸೀಮಾಪುರಿಯಲ್ಲಿ. ಇಲ್ಲಿಯ ದಿಲ್‌ಶಾದ್‌ ಗಾರ್ಡನ್‌ ಬಳಿ ಭಾನುವಾರ ಬೆಳಗ್ಗೆ ಈ ಜೋಡಿ ಪಾರ್ಕ್‌ನಲ್ಲಿ ಕುಳಿತಿತ್ತು. ಅಲ್ಲಿಗೆ ಗಸ್ತು ತಿರುಗುತ್ತಿದ್ದ ಪೊಲೀಸ್‌ ಒಬ್ಬರು ಬಂದಾಗ ಈ ಜೋಡಿಯನ್ನು ನೋಡಿದ್ದಾರೆ.

ಅವರು ಮಾಸ್ಕ್‌ ಧರಿಸದ ಹಿನ್ನೆಲೆಯಲ್ಲಿ ಮಾಸ್ಕ್‌ ಧರಿಸುವಂತೆ ಹೇಳಿದ್ದಾರೆ. ಇದರಿಂದ ಸಿಟ್ಟಿಗೆದ್ದ ಮಹಿಳೆ ಕೂಡಲೇ ಪೊಲೀಸನ ಕೆನ್ನೆಗೆ ಹೊಡೆದಿದ್ದಾಳೆ, ಪುರುಷ ಜೇಬಿನಲ್ಲಿದ್ದ ಪಿಸ್ತೂಲ್‌ ತೆಗೆದು ಗುಂಡು ಹಾರಿಸಿದ್ದಾನೆ. ಅದೃಷ್ಟವಶಾತ್‌ ಆ ಪೊಲೀಸ್‌ಗೆ ಗುಂಡು ತಾಗಲಿಲ್ಲ.

ಕೂಡಲೇ ಅಲ್ಲಿಗೆ ಪೊಲೀಸ್‌ ತಂಡ ಆಗಮಿಸಿದ್ದು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಅವರ ವಿರುದ್ಧ ಕೇಸ್‌ ದಾಖಲು ಮಾಡಲಾಗಿದೆ. ಆರೋಪಿಗಳು ಪೂರ್ವ ದೆಹಲಿಯ ಪಟ್ಪರ್‌ಗಂಜ್ ಗ್ರಾಮದ ನಿವಾಸಿಗಳಾಗಿದ್ದಾರೆ. ಆರೋಪಿಯು ವೃತ್ತಿಯಲ್ಲಿ ವಕೀಲನಾಗಿದ್ದು ನಂದ ನಗರಿಯಲ್ಲಿ ಬಾಲಾಪರಾಧಿ ನ್ಯಾಯ ಮಂಡಳಿಯ ಕಲ್ಯಾಣಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾನೆ ಎಂದು ವಿಚಾರಣೆ ವೇಳೆ ತಿಳಿದುಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net