

ಬೆಂಗಳೂರು: ಗಾಂಜಾ ದಂಧೆಯಲ್ಲಿ ತೊಡಗಿ ಮುಖ್ಯಮಂತ್ರಿಗಳ ಮನೆ ಭದ್ರತೆಗೆ ನಿಯೋಜಿತರಾಗಿದ್ದ ಅಮಾನತುಗೊಂಡಿರುವ ಕಾನ್ಸ್ಟೇಬಲ್ಗಳಾದ ಶಿವಕುಮಾರ್ ಹಾಗೂ ಸಂತೋಷ್ ಈ ಹಿಂದೆ ಗಾಂಜಾ ವ್ಯಸನಿಗೆ 1 ಲಕ್ಷ ರೂ.ಗೆ ಬೇಡಿಕೆಯಿಟ್ಟಿರುವುದಕ್ಕೆ ಸಂಬಂಧಿಸಿದಂತೆ ಕೋರಮಂಗಲ ಠಾಣೆಯಲ್ಲಿ ಎ್ಐಆರ್ ದಾಖಲಾಗಿದೆ.
ಆಡುಗೋಡಿ ನಿವಾಸಿ ಆಟೋ ಚಾಲಕ ಇಲಿಯಾಸ್ 2021 ಅ.25ರಂದು ಕೋರಮಂಗಲದ ಬಿಡಿಎ ಕಾಂಪ್ಲೆಕ್ಸ್ ಬಳಿ ಸ್ನೇಹಿತ ಸೈಯ್ಯದ್ ಜತೆ ಗಾಂಜಾ ಸೇವನೆ ಮಾಡುತ್ತಿದ್ದ. ಆ ವೇಳೆ ಕಾನ್ಸ್ಟೇಬಲ್ಗಳಾದ ಶಿವಕುಮಾರ್ ಮತ್ತು ಸಂತೋಷ್ ದಾಳಿ ನಡೆಸಿ ಇಬ್ಬರನ್ನು ಹಿಡಿದು, ಗಾಂಜಾ ತುಂಬಿದ್ದ ಸಿಗರೇಟ್ ವಶಕ್ಕೆ ಪಡೆದಿದ್ದರು. 1 ಲಕ್ಷ ರೂ. ಕೊಟ್ಟರೆ ಪ್ರಕರಣ ದಾಖಲಿಸದೇ ಬಿಟ್ಟು ಕಳುಹಿಸುವುದಾಗಿ ಹೇಳಿದ್ದರು. ಹೆದರಿದ ಆಟೋ ಚಾಲಕ ಇಲಿಯಾಸ್, ನನ್ನ ಕೈಲಿ ಅಷ್ಟೊಂದು ಹಣ ಕೊಡುವುದಕ್ಕೆ ಆಗುವುದಿಲ್ಲ ಎಂದು ಹೇಳಿದಾಗ, ಆತನ ಬಳಿಯಿದ್ದ 5 ಸಾವಿರ ರೂ.ನ್ನು ಕಿತ್ತುಕೊಂಡ ಕಾನ್ಸ್ಟೇಬಲ್ಗಳು, ಇಬ್ಬರನ್ನೂ ಬಿಟ್ಟು ಕಳುಹಿಸಿದ್ದರು.
ಪೊಲೀಸರಾಗಿದ್ದ ಹಿನ್ನೆಲೆಯಲ್ಲಿ ದೂರು ನೀಡಿರಲಿಲ್ಲ:
ಪೊಲೀಸರಾಗಿದ್ದ ಹಿನ್ನೆಲೆಯಲ್ಲಿ ನನ್ನ ವಿರುದ್ಧ ಕೇಸ್ ದಾಖಲಿಸಿ ಜೈಲಿಗೆ ಕಳುಹಿಸಿ ತೊಂದರೆ ನೀಡಬಹುದು ಎಂದು ಆತಂಕಗೊಂಡು ಈ ಕುರಿತು ನಾನು ದೂರು ನೀಡಿರಲಿಲ್ಲ. ಇದೀಗ ಇಬ್ಬರೂ ಡ್ರಗ್ಸ್ ದಂಧೆಯಲ್ಲಿ ತೊಡಗಿರುವ ಬಗ್ಗೆ ಮಾಧ್ಯಮದಲ್ಲಿ ಸುದ್ದಿ ಬಂದಿರುವುದನ್ನು ನೋಡಿದ್ದೆ. ಹೀಗಾಗಿ ಧೈರ್ಯಮಾಡಿ ನನ್ನಿಂದ 5 ಸಾವಿರ ರೂ. ಕಿತ್ತುಕೊಂಡಿರುವ ಇಬ್ಬರು ಕಾನ್ಸ್ಟೇಬಲ್ಗಳ ವಿರುದ್ಧ ದೂರು ನೀಡಿರುವುದಾಗಿ ಎ್ಐಆರ್ನಲ್ಲಿ ಇಲಿಯಾಸ್ ಉಲ್ಲೇಖಿಸಿದ್ದಾರೆ.
ಇಬ್ಬರು ಪೆಡ್ಲರ್ಗಳು ವಶಕ್ಕೆ:
ಕಾನ್ಸ್ಟೇಬಲ್ಗಳು ಗಾಂಜಾ ದಂಧೆಯಲ್ಲಿ ಶಾಮೀಲಾಗಿರುವ ಪ್ರಕರಣದ ತನಿಖೆಯನ್ನು ಸಿಸಿಬಿ ಪೊಲೀಸರು ಚುರುಕುಗೊಳಿಸಿದ್ದಾರೆ. ಈ ಸಂಬಂಧ ಗಾಂಜಾ ಪೆಡ್ಲರ್ಗಳಾದ ಅಖಿಲ್ ರಾಜ್ ಹಾಗೂ ಅಮ್ಜದ್ ಖಾನ್ನ್ನು ಜೈಲಿನಿಂದ ಬಾಡಿ ವಾರೆಂಟ್ ಮೂಲಕ ವಶಕ್ಕೆ ಪಡೆದಿದ್ದಾರೆ. ಗಾಂಜಾ ಎಲ್ಲಿಂದ ಬರುತ್ತಿತ್ತು, ಯಾರಿಗೆಲ್ಲ ಗಾಂಜಾ ಮಾರಾಟ ಮಾಡಲಾಗುತ್ತಿತ್ತು ? ಸಿಎಂ ಮನೆ ಬಳಿ ನಿಯೋಜನೆ ಆಗಿದ್ದ ಪೊಲೀಸ್ ಕಾನ್ಸ್ಟೇಬಲ್ಗಳ ಜತೆ ನಿಮಗೆ ಯಾವೆಲ್ಲ ವ್ಯವಹಾರ ಇದೆ. ಎಷ್ಟು ದಿನಗಳಿಂದ ಆರೋಪಿಗಳು ಪೊಲೀಸರ ಜತೆ ಸಂಪರ್ಕದಲ್ಲಿದ್ದರು ? ಈ ಹಿಂದೆ ಆರೋಪಿತ ಕಾನ್ಸ್ಟೇಬಲ್ಗಳಿಗೆ ಪೆಡ್ಲರ್ಗಳು ಮಾದಕ ವಸ್ತು ನೀಡಿದ್ದಾರೆಯೇ ? ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಿ ಮಾಹಿತಿ ಕಲೆ ಹಾಕುತ್ತಿದ್ದಾರೆ ಎನ್ನಲಾಗಿದೆ.