ಕೊವ್ಯಾಕ್ಸಿನ್‌, ಕೋವಿಶೀಲ್ಡ್‌- ಕೆಲಸ ಕಳೆದುಕೊಳ್ಳೋ ಭೀತಿಯಲ್ಲಿ ಹೈಕೋರ್ಟ್‌ಗೆ ದೌಡಾಯಿಸಿದ ಕೇರಳಿಗ

vaccine
Published on

ತಿರುವನಂತಪುರ: ಎರಡು ಡೋಸ್ ಕರೊನಾ ಲಸಿಕೆ ಪಡೆದರೂ 3ನೇ ಡೋಸ್‌ ನೀಡಲು ವೈದ್ಯರಿಗೆ ಆದೇಶಿಸುವಂತೆ ಕೋರಿ ಕೇರಳದ ವ್ಯಕ್ತಿಯೊಬ್ಬರು ಹೈಕೋರ್ಟ್ ಮೊರೆ ಹೋಗಿದ್ದಾರೆ. ಇದಕ್ಕೆ ಕಾರಣ, ಅವರು ಕೋವ್ಯಾಕ್ಸಿನ್‌ ಎರಡು ಡೋಸ್‌ ಪಡೆದುಕೊಂಡಿದ್ದು, ಇದೀಗ ಅವರಿಗೆ ಕೋವಿಶೀಲ್ಡ್‌ ಬೇಕಾಗಿದೆ.

ಕೇರಳದ 50 ವರ್ಷದ ಗಿರಿಕುಮಾರ್ ಅವರು ಈ ರೀತಿ ಅರ್ಜಿ ಸಲ್ಲಿಸಿದ್ದಾರೆ. ಅಷ್ಟಕ್ಕೂ ಕೋವಿಶೀಲ್ಡ್‌ ಅವರಿಗೆ ಬೇಕಾಗಿರುವ ಕಾರಣ ಏನೆಂದರೆ ಗಿರಿಕುಮಾರ್‌ ಅವರು, ಸೌದಿ ಅರೇಬಿಯಾದಲ್ಲಿ ಉದ್ಯೋಗದಲ್ಲಿದ್ದಾರೆ. ಅವರಿಗೆ ಇದೇ 30ರ ಒಳಗೆ ಅಲ್ಲಿಗೆ ಹೋಗಬೇಕಿದೆ. ಸೌದಿ ಅರೇಬಿಯಾದಲ್ಲಿ ಕೋವ್ಯಾಕ್ಸಿನ್ ಲಸಿಕೆಗೆ ಮಾನ್ಯತೆ ಇಲ್ಲ. ಆದರೆ ಲಸಿಕೆ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ತೋರಿಸಬೇಕಿದೆ.

ಆದ್ದರಿಂದ ಎರಡು ಡೋಸ್‌ ಕೋವ್ಯಾಕ್ಸಿನ್‌ ಪಡೆದರೂ ಕೋವಿಶೀಲ್ಡ್‌ ಹಾಕಿಸಿಕೊಳ್ಳದಿದ್ದರೆ ಅವರಿಗೆ ಸೌದಿಗೆ ಹೋಗಲು ಆಗುವುದಿಲ್ಲ, ಆಗಸ್ಟ್‌ 30ರ ಒಳಗೆ ರಿಪೋರ್ಟ್‌ ಮಾಡಿಕೊಳ್ಳದಿದ್ದರೆ ಉದ್ಯೋಗ ಕಳೆದುಕೊಳ್ಳುವ ಸ್ಥಿತಿ ಬಂದಿದೆ. ಆದರೆ ಈಗಾಗಲೇ ಎರಡು ಡೋಸ್ ಕರೊನಾ ಲಸಿಕೆ ಹಾಕಿಸಿಕೊಂಡವರಿಗೆ ಮತ್ತೆ ಲಸಿಕೆ ಹಾಕಿಸಿಕೊಳ್ಳಲು ಅವಕಾಶವಿಲ್ಲ ಎಂದು ಕೇಂದ್ರ ಸರ್ಕಾರ ಖಚಿತಪಡಿಸಿದೆ. ಎರಡಕ್ಕಿಂತ ಹೆಚ್ಚು ಡೋಸ್ ಲಸಿಕೆಯನ್ನು ಪಡೆಯುವುದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಉಂಟಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಮತ್ತೊಮ್ಮೆ ಲಸಿಕೆ ನೀಡಲು ಸಾಧ್ಯವಿಲ್ಲ ಎಂದು ಹೇಳಲಾಗಿದೆ. ಆದ್ದರಿಂದ ಇದಾಗಲೇ ಎರಡು ಡೋಸ್‌ ಕೋವ್ಯಾಕ್ಸಿನ್‌ ಹಾಕಿರುವ ಕಾರಣ ಪುನಃ ಬೇರೆ ಹಾಕಲು ಸಾಧ್ಯವಿಲ್ಲ ಎಂದು ಆರೋಗ್ಯ ಇಲಾಖೆ ಸಿಬ್ಬಂದಿ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಹೈಕೋರ್ಟ್‌ ಮೊರೆ ಹೋಗಿದ್ದಾರೆ.

ತಮಗೆ ಕೋವ್ಯಾಕ್ಸಿನ್ ಲಸಿಕೆಯಿಂದ ಆರೋಗ್ಯ ಸುಧಾರಿಸಿಲ್ಲ. ಲಸಿಕೆ ಹಾಕಿಸಿಕೊಂಡ ಮೇಲೂ ಆರೋಗ್ಯ ಕೆಟ್ಟಿದೆ ಎಂದು ಅರ್ಜಿಯಲ್ಲಿ ಅವರು ಅರ್ಜಿಯಲ್ಲಿ ಹೇಳಿದ್ದು ತಮ್ಮ ಮನವಿಯನ್ನು ಪರಿಗಣಿಸುವಂತೆ ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net