ನೌಕರರ ಕ್ಷೇಮಕ್ಕೆ ಕೇಂದ್ರದ ಕಾಳಜಿ: ವಿಶೇಷ ರಜಾ ಸೌಲಭ್ಯ- ಕಳೆದ ವರ್ಷದಿಂದಲೇ ಅನ್ವಯ

centralgovt
Published on

ನವದೆಹಲಿ: ಕೋವಿಡ್‌ನ ಈ ಬಿಕ್ಕಟ್ಟಿನ ದಿನಗಳಲ್ಲಿ ತನ್ನ ನೌಕರರ ಯೋಗಕ್ಷೇಮದ ಕುರಿತು ವಿಶೇಷ ಕಾಳಜಿ ವಹಿಸಿರುವ ಕೇಂದ್ರ ಸರ್ಕಾರ, ಎಲ್ಲಾ ಕೇಂದ್ರ ಸರ್ಕಾರಿ ನೌಕರಿಗೆ ವಿಶೇಷ ರಜಾ ಸೌಲಭ್ಯವನ್ನು ನಿಗದಿ ಮಾಡಿದೆ.

ಕೇಂದ್ರ ಸರ್ಕಾರಿ ನೌಕರ ಕರೊನಾ ಸೋಂಕಿಗೆ ಒಳಗಾದರೆ ಅಥವಾ ಕ್ವಾರಂಟೈನ್‌ನಲ್ಲಿ ಇದ್ದರೆ ಅಂಥ ಸಂದರ್ಭಗಳಲ್ಲಿ 20 ದಿನಗಳವರೆಗೆ ರಜೆ ಪಡೆಯಬಹುದು ಎಂದು ಕೇಂದ್ರ ಸರ್ಕಾರ ಹೇಳಿದೆ. ಇದರ ಜತೆಗೆ ಕೇಂದ್ರ ಸರ್ಕಾರಿ ನೌಕರರ ಪಾಲಕರು ಅಥವಾ ಅವರ ಅವಲಂಬಿತ ಕುಟುಂಬ ಸದಸ್ಯರು ಕರೊನಾ ಸೋಂಕಿಗೆ ಒಳಗಾದರೆ ಅಂಥ ನೌಕರರಿಗೆ 15 ದಿನಗಳ ವಿಶೇಷ ಸಾಂದರ್ಭಿಕ ರಜೆ (ಎಸ್‌ಸಿಎಲ್) ಮಂಜೂರು ಮಾಡಿದೆ. ಒಂದು ವೇಳೆ ಕುಟುಂಬದ ಸದಸ್ಯರು 15 ದಿನಗಳಿಗಿಂತಲೂ ಹೆಚ್ಚಿನ ಕಾಲ ಆಸ್ಪತ್ರೆಯಲ್ಲಿ ಇದ್ದರೆ ಅಥವಾ ಇನ್ನೂ ಹೆಚ್ಚಿನ ಅವಶ್ಯತಕತೆ ಕಂಡುಬಂದರೆ ಅಂಥವರಿಗೆ ಹೆಚ್ಚುವರಿ ರಜೆಯನ್ನು ಕೂಡ ಮಂಜೂರು ಮಾಡಲಾಗುವುದು ಎಂದು ಸರ್ಕಾರ ತಿಳಿಸಿದೆ.

ಈ ರಜೆಯು 2020ರ ಮಾರ್ಚ್‌ 25ರಿಂದಲೇ ಅನ್ವಯ ಆಗಲಿದೆ. ಇದರರ್ಥ ಕಳೆದ ವರ್ಷದ ಮಾರ್ಚ್‌ 25ರಿಂದ ಯಾರು 15 ದಿನಗಳವರೆಗೆ ಅಥವಾ ಅಗತ್ಯ ಸಂದರ್ಭಗಳಲ್ಲಿ ಅದಕ್ಕಿಂತ ಹೆಚ್ಚು ರಜೆ ಪಡೆದಿರುತ್ತಾರೆಯೋ ಅವುಗಳನ್ನು ಗೈರು ಎಂದು ಪರಿಗಣಿಸದೇ ವಿಶೇಷ ಸಾಂದರ್ಭಿಕ ರಜೆ ಎಂದು ಪರಿಗಣಿಸಬೇಕು ಎಂದು ಇದರಲ್ಲಿ ಸೂಚಿಸಲಾಗಿದೆ.

ಇಷ್ಟೇ ಅಲ್ಲದೇ, ಕೇಂದ್ರ ಸರ್ಕಾರಿ ನೌಕರ ಕರೊನಾ ಸೋಂಕಿತ ವ್ಯಕ್ತಿಯೊಂದಿಗೆ ನೇರ ಸಂಪರ್ಕಕ್ಕೆ ಬಂದರೆ ಅಥವಾ ಹೋಂ ಕ್ವಾರಂಟೈನ್‌ನಲ್ಲಿ ಇದ್ದರೆ ಅಂಥ ಸಂದರ್ಭಗಳಲ್ಲಿ ಏಳು ದಿನಗಳ ಅವಧಿಗೆ ಮನೆಯಿಂದ ಕರ್ತವ್ಯ/ಕೆಲಸ ಎಂದು ಪರಿಗಣಿಸಲಾಗುವುದು' ಎಂದು ಕೇಂದ್ರ ಸರ್ಕಾರ ಹೇಳಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net