ಪ್ರೀತಿಯಲ್ಲಿ ಸಿಲುಕಿಬಿಟ್ಟ ಅಣ್ಣ-ತಂಗಿ! ಮುಂದಿನ ಜನ್ಮದಲ್ಲಿ ಪ್ರೇಮಿಗಳಾಗೋಣ ಎಂದು ಬರೆದಿಟ್ಟು ಆತ್ಮಹತ್ಯೆ

hanging
Published on

ಪಟ್ನಾ: ಪ್ರೀತಿ ಹೇಗೆ, ಯಾವಾಗ, ಎಲ್ಲಿ ಹುಟ್ಟುತ್ತದೆ ಎಂದು ಹೇಳುವುದೇ ಕಷ್ಟ. ಆದರೆ ಸಂಬಂಧದಲ್ಲಿ ಅಣ್ಣ- ತಂಗಿಯಾಗಿರುವವರು ಪ್ರೀತಿಯ ಬಲೆಗೆ ಬಿದ್ದು ಇದೀಗ ಮದುವೆಯಾಗಲಾರದೇ ಆತ್ಮಹತ್ಯೆಯ ಹಾದಿ ತುಳಿದಿರುವ ಘಟನೆ ಬಿಹಾರದ ಬಂಕಾ ಜಿಲ್ಲೆಯಲ್ಲಿ ನಡೆದಿದೆ.

16 ವರ್ಷದ ಬಾಲಕಿ ಮತ್ತು ಆಕೆಯ ಸೋದರಸಂಬಂಧಿ ಆಗಿರುವ 18 ವರ್ಷದ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರು ಸಂಬಂಧದಲ್ಲಿ ಅಣ್ಣ-ತಂಗಿಯಾಗಬೇಕಿರುವ ಕಾರಣ, ಮನೆಯಲ್ಲಿ ಮದುವೆಗೆ ಒಪ್ಪಿರಲಿಲ್ಲ. ಆದ್ದರಿಂದ ಓಡಿಹೋದ ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೂ ಮುನ್ನ, ಮುಂದಿನ ಜನ್ಮದಲ್ಲಿ ಪ್ರೇಮಿಗಳಾಗೋಣ ಎಂದು ಬರೆದಿಟ್ಟಿದ್ದಾರೆ!

ಇವರಿಬ್ಬರ ಪ್ರೀತಿಯ ಬಗ್ಗೆ ತಿಳಿಯುತ್ತಲೇ ಯುವಕನನ್ನು ಕೋಲ್ಕತಾಕ್ಕೆ ಆರು ತಿಂಗಳ ಹಿಂದೆ ಕಳುಹಿಸಲಾಗಿತ್ತು. ಬಾಲಕಿಯ ಕುಟುಂಬದವರ ಮದುವೆ ಬೇರೆ ಊರಿನಲ್ಲಿ ಇದ್ದ ಕಾರಣ, ಎಲ್ಲರೂ ಅಲ್ಲಿಗೆ ಹೋಗಿದ್ದರು. ಮನೆಯಲ್ಲಿ ಯಾರೂ ಇಲ್ಲದ್ದನ್ನು ತಿಳಿದಿದ್ದ ಯವಕ ಊರಿಗೆ ಬಂದಿದ್ದಾನೆ. ಇಬ್ಬರೂ ಮನೆಬಿಟ್ಟು ಓಡಿಹೋಗಿದ್ದು, ಕಾಡಿನಲ್ಲಿ ಮರವೊಂದಕ್ಕೆ ನೇಣು ಹಾಕಿಕೊಂಡಿದ್ದಾರೆ. ಈ ಜನ್ಮದಲ್ಲಿ ಅಣ್ಣ- ತಂಗಿಯಾಗಿದ್ದೇವೆ. ಮುಂದಿನ ಜನ್ಮದಲ್ಲಿ ಪ್ರೇಮಿಗಳಾಗಿ ಹುಟ್ಟುತ್ತೇವೆ ಎಂದು ಇವರು ಬರೆದಿಟ್ಟಿರುವುದಾಗಿ ಹೇಳಲಾಗಿದೆ.

ಹುಡುಗ ಮತ್ತು ಹುಡುಗಿಯ ಕುಟುಂಬಸ್ಥರು ಪರಸ್ಪರ ದೂರು ದಾಖಲು ಮಾಡಿಲ್ಲ, ಬದಲಿಗೆ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವ ಪ್ರಬುದ್ಧತೆ ಇಲ್ಲದ ಕಾರಣ ಮಕ್ಕಳು ದುಡುಕಿನ ನಿರ್ಧಾರ ಕೈಗೊಂಡಿದ್ದಾರೆ ಎಂದು ಕುಟುಂಬದವರು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net