ಬೇಬಿ ಬಂಪ್‌ ಫೋಟೋಶೂಟ್‌ನಲ್ಲಿ ಮಿಂಚಿದ ಭಾರ್ತಿ ಸಿಂಗ್‌, ಶೀಘ್ರದಲ್ಲಿ ಬರ್ತಿದ್ದಾಳೆ ಮರಿ ಕಾಮಿಡಿಕ್ವೀನ್‌ ಎಂದ ಅಭಿಮಾನಿಗಳು

bharathi
Published on

ಮುಂಬೈ: ಕಾಮಿಡಿಯ ಮೂಲಕ ಜನರ ಮನಸ್ಸು ಗೆದ್ದಿರುವ ನಟಿ ಭಾರ್ತಿ ಸಿಂಗ್‌. ಇವರಿಗೆ ಕಾಮಿಡಿ ಕ್ವೀನ್ ಎಂದೇ ಹೆಸರು. ದಢೂತಿ ದೇಹವನ್ನೇ ತಮ್ಮ ಕಾಮಿಡಿಗೆ ಬಳಸಿಕೊಂಡು, ನೃತ್ಯದಲ್ಲಿಯೂ ಜನರ ಮನಸ್ಸನ್ನು ಸೂರೆಗೊಂಡ ಭಾರ್ತಿ, ಇದೀಗ ತೂಕವನ್ನೂ ಇಳಿಸಿಕೊಂಡು ಅಭಿಮಾನಿಗಳಿಗೆ ಸರ್‌ಪ್ರೈಸ್‌ ನೀಡಿದ್ದರು.

ನಟ ಸುಶಾಂತ್‌ ಸಿಂಗ್‌ ರಜಪೂತ್‌ ಅವರ ಸಾವಿನ ನಂತರ ಭಾರಿ ಸುದ್ದಿ ಮಾಡುತ್ತಿರುವ ಡ್ರಗ್ಸ್‌ ಕೇಸ್‌ನಲ್ಲಿಯೂ ಸಿಲುಕಿ ಕೊನೆಗೆ ಅದರಿಂದ ಮುಕ್ತಿ ಪಡೆದಿರುವ ಭಾರ್ತಿ ಸಿಂಗ್‌ ಹಾಗೂ ಅವರ ಪತಿ ಹರ್ಷ್ ಲಿಂಬಾಚಿಯಾ ಕೆಲ ತಿಂಗಳ ಹಿಂದೆ ಸಂತಸದ ಸುದ್ದಿ ಹಂಚಿಕೊಂಡಿದ್ದರು. ಅದೇನೆಂದರೆ ತಾವು ಚೊಚ್ಚಲ ಮಗುವಿನ ಅಪ್ಪ-ಅಮ್ಮ ಆಗಲಿರುವುದಾಗಿ ಅವರು ಹೇಳಿದ್ದರು.

 ಭಾರತಿ ವಿಭಿನ್ನ ಭಂಗಿಗಳಲ್ಲಿ ಗರ್ಭಧಾರಣೆಯ ಫೋಟೋಶೂಟ್ ಮಾಡಿದ್ದಾರೆ. ಈ ಇತ್ತೀಚಿನ ಫೋಟೋಶೂಟ್‌ನಲ್ಲಿ, ಭಾರತಿ ಸಿಂಗ್ ನೆಲದ ಮೇಲೆ ಪೋಸ್ ನೀಡುತ್ತಿರುವುದನ್ನು ಕಾಣಬಹುದು.

ಇದೀಗ ಭಾರ್ತಿ ಅವರು ಬೇಬಿ ಬಂಪ್​ ಫೋಟೋಶೂಟ್​ ಮಾಡಿಸಿಕೊಂಡಿದ್ದು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ವಿಭಿನ್ನ ಭಂಗಿಗಳಲ್ಲಿ ಪ್ರಗ್ನೆನ್ಸಿಯ ಫೋಟೋಶೂಟ್‌ ಮಾಡಿಕೊಂಡಿದ್ದಾರೆ. ಇಲ್ಲಿಯೂ ಹಾಸ್ಯಪ್ರಜ್ಞೆ ಮರೆದಿರುವ ಅವರು, 'ಆನೆ ವಾಲೇ ಬೇಬಿ ಕಿ ಮಮ್ಮಿ' (ಭವಿಷ್ಯದ ಮಗುವಿನ ತಾಯಿ) ಎಂದು ಶೀರ್ಷಿಕೆ ಕೊಟ್ಟಿದ್ದಾರೆ. ಏಪ್ರಿಲ್ ಅಂತ್ಯ ಅಥವಾ ಮೇ ಆರಂಭದಲ್ಲಿ ತಾಯಿಯಾಗಲಿದ್ದಾರೆ ಎನ್ನಲಾಗಿದೆ.

ನಿಮಗೆ ಹೆಣ್ಣು ಮಗುವೇ ಹುಟ್ಟಲಿದ್ದು, ಆಕೆ ಕೂಡ ಜ್ಯೂನಿಯರ್‌ ಭಾರ್ತಿ ಸಿಂಗ್‌ ಆಗುತ್ತಾಳೆ. ನಿಮ್ಮಂತೆಯೇ ನಗಿಸುವ ಕಾಮಿಡಿ ರಾಜಕುಮಾರಿ ಆಗುತ್ತಾಳೆ ಎಂದು ಅಭಿಮಾನಿಗಳು ಹೇಳಿದ್ದಾರೆ. ಬಾಲಿವುಡ್‌ ಅಂಗಳಕ್ಕೂ ‘ಮರಿ ಕಾಮಿಡಿಕ್ವೀನ್‌’ ಹೆಜ್ಜೆ ಇಡಲಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net