ಫೇಸ್​ಬುಕ್​ ರಹಸ್ಯ ಬಯಲುಮಾಡಿದ ಮಾಜಿ ಉದ್ಯೋಗಿ: ಚುನಾವಣೆಯ ಗುಟ್ಟು ಬಹಿರಂಗ

facebook
Published on

ನವದೆಹಲಿ: ಫೇಸ್‌ಬುಕ್‌ನ ಮಾಜಿ ದತ್ತಾಂಶ ವಿಜ್ಞಾನಿ ಸೋಫಿ ಝಾಂಗ್ ಈ ಕುರಿತು ಮಾಹಿತಿ ನೀಡಿದ್ದಾರೆ. ಝಾಂಗ್ ಅವರನ್ನು ಇತ್ತೀಚೆಗಷ್ಟೇ ಫೇಸ್‌ಬುಕ್‌ ಇವರನ್ನು ಕೆಲಸದಿಂದ ವಜಾಗೊಳಿಸಿದೆ. ಈ ಹಿನ್ನೆಲೆಯಲ್ಲಿ ತಮ್ಮ ಕೊನೆಯ ದಿನದಂದು ಸುದೀರ್ಘ ಆಂತರಿಕ ಪತ್ರ ಬರೆದಿದ್ದು, ಅದು ಬಜ್‌ಫೀಡ್ ನ್ಯೂಸ್‌ನಲ್ಲಿ ಪ್ರಕಟವಾಗಿದೆ.

ಇದರಲ್ಲಿ ಪ್ರಮುಖವಾಗಿ ಅವರು ದೆಹಲಿಯ ಚುನಾವಣೆಯ ಬಗ್ಗೆ ವಿವರಣೆ ನೀಡಿದ್ದಾರೆ. ದೆಹಲಿಯ ವಿಧಾನಸಭೆ ಚುನಾವಣೆಯಲ್ಲಿ ಫೇಸ್​ಬುಕ್​ ಹೇಗೆ ಕೆಲಸ ಮಾಡಿತ್ತು ಎಂದು ವಿವರಿಸಿರುವ ಝಾಂಗ್​, ಫೆಬ್ರವರಿ 8ರಂದು ನಡೆದ ದೆಹಲಿ ವಿಧಾನಸಭೆ ಚುನಾವಣೆಯ ಮೇಲೆ ಪ್ರಭಾವ ಬೀರಲು ಅನೇಕ ರೀತಿಯ ಪ್ರಯತ್ನಗಳು ನಡೆದಿವೆ. ಇದಕ್ಕೆ ಸಂಘಟಿತ ಪ್ರಯತ್ನ ಇತ್ತು ಎಂದಿದ್ದಾರೆ.

ಈ ಚುನಾವಣೆಯಲ್ಲಿ ಬೃಹತ್‌ ಜಾಲವೇ ಇತ್ತು. ಸಾವಿರಾರು ನಟರು ಕೂಡ ಇದರಲ್ಲಿ ಭಾಗಿಯಾಗಿದ್ದರು. ಆದರೆ ಫೇಸ್‌ಬುಕ್‌ ಎಂದಿಗೂ ಈ ಜಾಲ ಇರುವ ಬಗ್ಗೆ ಬಹಿರಂಗಪಡಿಸಿಲ್ಲ. ಅಲ್ಲದೇ ಈ ಜಾಲದ ಹಿಂದಿನ ಬಲ ಯಾವುದು ಎಂದೂ ಹೇಳಿಕೊಂಡಿರಲಿಲ್ಲ ಎಂದು ಪತ್ರದಲ್ಲಿ ಅವರು ಉಲ್ಲೇಖಿಸಿದ್ದಾರೆ.

