

ಠಾಣೆ (ಮುಂಬೈ): ಬಿಜೆಪಿಯ ಮುರ್ಬಾದ್ ಕ್ಷೇತ್ರದ ಶಾಸಕ ಕಿಶನ್ ಕ್ಯಾಥೋರೆ ಅವರು ಪ್ರಯಾಣಿಸುತ್ತಿದ್ದ ಕಾರು ಹಾಗೂ ಬೈಕ್ ಒಂದು ಪರಸ್ಪರ ಢಿಕ್ಕಿಯಾಗಿರುವ ಘಟನೆ ಠಾಣೆಯ ಸಮೀಪ ಟಿಟ್ವಾಲಾದಲ್ಲಿ ನಡೆದಿದೆ.
ಈ ಅಪಘಾತದಲ್ಲಿ ಬೈಕ್ ಸವಾರರಾಗಿರುವ ಇಬ್ಬರು ಯುವಕರು ಮೃತಪಟ್ಟಿರುವುದಾಗಿ ಪೊಲೀಸರು ಹೇಳಿದ್ದಾರೆ.
ಬೈಕ್ ಸವಾರರಾಗಿರುವ ಕಲ್ಯಾಣ್ ನಿವಾಸಿ ಅಮಿತ್ ಸಿಂಗ್ (22) ಸ್ಥಳದಲ್ಲೇ ಮೃತಪಟ್ಟರೆ, ಪಿಲಿಯನ್ ರೈಡರ್ ಸಿಮ್ರಾನ್ ಸಿಂಗ್ (18) ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಕಿಶನ್ ಅವರ ಚಾಲಕ ಕಾರು ಚಲಾಯಿಸುತ್ತಿದ್ದರು.
ಕಿಶನ್ ಅವರಿಗೆ ಹೆಚ್ಚಿನ ಅನಾಹುತವಾಗಿಲ್ಲ, ಅವರು ಸುರಕ್ಷಿತರಾಗಿದ್ದಾರೆ. ಅವರ ಕಾರು ಚಾಲಕನಿಗೆ ಗಾಯಗಳಾಗಿವೆ. ಕಾರಿಗೆ ಅಪಾರ ಹಾನಿಯಾಗಿದೆ. ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.