ಚರಂಡಿಯಲ್ಲಿ ಎಸೆದಿದ್ದ ಶಿಶುವನ್ನು ಕಾಪಾಡಿದ ಬೆಕ್ಕುಗಳು! ವಿಚಿತ್ರವಾಗಿ ಕೂಗಿ ಜನರ ಗಮನ ಸೆಳೆದವು...

cats
Published on

ಮುಂಬೈ: ಚರಂಡಿಯೊಳಕ್ಕೆ ಬಟ್ಟೆಯಲ್ಲಿ ಸುತ್ತಿ ಎಸೆದು ಹೋಗಿದ್ದ ನವಜಾತ ಶಿಶುವೊಂದನ್ನು ಬೆಕ್ಕುಗಳು ಕಾಪಾಡಿದ ಕುತೂಹಲದ ಘಟನೆ ಮುಂಬೈನ ಪಂತ್​ನಗರದಲ್ಲಿ ನಡೆದಿದೆ.

ಆಗ ತಾನೆ ಹುಟ್ಟಿದ ಮಗುವೊಂದನ್ನು ಬಟ್ಟೆಯಲ್ಲಿ ಸುತ್ತಿ ಚರಂಡಿಯಲ್ಲಿ ಎಸೆಯಲಾಗಿತ್ತು. ಇದು ಯಾರ ಗಮನಕ್ಕೆ ಬರಲೂ ಸಾಧ್ಯವಿಲ್ಲವಾಗಿತ್ತು. ಅದು ಕಾಣಿಸದ ಹಿನ್ನೆಲೆಯಲ್ಲಿ ಯಾರೂ ಅದನ್ನು ಗಮನಿಸಿಯೂ ಇರಲಿಲ್ಲ. ಆದರೆ ಇದೇ ವೇಳೆ ಬೀದಿಯಲ್ಲಿ ಹೋಗುತ್ತಿದ್ದ ಕೆಲವು ಬೆಕ್ಕುಗಳು ಚರಂಡಿಯ ಬಳಿ ಬಂದು ವಿಚಿತ್ರ ರೀತಿಯಲ್ಲಿ ಕೂಗಲು ಶುರು ಮಾಡಿವೆ. ಮೊದಮೊದಲಿಗೆ ಇದೇನು ಎಂದು ಗೊತ್ತಾಗದೇ ಜನ ತಮ್ಮ ಪಾಡಿಗೆ ತಾವು ಹೋಗಿದ್ದಾರೆ.

ಆದರೆ ಕೆಲವು ಬೆಕ್ಕುಗಳು ವಿಚಿತ್ರ ಶಬ್ದವನ್ನು ಮುಂದುವರೆಸಿ ಜನರ ಗಮನವನ್ನು ಸೆಳೆಯಲು ಪ್ರಯತ್ನಿಸಿವೆ. ಇದನ್ನು ನೋಡಿದ ಕೆಲವರು ಅನುಮಾನಗೊಂಡು ಚರಂಡಿಯತ್ತ ಬಗ್ಗಿ ನೋಡಿದ್ದಾರೆ. ಆಗ ವಸ್ತ್ರದಲ್ಲಿ ಸುತ್ತಿಟ್ಟ ಒಂದು ವಸ್ತು ಕಂಡಿದೆ. ಮೊದಲಿಗೆ ಅದು ಮಗು ಎಂದು ಗೊತ್ತಾಗಲಿಲ್ಲ. ನಂತರ ಹೋಗಿ ನೋಡಿದಾಗ ಮಗು ಎನ್ನುವುದು ತಿಳಿದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಕೂಡಲೇ ಪೊಲೀಸರು ಸ್ಥಳಕ್ಕೆ ಬಂದು ಮಗುವಿನ ರಕ್ಷಣೆ ಮಾಡಿದ್ದಾರೆ. ಈ ಕುರಿತು ಮುಂಬೈ ಪೊಲೀಸರು ಟ್ವೀಟ್​ ಮಾಡಿದ್ದಾರೆ. ಮಗುವನ್ನು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net