

ಮುಂಬೈ: ಕ್ಷಣ ಕ್ಷಣಕ್ಕೂ ಕುತೂಹಲ ಕೆರಳಿಸುತ್ತಿದೆ ಮಹಾರಾಷ್ಟ್ರ ಸರ್ಕಾರದ ರಾಜಕೀಯ ಬೆಳವಣಿಗೆ. ಶಿವಸೇನಾ ಮುಖಂಡ ಏಕನಾಥ್ ಶಿಂಧೆ ಕೊಟ್ಟ ಶಾಕ್ಗೆ ಮಹಾರಾಷ್ಟ್ರ ಸರ್ಕಾರ ಪತನದ ಅಂಚಿನಲ್ಲಿದೆ. ಇನ್ನೇನು ಸರ್ಕಾರ ಪತನವಾಗಲು ಕ್ಷಣಗಣನೆ ಎದುರಾಗುತ್ತಿದೆ ಎಂದೇ ಹೇಳಲಾಗುತ್ತಿದೆ.
ಇದರ ನಡುವೆಯೇ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮಹತ್ವದ ಸಭೆ ನಡೆಸಲು ತೀರ್ಮಾನಿಸಿದ್ದರು. ಆದರೆ ಅವರಿಗೆ ಕರೊನಾ ಲಕ್ಷಣಗಳು ಕಾಣಿಸಿಕೊಂಡಿದ್ದರಿಂದ ಪರೀಕ್ಷೆ ಮಾಡಿಸಿಕೊಂಡಿದ್ದರು. ಅದರಲ್ಲಿ ಅವರಿಗೆ ಕರೊನಾ ಪಾಸಿಟಿವ್ ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಅವರು ವರ್ಚುವಲ್ ಸಭೆಯಲ್ಲಿ ಪಾಲ್ಗೊಂಡಿದ್ದರು. ಇದಕ್ಕೂ ಮುನ್ನ ಮಹಾರಾಷ್ಟ್ರ ರಾಜ್ಯಪಾಲರಿಗೂ ಕರೊನಾ ಕಾಣಿಸಿಕೊಂಡಿತ್ತು.
ಸಿಎಂ ಠಾಕ್ರೆಯವರಿಗೆ ಕರೊನಾ ಕಾಣಿಸಿಕೊಂಡಿರುವುದು ಈ ಹೊತ್ತಿನಲ್ಲಿ ಭಾರಿ ಗೊಂದಲ ಸೃಷ್ಟಿಸಿತ್ತು. ಇಂಥ ಮಹತ್ವದ ಸಮಯದಲ್ಲಿ ಕರೊನಾ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಅನೇಕ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಕಷ್ಟ ಎಂದೇ ಎಣಿಸಲಾಗಿತ್ತು.
ಆದರೆ ಇದೀಗ ಮಹಾರಾಷ್ಟ್ರ ಸರ್ಕಾರದ ಬಿಕ್ಕಟ್ಟಿನಂತೆಯೇ ಕರೊನಾ ಪರೀಕ್ಷೆ ಕೂಡ ಕುತೂಹಲ ಮೂಡಿಸಿದೆ. ಉದ್ಧವ್ ಠಾಕ್ರೆ ಅವರಿಗೆ ಇದೀಗ ಆರ್ಟಿಪಿಸಿಆರ್ ಪರೀಕ್ಷೆ ಮಾಡಿಸಲಾಗಿದ್ದು, ಅದರಲ್ಲಿ ಕರೊನಾ ನೆಗೆಟಿವ್ ತೋರಿಸಿದೆ. ಇದರಿಂದ ಮುಖ್ಯಮಂತ್ರಿಗಳು ಸ್ವಲ್ಪ ನೆಮ್ಮದಿಯ ಉಸಿರು ಬಿಟ್ಟಿದ್ದಾರೆ.
ಶಿವಸೇನೆ ಸಂಸದ ಸಂಜಯ್ ರಾವತ್ ರಾಜ್ಯ ವಿಧಾನಸಭೆ ವಿಸರ್ಜನೆಯ ಸುಳಿವು ನೀಡಿದ್ದಾರೆ. ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ರಾಜಕೀಯ ಬಿಕ್ಕಟ್ಟು ವಿಧಾನಸಭೆ ವಿಸರ್ಜನೆಯತ್ತ ಸಾಗುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ. ಇದರಿಂದ ಮಹಾರಾಷ್ಟ್ರ ಸರ್ಕಾರದ ರಾಜಕೀಯದ ಬಗ್ಗೆ ಇನ್ನಷ್ಟು ಕುತೂಹಲ ಮೂಡಿದೆ.