ಚೀನಾದಿಂದ ಇನ್ನೊಂದು ಭೀಕರ ವೈರಸ್‌: ಏಳು ಸಾವು- 60ಕ್ಕೂ ಅಧಿಕ ಮಂದಿಗೆ ಸೋಂಕು!

virus
Published on

ಬೀಜಿಂಗ್: ಕರೊನಾವೈರಸ್‌ನಿಂದ ಇಡೀ ವಿಶ್ವ ತಲ್ಲಣಗೊಂಡು ಕ್ಷಣಕ್ಷಣಕ್ಕೂ ಜನರಿಗೆ ಭೀತಿ ಹುಟ್ಟಿಸಿರುವ ನಡುವೆಯೇ, ಇದೀಗ ಹೊಸ ವೈರಸ್‌ ಒಂದು ಚೀನಾದಲ್ಲಿ ಪತ್ತೆಯಾಗಿದೆ!

ಈ ಹೊಸ ವೈರಸ್‌ಗೆ ಚೀನಾದಲ್ಲಿ ಇದಾಗಲೇ ಏಳು ಮಂದಿ ಮೃತಪಟ್ಟಿದ್ದು, 60ಕ್ಕೂ ಅಧಿಕ ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿರುವುದಾಗಿ ಚೀನಾದ ಮಾಧ್ಯಮಗಳು ವರದಿ ಮಾಡಿವೆ.

ಈ ಸೋಂಕಿನ ಹೆಸರು ಎಸ್‌ಟಿಎಫ್‌ಎಸ್‌ (Severe fever with thrombocytopenia syndrome). ಝಿಯಾಂಗ್ಸು, ಅನ್‌ಹೂಯಿ ಪಟ್ಟಣಗಳಲ್ಲಿ ಅನೇಕ ಮಂದಿಯಲ್ಲಿ ಈ ಸೋಂಕು ಪತ್ತೆಯಾಗಿದೆ. ಝಿಯಾಂಗ್ಸು ಪ್ರಾಂತ್ಯದಲ್ಲಿ 37 ಮಂದಿ ಹಾಗೂ ಪೂರ್ವ ಚೀನಾದ ಅನ್‌ಹೂಯಿ ಪ್ರಾಂತ್ಯದಲ್ಲಿ 23 ಜನರು ಸೋಂಕಿಗೆ ಒಳಗಾಗಿರುವುದು ಪತ್ತೆಯಾಗಿದೆ. ಆದರೆ ಇನ್ನೂ ಅನೇಕ ಮಂದಿಗೆ ಈ ಸೋಂಕು ತಗುಲಿರುವ ಸಾಧ್ಯತೆ ಇದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಈ ಸೋಂಕು ಕೂಡ ಕರೊನಾದಂತೆಯೇ ಒಬ್ಬ ವ್ಯಕ್ತಿಯಿಂದ ಇನ್ನೊಬ್ಬರಿಗೆ ಹರಡುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಚೀನಾದೆಲ್ಲೆಡೆ ಕಟ್ಟೆಚ್ಚರ ವಹಿಸಲಾಗುತ್ತಿದೆ.

ಈ ಸೋಂಕಿಗೆ ಒಳಗಾದವರು ಕೂಡ ಕರೊನಾ ವೈರಸ್‌ನ ಗುಣ ಲಕ್ಷಣಗಳನ್ನೇ ಹೊಂದಿದ್ದರೂ, ಹೆಸರೇ ಸೂಚಿಸುವಂತೆ ಜ್ವರದ ಪ್ರಮಾಣ ಅಧಿಕವಾಗಿರುತ್ತದೆ. ಮೊದಲು ಜ್ವರ, ಕೆಮ್ಮಿನಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.

ಇಂಥ ಗುಣಲಕ್ಷಣಗಳನ್ನು ಹೊಂದಿರುವ ವ್ಯಕ್ತಿಗಳ ವೈದ್ಯಕೀಯ ಪರೀಕ್ಷೆ ಮಾಡಿದಾಗ ಅವರ ದೇಹದಲ್ಲಿ ಲ್ಯುಕೋಸೈಟ್ ಇರುವುದನ್ನು ವೈದ್ಯರು ಕಂಡುಹಿಡಿದಿದ್ದಾರೆ. ಮಾತ್ರವಲ್ಲದೇ ಪ್ಲೇಟ್‌ಲೆಟ್‌ಗಳು ಕಡಿಮೆಯಾಗಿರುವುದು ವೈದ್ಯರ ಗಮನಕ್ಕೆ ಬಂದಿದೆ.

ಮೊದಲು ಈ ಸೋಂಕು ಕಾಣಿಸಿಕೊಂಡಿರುವುದು ಒಬ್ಬ ಮಹಿಳೆಗೆ. ಇವೆಲ್ಲಾ ಗುಣಲಕ್ಷಣಗಳನ್ನು ಕಂಡಾಗ ಅವರಿಗೆ ಒಂದು ತಿಂಗಳ ಚಿಕಿತ್ಸೆ ನೀಡಲಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು. ಆದರೆ ಇದಾಗಲೇ ಈ ಸೋಂಕಿನಿಂದ ಏಳು ಮಂದಿ ಪ್ರಾಣ ಕಳೆದುಕೊಂಡಿರುವುದಾಗಿ ಹೇಳಲಾಗಿದೆ.

ಅಷ್ಟಕ್ಕೂ ಎಸ್‌ಎಫ್‌ಟಿಎಸ್‌ ಚೀನಾದಲ್ಲಿ ಕಾಣಿಸಿಕೊಂಡಿರುವುದು ಇದೇ ಮೊದಲ ಬಾರಿಯಲ್ಲ. 2011ರಲ್ಲಿ ಕೂಡ ಈ ಸೋಂಕು ಚೀನಾದ ವಿವಿಧ ಭಾಗಗಳಲ್ಲಿ ಹರಡಿತ್ತು. ಆದರೆ ಇದೀಗ ಕರೊನಾ ಸೋಂಕು ಇಡೀ ವಿಶ್ವವನ್ನು ವ್ಯಾಪಿಸಿರುವ ಹಿನ್ನೆಲೆಯಲ್ಲಿ, ಈ ನಡುವೆಯೇ ಪುನಃ ಈ ಸೋಂಕು ಕಾಣಿಸಿಕೊಂಡಿರುವುದು ಚಿಂತೆಗೀಡು ಮಾಡಿದೆ.

ಪ್ರಾಣಿಗಳ ದೇಹಕ್ಕೆ ಅಂಟಿಕೊಳ್ಳುವಂತಹ ಉಣ್ಣೆಗಳಂತಹ ಕೀಟಗಳಿಂದ ಈ ಸೋಂಕು ಮನುಷ್ಯರಿಗೆ ಹರಡುವ ಸಾಧ್ಯತೆ ಇದೆ ಎಂದಿದ್ದಾರೆ ವಿಜ್ಞಾನಿಗಳು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net