

ಲಖನೌ (ಉತ್ತರ ಪ್ರದೇಶ): ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಉತ್ತರ ಪ್ರದೇಶದ ನಿರ್ಮಾಣ ಹಂತದಲ್ಲಿರುವ ಕಟ್ಟಡ ಕುಸಿದು 10 ಮಂದಿ ದಾರುಣವಾಗಿ ಮೃತಪಟ್ಟಿರುವ ಘಟನೆ ನಡೆದಿದೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ.
ಲಖನೌದ ದಿಲ್‌ಶುಕ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಅವಶೇಷಗಳ ಅಡಿ ಸಿಲುಕಿದ ಓರ್ವನನ್ನು ರಕ್ಷಣಾ ಸಿಬ್ಬಂದಿ ಬಚಾವ್ ಮಾಡಿದ್ದಾರೆ.
ಈ ಕಟ್ಟಡದ ಬಳಿ ಗುಡಿಸಿಲಿನಲ್ಲಿ ವಾಸಿಸುತ್ತಿದ್ದವರು ವಿಪರೀತ ಮಳೆಯಿಂದಾಗಿ ಗುಡಿಸಿಲಿನಿಂದ ಹೊರಬಂದು ನಿರ್ಮಾಣ ಹಂತದಲ್ಲಿದ್ದ ಈ ಕಟ್ಟಡದ ಸಮೀಪ ಮಲಗಿದ್ದರು. ಆದರೆ ಅಲ್ಲಿಯೂ ಜವರಾಯ ಅವರ ಜೀವವನ್ನು ಬಲಿ ಪಡೆದಿದ್ದಾನೆ!
ಘಟನೆಗೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಮುಖ್ಯಮಂತ್ರಿ ವಿಷಾದಿಸಿದ್ದು, ಮೃತಪಟ್ಟವರ ಕುಟುಂಬಗಳಿಗೆ ತಲಾ 4 ಲಕ್ಷ ರೂ. ಹಾಗೂ ಗಾಯಗೊಂಡವರಿಗೆ ತಲಾ 2 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದಾರೆ. ಅಗತ್ಯವಿರುವ ಎಲ್ಲ ವ್ಯವಸ್ಥೆಗಳನ್ನು ಮಾಡಿಕೊಡುವುದಾಗಿ ಭರವಸೆ ನೀಡಿದ್ದಾರೆ. ಕಟ್ಟಡದ ಅವಶೇಷಗಳಡಿ ಸಿಲುಕಿರುವ ಜನರ ರಕ್ಷಣೆಗೆ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುವಂತೆಯೂ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ. (ಏಜೆನ್ಸೀಸ್)