

ಮುಂಬೈ: ಕೆಲ ದಿನಗಳ ಹಿಂದಷ್ಟೇ ಮುಂಬೈನ ಯುವತಿಯೊಬ್ಬಳು ಕೋವಿಡ್ ಆಸ್ಪತ್ರೆಯಿಂದ ಶೇರ್ ಮಾಡಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡಿತ್ತು. ಆಶಾ ಎನ್ನುವ ಯುವತಿ ಜೀವನ ಪ್ರೀತಿ ತೋರಿಸುತ್ತಾ, ‘ಲವ್ ಯು ಜಿಂದಗಿ’ ಎನ್ನುವ ಹಾಡನ್ನು ಗುನುಗುತ್ತಿರುವುದರಿಂದ ಈಕೆಯ ಜೀವನೋತ್ಸಾಹದ ಕುರಿತು ಸಾಕಷ್ಟು ಮೆಚ್ಚುಗೆಗಳು ವ್ಯಕ್ತವಾಗಿದ್ದವು.
ಆದರೆ ಆಕೆಯ ಜೀವನ ಪ್ರೀತಿಯನ್ನು ಕರೊನಾ ಹೆಮ್ಮಾರಿ ಕಸಿದುಬಿಟ್ಟಿದೆ. ಜೀವನವೇ ನಿನ್ನನ್ನು ಪ್ರೀತಿಸುತ್ತೇನೆ ಎಂದು ಎಷ್ಟು ಉತ್ಸಾಹದಿಂದ ಆಶಾ ಹೇಳಿದ್ದಳೋ, ಅಷ್ಟೇ ವೇಗದಲ್ಲಿ ಸಾವು ಆಕೆಯನ್ನು ಆವರಿಸಿಬಿಟ್ಟಿದೆ. ಕಳೆದ ಎಂಟು ದಿನದಿಂದ ಕೋವಿಡ್ ಸೋಂಕಿಗೆ ತುತ್ತಾಗಿ ಆಸ್ಪತ್ರೆಯ ಹಾಸಿಗೆ ಮೇಲೆ ಮಲಗಿರುವ ಯುವತಿ ಆಶಾ ಮೃತಪಟ್ಟಿದ್ದಾಳೆ.
https://twitter.com/drmonika_langeh/status/1391062602860482562
ಆಕೆ ಚಿಕಿತ್ಸೆಗೆ ಚೆನ್ನಾಗಿಯೇ ಸ್ಪಂದಿಸುತ್ತಿದ್ದಳು. ಈ ವೇಳೆ ಚೀಟಿಯಲ್ಲಿ ಯುವತಿ ವೈದ್ಯರಿಗೆ ನನಗೆ ಲವ್ ಯು ಜಿಂದಗಿ ಹಿಂದಿ ಸಾಂಗ್ ಕೇಳಿಸಿ ಎಂದು ಹೇಳಿದ್ದಳು. ಯುವತಿಯ ಕೋರಿಕೆಗೆ ಸಂತಸಪಟ್ಟಿದ್ದ ವೈದ್ಯರು ಲವ್ ಯು ಜಿಂದಗಿ ಹಾಡನ್ನು ಕೇಳಿಸಿದ್ದಾರೆ. ಇದನ್ನು ಗುನುಗುತ್ತಾ ಯುವತಿ ತಲೆದೂಗಿದ್ದಳು. ಮೋನಿಕಾ ಲಂಗೇಶ್ ಎನ್ನುವರು ಟ್ವಿಟ್ಟರ್ ನಲ್ಲಿ ಈ ವಿಡಿಯೋ ಹಂಚಿಕೊಂಡಿದ್ದರು.
ಇದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದ್ದು, ಆಕೆಯ ಜೀವನ ಪ್ರೀತಿಗೆ ಎಲ್ಲರೂ ಮೆಚ್ಚುಗೆ ಸೂಸಿದ್ದರು. ಆದರೆ ವಿಧಿಯ ಲೀಲೆಯೇ ಬೇರೆಯಾಗಿ ಹೋಯಿತು. ಈಕೆಯ ಸಾವಿಗೆ ಇದೀಗ ಎಲ್ಲರೂ ಕಂಬನಿ ಮಿಡಿಯುತ್ತಿದ್ದಾರೆ.