

ಲಖನೌ: ಸ್ವಾತಂತ್ರ್ಯೋತ್ಸವ ಎಂದರೆ ಮಕ್ಕಳಿಗೆ ವಿವಿಧ ಹೋರಾಟಗಾರರ ಪಾತ್ರವನ್ನು ಅಭಿನಯಿಸುವ ತವಕ. ಅದಲ್ಲಿಯೂ ಕ್ರಾಂತಿಕಾರಿ ಭಗತ್ಸಿಂಗ್ನ ಬಲಿದಾನದ ಪಾತ್ರ ಮಾಡುವುದು ಮಕ್ಕಳಿಗೆ ಅಚ್ಚುಮೆಚ್ಚು. ಇದರ ಅಭ್ಯಾಸ ಮಾಡುತ್ತಿರುವ ಬಾಲಕನೋರ್ವ ಪ್ರಾಣ ಕಳೆದುಕೊಂಡಿರುವ ಘಟನೆ ಉತ್ತರಪ್ರದೇಶದ ಬಡೌನ್ ಹಳ್ಳಿಯಲ್ಲಿ ನಡೆದಿದೆ.
ಶಿವಂ ಎಂಬ 10 ವರ್ಷದ ಬಾಲಕ ಮೃತಪಟ್ಟಿದ್ದಾನೆ. ಭಗತ್ ಸಿಂಗ್ ಅವರಿಗೆ ನೇಣು ಹಾಕುವ ದೃಶ್ಯವನ್ನು ಪ್ರಾಕ್ಟೀಸ್ ಮಾಡಲು ಹೋದ ಸಂದರ್ಭದಲ್ಲಿ ಅಕಸ್ಮಾತ್ತಾಗಿ ನೇಣು ಕೊರಳಿಗೆ ಬಿಗಿದು ಉಸಿರುಗಟ್ಟಿ ಬಾಲಕ ಮೃತಪಟ್ಟಿದ್ದಾನೆ.
ನೇಣಿನ ಸೀನ್ ಪ್ರಾಕ್ಟೀಸ್ ವೇಳೆ ಬಾಲಕ ಭಗತ್ ಸಿಂಗ್ ಅವರನ್ನು ಗಲ್ಲಿಗೇರಿಸವ ದೃಶ್ಯವನ್ನು ಅಭ್ಯಾಸ ಮಾಡುತ್ತಿದ್ದ. ಆಗ ಕುತ್ತಿಗೆಗೆ ಕುಣಿಕೆಯನ್ನು ಕಟ್ಟಿಕೊಂಡು ಸ್ಟೂಲ್ ಮೇಲೆ ನಿಂತಿದ್ದ. ಈ ವೇಳೆ ಕಾಲು ಜಾರಿ ಸ್ಟೂಲ್ಕೆಳಗೆ ಬಿದ್ದಿದೆ. ಬಾಲಕ ಪ್ರಾಣ ಕಳೆದುಕೊಂಡಿದ್ದಾನೆ ಎಂದು ಕುಟುಂಬಸ್ಥರು ಹೇಳಿದ್ದಾರೆ.
ಈ ಹಿಂದೆ ಅಂದರೆ 2020ರ ಫೆಬ್ರುವರಿ ತಿಂಗಳಿನಲ್ಲಿ ಕೂಡ ಪ್ರಿಯಾಂಶು ಮಾಲ್ವಿಯಾ ಎಂಬ 12 ವರ್ಷದ ಬಾಲಕ ಇದೇ ರೀತಿ ಭಗತ್ಸಿಂಗ್ ಪಾತ್ರ ಪ್ರಾಕ್ಟೀಸ್ ಮಾಡುವಾಗ ಅಕಸ್ಮಾತ್ತಾಗಿ ಉರುಳಿಗೆ ಕೊರಳೊಡ್ಡಿ ಮೃತಪಟ್ಟಿದ್ದ. ಆದ್ದರಿಂದ ಮಕ್ಕಳು ಈ ರೀತಿಯ ಪಾತ್ರಗಳನ್ನು ಪ್ರಾಕ್ಟೀಸ್ ಮಾಡುವಾಗ ಮಕ್ಕಳು ಎಚ್ಚರದಿಂದ ಇರಲೇಬೇಕು, ಜತೆಗೆ ಪಾಲಕರು ಮಕ್ಕಳ ಮೇಲೆ ನಿಗಾ ವಹಿಸುವುದು ಅಥವಾ ಅವರಿಗೆ ಇಂಥ ಪಾತ್ರ ಮಾಡುವಾಗ ಹೇಗೆಲ್ಲಾ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು ಎಂಬ ಬಗ್ಗೆ ವಿವರಿಸುವುದು ಅಗತ್ಯ ಎನ್ನುತ್ತಾರೆ ಪೊಲೀಸರು.