ಕರೊನಾ ಭಯ- ಮಕ್ಕಳನ್ನು ಕೂಡಿ ಹಾಕಿದ್ದ ಪಾಲಕರಿಗೆ ಕೋರ್ಟ್‌ನಿಂದ ಅಚ್ಚರಿಯ ಶಿಕ್ಷೆ

court
Published on

ಸ್ವೀಡನ್‌: ಕರೊನಾ ಭೀತಿಯಿಂದ ಮಕ್ಕಳಷ್ಟೇ ಅಲ್ಲ, ಎಷ್ಟೋ ಮನೆಗಳಲ್ಲಿ ಯಾರೂ ನಾಲ್ಕೈದು ತಿಂಗಳು ಮನೆಯಿಂದ ಹೊರಕ್ಕೆ ಕಾಲಿಟ್ಟಿಲ್ಲ ಎನ್ನುವುದು ಸತ್ಯವೇ. ಅದೇ ರೀತಿ ಸ್ವೀಡನ್‌ನಲ್ಲಿ ಕೂಡ ನಡೆದಿದೆ. ಆದರೆ ಇಲ್ಲಿ ಪಾಲಕರು ತಮ್ಮ ಮೂರು ಮಕ್ಕಳನ್ನು ಕರೊನಾ ಭೀತಿಯಿಂದಾಗಿ ರೂಮಿನೊಳಗೆ ಕೂಡಿ ಹಾಕಿ, ಮನೆಯ ಬಾಗಿಲಿಗೆ ಮೊಳೆ ಹೊಡೆದು, ಅವರು ಹೊರಕ್ಕೆ ಬಾರದಂತೆ ಮಾಡಿದ್ದರು. ಅದೂ ಐದು ತಿಂಗಳು!

ಕೋಣೆಯೊಳಕ್ಕೆ ಕೂಡಿ ಹಾಕಿದ್ದ ಮಕ್ಕಳಿಗೆ ಆಗಾಗ್ಗೆ ಆಹಾರ ನೀಡುತ್ತಿದುದು ಬಿಟ್ಟರೆ ಅವರಿಗೆ ಯಾರ ಸಂಪರ್ಕಕ್ಕೂ ಬಾರದಂತೆ ತಡೆಯಲಾಗಿತ್ತು. ಮೂವರು ಮಕ್ಕಳನ್ನು ಸಾಮಾಜಿಕ ಅಂತರ ಕಾಪಾಡುವ ಸಂಬಂಧ ದೂರ ದೂರು ಇರಿಸಲಾಗಿತ್ತು.

ಅಷ್ಟಕ್ಕೂ ಈ ಪಾಲಕರು ಹಾಗೆ ಮಾಡಲು ಕಾರಣವೆಂದರೆ, ಅವರಿಗೆ ಕರೊನಾ ಮೇಲಿರುವ ಭೀತಿ ಹೌದಾದರೂ ಕರೊನಾದ ಕುರಿತು ಸತ್ಯಾಂಶ ತಿಳಿದುಕೊಳ್ಳಲು ಅವರು ಬೇರೆ ದೇಶದವರಾಗಿದ್ದು ಸ್ವೀಡಿಷ್‌ ಭಾಷೆ ಅರ್ಥವಾಗುತ್ತಿರಲಿಲ್ಲ. ಅಲ್ಪ ಸ್ವಲ್ಪ ಭಾಷೆ ಅರಿತಿದ್ದ ಅವರು, ತಮಗೆ ತಿಳಿದಷ್ಟನ್ನು ಅರ್ಥ ಮಾಡಿಕೊಂಡಿದ್ದರು. ಮಕ್ಕಳನ್ನು ರೂಮಿನಿಂದ ಹೊರಕ್ಕೆ ಬಿಟ್ಟರೆ ಅವರು ಕರೊನಾದಿಂದ ಸಾಯುತ್ತಾರೆ ಎಂದು ಅಂದುಕೊಂಡು ಹೀಗೆ ಮಾಡಿದ್ದರು.

ಮಕ್ಕಳನ್ನು ಕೂಡಿ ಹಾಕಿದ್ದ ವಿಷಯ ಐದು ತಿಂಗಳ ನಂತರ ಮಕ್ಕಳ ರಕ್ಷಣಾ ಸಮಿತಿಯ ಕಿವಿಗೆ ಬಿದ್ದು, ಮಕ್ಕಳನ್ನು ರಕ್ಷಿಸಲಾಯಿತು. ವಿವಾದ ಕೋರ್ಟ್‌ ಮೆಟ್ಟಿಲೇರಿತು. ಪಾಲಕರ ಪರ ವಕೀಲರು ಇದ್ದ ವಿಷಯವನ್ನು ತಿಳಿಸಿದರೂ, ಕೋರ್ಟ್‌ ಮಕ್ಕಳ ಮೇಲೆ ದೌರ್ಜನ್ಯ ಆಗಿರುವುದನ್ನು ಗಂಭೀರವಾಗಿ ಪರಿಗಣಿಸಿತು. ಅಷ್ಟೇ ಅಲ್ಲದೇ ಐದು ತಿಂಗಳು ಯಾರ ಸಂಪರ್ಕಕ್ಕೂ ಬಾರದೇ ಮಕ್ಕಳು ಮಾನಸಿಕವಾಗಿ ಕುಗ್ಗಿರುವುದನ್ನು ಗಮನಿಸಿತು.

ಇದೇ ಹಿನ್ನೆಲೆಯಲ್ಲಿ, ತನ್ನ ಮುಂದಿನ ಆದೇಶದವರೆಗೂ ಮಕ್ಕಳನ್ನು ಪಾಲಕರ ಹತ್ತಿರ ಬಿಡಬಾರದು ಎಂದು ಕೋರ್ಟ್‌ ತೀರ್ಪು ನೀಡಿದೆ. ತಮ್ಮಿಂದಾದ ಪ್ರಮಾದವನ್ನು ಕೋರ್ಟ್‌ ಮುಂದೆ ಪಾಲಕರು ಅಂಗಲಾಚಿಸಿದರೂ, ಇಂಥ ದೌರ್ಜನ್ಯವನ್ನು ನಾವು ಸಹಿಸುವುದಿಲ್ಲ ಎಂದ ನ್ಯಾಯಾಧೀಶರು, ಸದ್ಯ ಮಕ್ಕಳನ್ನು ಮಕ್ಕಳ ರಕ್ಷಣಾ ಸಮಿತಿಗೆ ವಹಿಸಿದ್ದು, ಪಾಲಕರ ಬಳಿ ಬಿಡಬೇಡಿ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net