

ನವದೆಹಲಿ: ಹುಡುಗಿಯೊಬ್ಬಳ ಜತೆ ಸಂಬಂಧ ಹೊಂದಿರುವ ಸ್ನೇಹಿತನ ಜತೆ ವಾಗ್ವಿದಾದಕ್ಕೆ ಇಳಿದು ದ್ವಿತೀಯ ಪಿಯುಸಿಯ ಯುವಕನೊಬ್ಬ ಬರ್ಬರವಾಗಿ ಹತ್ಯೆಯಾಗಿರುವ ಭಯಾನಕ ಘಟನೆ ದೆಹಲಿಯಲ್ಲಿ ನಡೆದಿದೆ.
ಯುವರಾಜ್ ಅಲಿಯಾಸ್ ಅನ್ನು ಎಂಬ 20 ವರ್ಷದ ಯುವಕ ಕೊಲೆಯಾಗಿದ್ದಾನೆ. ರಕ್ಷಾಬಂಧನದ ಹಿನ್ನೆಲೆಯಲ್ಲಿ ತಂಗಿಯಿಂದ ರಾಖಿ ಕಟ್ಟಿಸಿಕೊಂಡಿದ್ದ ಯುವರಾಜ್, ಆಕೆಗೆ ನೀಡಲು ಸಿಹಿ ತರಲು ಅಂಗಡಿಗೆ ಹೋಗಿದ್ದಾಗಲೇ ಕೊಲೆಯಾಗಿದ್ದಾನೆ! ಹುಡುಗಿಯ ವಿಚಾರವಾಗಿ ಯುವರಾಜ್ ಹಾಗೂ ಸ್ನೇಹಿತರ ನಡುವೆ ನಡೆದ ಜಗಳವೇ ಈ ಕೊಲೆಗೆ ಕಾರಣ ಎನ್ನಲಾಗಿದೆ.
ಯುವರಾಜ್ನ ಸ್ನೇಹಿತ ಸನ್ನಿ ಎಂಬಾತ ಅಲ್ಲಿಯೇ ಸಮೀಪದ ಮನೆಯೊಂದರ ಹುಡುಗಿಯನ್ನು ಪ್ರೀತಿಸುತ್ತಿದ್ದ ಎನ್ನಲಾಗಿದೆ. ಆಕೆಯ ವಿಷಯವನ್ನು ಯುವರಾಜ್ ಬಳಿ ಪ್ರಸ್ತಾಪಿಸಿದ್ದಾನೆ. ಅದೇನು ಇಬ್ಬರ ನಡುವೆ ಮಾತುಕತೆಯಾಗಿದೆಯೋ ಗೊತ್ತಿಲ್ಲ, ಒಟ್ಟಿನಲ್ಲಿ ಆ ಹುಡುಗಿಯ ವಿಚಾರವಾಗಿ ತೀವ್ರ ಸ್ವರೂಪದ ವಾಗ್ವಿವಾದ ಆಗಿದೆ. ಇದರಿಂದ ಸಿಟ್ಟಿಗೆದ್ದ ಸನ್ನಿ ಆತನ ಮೇಲೆ ಹಲ್ಲೆ ಮಾಡಿದ್ದಾನೆ. ಸನ್ನಿ ಜತೆಗಿದ್ದ ಇತರ ಸ್ನೇಹಿತ ಕಲ್ಲಿ ಅಲಿಯಾಸ್ ಹಿಮಾಂಶು ಕೂಡ ಜತೆಯಾಗಿದ್ದಾನೆ. ಇಬ್ಬರೂ ಸೇರಿ ಯುವರಾಜ್ನನ್ನು ಚಾಕುವಿನಿಂದ ಇರಿದಿದ್ದಾರೆ.
ರಕ್ತದ ಮಡುವಿನಲ್ಲಿ ಬಿದ್ದಿದ್ದ ಯುವರಾಜ್ನನ್ನು ದಾರಿಯಲ್ಲಿ ಹೋಗುವವರು ಯಾರೂ ಆಸ್ಪತ್ರೆಗೆ ಕರೆದುಕೊಂಡು ಹೋಗಲಿಲ್ಲ, ಬದಲಿಗೆ ವಿಡಿಯೋ ಮಾಡುವಲ್ಲಿ ತಲ್ಲೀನರಾಗಿದ್ದರು. ಕೊನೆಗೆ ಅಲ್ಲಿಯೇ ಯುವರಾಜ್ ಪ್ರಾಣ ಕಳೆದುಕೊಂಡಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಅಣ್ಣ ತನಗಾಗಿ ಸಿಹಿ ಹಾಗೂ ಉಡುಗೊರೆ ತರುತ್ತಾನೆ ಎಂದು ಕಾದು ಕುಳಿತ ತಂಗಿಗೆ ಸಿಕ್ಕಿದ್ದು ಅಣ್ಣನ ಶವ! (ಏಜೆನ್ಸೀಸ್)