

ಲಖನೌ: ಇತ್ತೀಚೆಗೆ ಅತ್ಯಾಚಾರ, ಅಪರಾಧ ಪ್ರಕರಣಗಳಿಂದ ದಿನೇದಿನೇ ಸುದ್ದಿಯಾಗುತ್ತಿರುವ ಉತ್ತರ ಪ್ರದೇಶವೀಗ ಕೋವಿಡ್ ಪ್ರಕರಣದಲ್ಲಿ ಇತಿಹಾಸ ಸೃಷ್ಟಿಸಿದೆ.
ನಿನ್ನೆಗೆ ಒಂದು ಕೋಟಿ ಮಂದಿಗೆ ಪರೀಕ್ಷೆ ಮಾಡುವ ಮೂಲಕ ಭಾರತದ ಮೊದಲ ರಾಜ್ಯವಾಗಿ ಗುರುತಿಸಿಕೊಂಡಿದೆ.
ಉತ್ತರ ಪ್ರದೇಶವು ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯ. ಇಂಥ ದೊಡ್ಡ ರಾಜ್ಯದಲ್ಲಿ ಕರೊನಾ ಪರೀಕ್ಷೆಯನ್ನು ಅನೇಕ ಮಂದಿಗೆ ಮಾಡುವುದು ಅಸಾಧ್ಯವೆಂದೇ ಬಿಂಬಿತವಾಗಿತ್ತು. ಆದರೆ ಅದನ್ನೆಲ್ಲಾ ಮೀರಿ ದೇಶದ ಮೊದಲ ರಾಜ್ಯವಾಗಿ ಗುರುತಿಸಿಕೊಂಡು ಇತಿಹಾಸ ಬರೆದಿದೆ.
ಈ ಕುರಿತು ಉತ್ತರ ಪ್ರದೇಶದ ಆರೋಗ್ಯ ಇಲಾಖೆ ಮುಖ್ಯ ಕಾರ್ಯದರ್ಶಿ ಅಮಿತ್ ಮೋಹನ್ ಪ್ರಸಾದ್ ಮಾಹಿತಿ ನೀಡಿದರು. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ತ್ವರಿತವಾಗಿ ಹೆಚ್ಚೆಚ್ಚು ಮಂದಿಗೆ ಕರೊನಾ ಪರೀಕ್ಷೆ ನಡೆಸಲು ಕ್ರಮ ತೆಗೆದುಕೊಳ್ಳುವಂತೆ ಹೇಳಿದ್ದರು. ಇಷ್ಟು ಮಅತ್ರವಲ್ಲದೇ ಹಿರಿಯ ಅಧಿಕಾರಿಗಳ ಜತೆಗೆ, ಅನೇಕ ಬಾರಿ ಈ ಕುರಿತು ಚರ್ಚೆ ಮಾಡಿದ್ದಾರೆ, ಜತೆಗೆ ಪರಿಶೀಲನಾಸಭೆಗಳನ್ನು ಮೇಲಿಂದ ಮೇಲೆ ನಡೆಸಿದ್ದಾರೆ. ಇವೆಲ್ಲವುಗಳ ಪರಿಣಾಮವಾಗಿ ಇಂದು ಉತ್ತರ ಪ್ರದೇಶ ದಾಖಲೆ ಸೃಷ್ಟಿಸಿದೆ ಎಂದು ಅಮಿತ್ ಹೇಳಿದರು.
ಇತ್ತೀಚಿನ ದಿನಗಳಲ್ಲಿ ಸೋಂಕಿನ ಪ್ರಮಾಣದಲ್ಲಿ ಇಳಿಕೆಯಾಗುತ್ತಿದೆ. ಎರಡು ವಾರಗಳ ಅವಧಿಯಲ್ಲಿ, ಸಕ್ರಿಯ ಪ್ರಕರಣಗಳ ಸಂಖ್ಯೆ ಸುಮಾರು 25% ರಷ್ಟು ಕಡಿಮೆಯಾಗಿದೆ. ಆಸ್ಪತ್ರೆಯಿಂದ ಗುಣಮುಖರಾಗುವವರ ಸಂಖ್ಯೆಯೂ ಹೆಚ್ಚುತ್ತಿದೆ. ಆರೋಗ್ಯ ಕಾರ್ಯಕರ್ತರು ಹಾಗೂ ಇತರ ಕರೊನಾ ವಾರಿಯರ್ಸ್ ಪ್ರಯತ್ನದ ಫಲವಾಗಿ ಇಷ್ಟು ಯಶಸ್ಸು ಸಾಧ್ಯವಾಗಿದೆ ಎಂದು ಅವರು ಹೇಳಿದರು.
ಆರಂಭದಲ್ಲಿ ಪರೀಕ್ಷಾ ಕೇಂದ್ರಗಳ ಸಂಖ್ಯೆ ಕಡಿಮೆ ಇತ್ತು. ನಂತರ ಹಲವಾರು ಆಸ್ಪತ್ರೆಗಳಿಗೆ ಈ ಚಿಕಿತ್ಸಾ ವ್ಯವಸ್ಥೆ ಮಾಡಿದ್ದೇವೆ. ಡೇಟಾ ಸಂಗ್ರಹಣೆ ಮತ್ತು ವಿಶ್ಲೇಷಣೆಗಾಗಿ ಹೊಸ ಡಿಜಿಟಲ್ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಯಿತು. ತಾಂತ್ರಿಕ ಬೆಂಬಲ ಘಟಕದ ಸಹಾಯದಿಂದ, ನಾವು ಕೋವಿಡ್ -19ಗಾಗಿ ಎಂಡ್ ಟು ಎಂಡ್ ಪರಿಹಾರವನ್ನು ಒದಗಿಸುವ ಪೋರ್ಟಲ್ ಅಭಿವೃದ್ಧಿಪಡಿಸಿದ್ದೇವೆ.
ಪೋರ್ಟಲ್‌ನಿಂದ ಕಣ್ಗಾವಲು, ಪರೀಕ್ಷೆ, ಮನೆ ಪ್ರತ್ಯೇಕತೆ, ಆಸ್ಪತ್ರೆ ಚಿಕಿತ್ಸೆ, ಕೋವಿಡ್ -19 ಸಂಬಂಧಿತ ಸಾವುಗಳು ಇತ್ಯಾದಿಗಳ ಡೇಟಾವನ್ನು ನಾವು ಪಡೆದುಕೊಳ್ಳಬಹುದಾಗಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಸತತ ಶ್ರಮದ ಫಲವಾಗಿ ಇವೆಲ್ಲವೂ ಸಾಧ್ಯವಾಗಿದೆ ಎಂದು ಅವರು ಹೇಳಿದರು.
ಅಂದಹಾಗೆ, ಉತ್ತರ ಪ್ರದೇಶದ ಜನಸಂಖ್ಯೆ 20.42 ಕೋಟಿ.