ಸ್ನೇಹಿತನ ಪೀಸ್ ಪೀಸ್​ ಮಾಡಿ ಎರಡು ಸೂಟ್​ಕೇಸ್​ನಲ್ಲಿ ದೇಹ ತುಂಬಿದ ದಂಪತಿ!

death
Published on

​ರಾಯಗಢ (ಛತ್ತೀಸ್​ಗಢ): ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳವೊಂದು ಕೊಲೆಯಲ್ಲಿ ಅಂತ್ಯಗೊಂಡಿದ್ದು, ಜಗಳವಾಡಿದ ದಂಪತಿ ಸ್ನೇಹಿತನ ಮೃತದೇಹವನ್ನು 12 ತುಂಡು ತುಂಡಾಗಳಾಗಿ ಮಾಡಿ ಸೂಟ್​ಕೇಸ್​ನಲ್ಲಿ ತುಂಬಿ ರೈಲ್ವೆ ನಿಲ್ದಾನದ ಬಳಿ ಎಸೆದಿರುವ ಭಯಾನಕ ಘಟನೆ ರಾಯಗಢದಲ್ಲಿ ನಡೆದಿದೆ.

ಪ್ರಮುಖ ಖಾಸಗಿ ಬ್ಯಾಂಕಿನ 31 ವರ್ಷದ ರಿಲೇಷನ್​ ಮ್ಯಾನೇಜರ್​ ಆಗಿದ್ದ ಸುಲ್ಲಕುಮಾರ್ ಸರ್ನಾಯಕ್ ಅವರು ಕೊಲೆಯಾದವರು. ಈ ಕೊಲೆಯ ಆರೋಪದ ಮೇಲೆ ಚಾರ್ಲ್ಸ್ ನಾಡರ್ (41) ಮತ್ತು ಪತ್ನಿ ಸಲೋಮಿ (31) ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಬ್ಯಾಂಕಿನ ಗ್ರಾಂಟ್ ರೋಡ್ ಶಾಖೆಯಲ್ಲಿ ಕೆಲಸ ಮಾಡುತ್ತಿದ್ದ ಸರ್ನಾಯಕ್ ಡಿಸೆಂಬರ್ 12ರಂದು ವರ್ಲಿಯ ಗಾಂಧಿ ನಗರದಲ್ಲಿರುವ ಮನೆಯಿಂದ ಪಿಕ್​ನಿಕ್​ಗೆ ಹೋದವರು ವಾಪಸ್​ ಆಗಿರಲಿಲ್ಲ. ತನ್ನ ಸಹೋದ್ಯೋಗಿಗಳೊಂದಿಗೆ ಪಿಕ್ನಿಕ್ ಮಾಡಲು ಹೋಗುತ್ತಿದ್ದೇನೆ ಮತ್ತು ಭಾನುವಾರ (ಡಿಸೆಂಬರ್ 13) ಸಂಜೆ ಹಿಂದಿರುಗುವೆ ಎಂದು ತಾಯಿಗೆ ತಿಳಿಸಿ ಅವರು ಹೋಗಿದ್ದರು.

ಆದರೆ ಭಾನುವಾರ ಕಳೆದ ಸೋಮವಾರವಾದಲೂ ಅವರು ಹಿಂದಿರುಗದೇ ಇದ್ದಾಗ ಅವರ ಸಹೋದ್ಯೋಗಿಗಳಿಗೆ ತಾಯಿ ವಿಚಾರಿಸಿದ್ದಾರೆ. ಆದರೆ ಅವರು ತಮಗೆ ಅದರ ಅರಿವಿಲ್ಲ ಎಂದಿದ್ದಾರೆ. ನಂತರ ತಾಯಿ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.

ಪೊಲೀಸರು ಅವರಿಗಾಗಿ ಹುಡುಕಾಟ ನಡೆಸಿದ್ದಾರೆ. ಇದೇ ವೇಳೆ ಸ್ಥಳೀಯ ನಿವಾಸಿಗಳು ಎರಡು ಸೂಟ್‌ಕೇಸ್‌ಗಳನ್ನು ನಿಲ್ದಾಣದ ಬಳಿ ಸಂಶಯಾಸ್ಪದವಾಗಿ ಬಿದ್ದಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು. ನಂತರ ಅದನ್ನು ಬಿಚ್ಚಿ ನೋಡಿದಾಗ ಶವ ಎರಡೂ ಸೂಟ್​ಕೇಸ್​ನಲ್ಲಿ ಪೀಸ್​ ಪೀಸ್​ ಆಗಿರುವುದು ಕಂಡುಬಂದಿದೆ.

ಸುಲ್ಲಕುಮಾರ್ ಅವರ ತಾಯಿಯನ್ನು ಕರೆದು ತೋರಿಸಿದಾಗ ಇದು ತಮ್ಮ ಮಗಂದೇ ಎಂದು ಅವರು ಗುರುತಿಸಿದ್ದಾರೆ. ನಂತರ ಪೊಲೀಸರು ತನಿಖೆ ಕೈಗೊಂಡಾಗ ಶವವನ್ನು ತುಂಬಿದ್ದ ಗೋಣಿಚೀಲದ ಮೇಲಿದ್ದ ಸ್ಟಿಕರ್​ನತ್ತ ಅವರ ಗಮನ ಸೆಳೆದಿದೆ.

ಅದನ್ನೇ ಆಧರಿಸಿಕೊಂಡು ಗೋಣಿಚೀಲ ಮಾರಾಟವಾದ ಅಂಗಡಿಯನ್ನು ಪತ್ತೆ ಮಾಡಿದ್ದಾರೆ. ನಂತರ ಅಂಗಡಿಯಾತ ಅದು ತಮ್ಮದೇ ಚೀಲ ಎಂದು ಗುರುತು ಹಿಡಿದಿದ್ದಾರೆ. ಇದರ ಆಧಾರದ ಮೇಲೆ ಸುತ್ತಲಿನ ಸಿಸಿಟಿವಿಯನ್ನು ಆಧರಿಸಿದ ಪೊಲೀಸರು ಆರೋಪಿ ದಂಪತಿಯನ್ನು ಪತ್ತೆ ಹಚ್ಚಿದ್ದಾರೆ.

ಸುದೀರ್ಘ ವಿಚಾರಣೆ ನಂತರ ದಂಪತಿ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ತಮ್ಮ ಮನೆಗೆ ಬಂದಿದ್ದ ಸಲ್ಲುಕುಮಾರ್​, ನನ್ನ ನಡತೆಯ ಬಗ್ಗೆ ಕೆಟ್ಟದ್ದಾಗಿ ಮಾತನಾಡಿದ್ದ, ಅದಕ್ಕೆ ಸಿಟ್ಟುಬಂದು ಚಾಕುವಿನಿಂದ ಇರಿದೆ. ಆತ ಸತ್ತುಹೋದ. ನಂತರ ಪತ್ನಿಯ ಸಹಾಯದಿಂದ ದೇಹ ತುಂಡರಿಸಿ ಸೂಟ್​ಕೇಸ್​ನಲ್ಲಿ ಹಾಕಿ ಎಸೆದಿರುವುದಾಗಿ ಚಾರ್ಲ್ಸ್ ನಾಡರ್ ಹೇಳಿದ್ದಾನೆ. ಪೊಲೀಸರು ದಂಪತಿಯನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net