ಕ್ರಿಸ್‌ಮಸ್‌ ಸಡಗರದಲ್ಲಿದ್ದ ಅರಮನೆಯಲ್ಲಿ ಭಾರಿ ಕೋಲಾಹಲ: ರಾಣಿ ಎಲಿಜಬೆತ್ ಕೊಲೆ ಮಾಡಲು ಬಂದ ಯುವಕ!

elizabeth
Published on

ಲಂಡನ್: ಲಂಡನ್‌ನ ವಿಂಡ್ಸನ್‌ ಅರಮನೆಯಲ್ಲಿ ಕ್ರಿಸ್‌ಮಸ್‌ ಸಡಗರದಲ್ಲಿದ್ದ ಜನರಿಗೆ ಭಾರಿ ಆಘಾತವಾಗಿರುವ ಘಟನೆ ನಡೆದಿದೆ. 19 ವರ್ಷದ ಭಾರತೀಯ ಸಿಖ್ ಯುವಕನೊಬ್ಬ ಅರಮನೆಯನ್ನು ಪ್ರವೇಶಿಸಿ, ರಾಣಿ ಎರಡನೇ ಎಲಿಜಬೆತ್ ಹತ್ಯೆಗೆ ಸಂಚುರೂಪಿಸಿರುವ ಆಘಾತಕಾರಿ ಘಟನೆ ವರದಿಯಾಗಿದೆ.

ಮಾರಕಾಸ್ತ್ರಗಳನ್ನು ಹೊಂದಿದ್ದ ಈ ಯುವಕ, ವಿಂಡ್ಸನ್ ಅರಮನೆ ಮೈದಾನದಲ್ಲಿ ಭದ್ರತೆಯನ್ನು ಉಲ್ಲಂಘಿಸಿ ಒಳಗೆ ಬಂದಿದ್ದಾನೆ. ಅಕ್ರಮವಾಗಿ ಆತ ಪ್ರವೇಶ ಮಾಡಿದ್ದು, ಅವನನ್ನು ಬಂಧಿಸಲಾಗಿದೆ.

ತಾನು ರಾಣಿ ಎರಡನೇ ಎಲಿಜಬೆತ್ ಹತ್ಯೆ ಮಾಡಲು ಬಂದಿರುವುದಾಗಿ ಖುದ್ದು ಆ ಯುವಕನೇ ಹೇಳಿಕೊಂಡಿದ್ದಾನೆ. ಆತ ಹೇಳಿರುವ ವಿಡಿಯೋ ಒಂದು ಪತ್ತೆಯಾಗಿದೆ. ಅದರಲ್ಲಿ ತನ್ನ ಹೆಸರನ್ನು ಜಸ್ವಂತ್ ಸಿಂಗ್ ಚೈಲ್ ಎಂದು ಹೇಳಿರುವ ಯುವಕ, ‘ನಾನು ರಾಣಿ ಎಲಿಜಬೆತ್ ಅವರನ್ನು ಹತ್ಯೆ ಮಾಡಲು ಪ್ರಯತ್ನಿಸುತ್ತಿದ್ದೇನೆ. ಇದು 1919ರಲ್ಲಿ ಜಲಿಯಾನಾವಾಲಾಬಾಗ್ ಹತ್ಯಾಕಾಂಡದಲ್ಲಿ ಮಡಿದವರಿಗೆ ಪ್ರತಿಕಾರ. ನಾನು ಏನು ಮಾಡಿದ್ದೇನೆ ಹಾಗೂ ಏನು ಮಾಡುತ್ತೇನೆ ಎಂಬುದರ ಬಗ್ಗೆ ಕ್ಷಮೆ ಇರಲಿ’ ಎಂದಿದ್ದಾನೆ.

’ಜಲಿಯಾನಾವಾಲಾಬಾಗ್ ಹತ್ಯಾಕಾಂಡದಲ್ಲಿ ನಮ್ಮ ಜನಾಂಗದ ಕಾರಣದಿಂದ ಕೊಲ್ಲಲ್ಪಟ್ಟ, ಅವಮಾನಿತ ಹಾಗೂ ತಾರತಮ್ಯಕ್ಕೆ ಒಳಗಾದವರಿಗೆ ಇದು ಪ್ರತಿಕಾರವಾಗಿದೆ’ ಎಂದು ವಿಡಿಯೋದಲ್ಲಿ ಯುವಕ ಹೇಳಿಕೊಂಡಿದ್ದು, ಅದರಲ್ಲಿ ಮುಖವನ್ನು ಪರದೆಯಿಂದ ಮುಚ್ಚಿಕೊಂಡಿದ್ದಾನೆ. ಸದ್ಯ ಈತನನ್ನು ಬಂಧಿಸಿರುವ ಪೊಲೀಸರು ತನಿಖೆ ಶುರು ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net