ಈ ಪತ್ರದಲ್ಲಿ ಉಲ್ಲೇಖವಾಗಿರುವ ಮಾಹಿತಿ ನೀಡಿದ ಬಿಜೆಪಿಯ ಐಟಿ ವಿಭಾಗದ ಮುಖ್ಯಸ್ಥ ಅಮಿತ್‌ ಮಾಳವಿಯಾ, ದೆಹಲಿ ಚುನಾವಣೆಯಲ್ಲಿ ಆಮ್‌ ಆದ್ಮಿ ಪಕ್ಷದ ಜಯಕ್ಕಾಗಿ ಈ ಜಾಲ ನಿರಂತರ ಪ್ರಯತ್ನ ಮಾಡಿತ್ತು ಎಂದು ತಿಳಿಸಿದ್ದಾರೆ. ಆದರೆ ಇವೆಲ್ಲಾ ಸುಳ್ಳು ಎಂದಿದ್ದಾರೆ ಆಮ್‌ ಆದ್ಮಿ ಪಕ್ಷದ ಐಟಿ ಘಟಕದ ಮುಖ್ಯಸ್ಥ ಅಂಕಿತ್ ಲಾಸ್‌. 'ಫೇಸ್‌ಬುಕ್‌ ಎಂದಿಗೂ ಬಿಜೆಪಿಯ ಪರವಾಗಿ ಇರುತ್ತದೆ ಎಂಬುದು ಬಹಿರಂಗ ಸತ್ಯವಾಗಿದೆ. ಬಿಜೆಪಿ ಬಲಿಷ್ಠವಾಗಿದೆ. ಒಂದು ವೇಳೆ ಬಿಜೆಪಿ ಬಲವಾಗಿದೆ ಎಂದಾದರೆ ಅದರ ವಿರುದ್ಧ ಹೋರಾಡಲು ಸಂಘಟನೆಯ ಶಕ್ತಿ ಅನಿವಾರ್ಯ. ಆದರೆ ಫೇಸ್‌ಬುಕ್‌ ಜತೆ ನಾವು ಕೈ ಜೊಡಿಸಿದ್ದೇವೆ ಎಂಬುದು ಮಾತ್ರ ಸುಳ್ಳು' ಎಂದು ಹೇಳಿದ್ದಾರೆ.

ಸಾರ್ವಜನಿಕ ಅಭಿಪ್ರಾಯದ ಮೇಲೆ ಪ್ರಭಾವ ಬೀರುವಲ್ಲಿ ಮತ್ತು ಚುನಾವಣೆ ದಿಕ್ಕನ್ನು ಬದಲಿಸುವುದರಲ್ಲಿ ಫೇಸ್‌ಬುಕ್​ನ್ನು ಹೇಗೆ ಬಳಸಿಕೊಳ್ಳಲಾಗಿತ್ತು, ಭಾರತ ಸೇರಿದಂತೆ ಜಗತ್ತಿನಾದ್ಯಂತ ಚುನಾವಣೆಗಳ ಮೇಲೆ ಪ್ರಭಾವ ಬೀರುವ ನಕಲಿ ಖಾತೆಗಳನ್ನು ನಿಭಾಯಿಸುವ ನಿಟ್ಟಿನಲ್ಲಿ ಫೇಸ್‌ಬುಕ್ ಹೇಗೆ ನಿರ್ಲಕ್ಷ್ಯ ವಹಿಸಿದೆ ಎಂಬ ಬಗ್ಗೆಯೂ ಝಾಂಗ್​ ತಮ್ಮ 6,600 ಪದಗಳ ಈ ಪತ್ರದಲ್ಲಿ ವಿವರಿಸಿದ್ದಾರೆ.

ವಿದೇಶಿ ಸರ್ಕಾರಗಳು ನಮ್ಮ ವೇದಿಕೆಯನ್ನು ದುರ್ಬಳಕೆ ಮಾಡಿಕೊಳ್ಳಲು ಮತ್ತು ತಮ್ಮದೇ ನಾಗರಿಕರನ್ನು ದೊಡ್ಡ ಪ್ರಮಾಣದಲ್ಲಿ ದಾರಿ ತಪ್ಪಿಸುವ ಅನೇಕ ಪ್ರಯತ್ನಗಳನ್ನು ಮಾಡಿದ್ದಾರೆ. ಫೇಸ್​ಬುಕ್​ನಲ್ಲಿ ನನ್ನ ಮೂರು ವರ್ಷಗಳ ಅನುಭವದಲ್ಲಿ ಇದನ್ನು ನಾನು ಕಂಡಿದ್ದೇನೆ. ನಾನೇ ಖುದ್ದಾಗಿ ಯಾವುದೇ ದೂರದೃಷ್ಟಿಯಿಲ್ಲದೆ ರಾಷ್ಟ್ರಗಳ ಅಧ್ಯಕ್ಷರಿಗೆ ತೊಂದರೆಯುಂಟುಮಾಡುವ ನಿರ್ಧಾರಗಳನ್ನು ತೆಗೆದುಕೊಂಡಿದ್ದೇನೆ. ಹಾಗೆಯೇ ಲೆಕ್ಕವಿಲ್ಲದಷ್ಟು ಪ್ರತಿಷ್ಠಿತ ಜಾಗತಿಕ ರಾಜಕೀಯ ಪಕ್ಷಗಳ ವಿರುದ್ಧ ನಿರ್ಬಂಧ ಹೇರುವ ಕ್ರಮಗಳನ್ನು ಅನುಸರಿಸಿದ್ದೇನೆ ಎಂದು ಝಾಂಗ್​ ಹೇಳಿದ್ದಾರೆ.

ಈ ಪತ್ರಕ್ಕೆ ಪ್ರತಿಕ್ರಿಯಿಸಿರುವ ಫೇಸ್‌ಬುಕ್ ವಕ್ತಾರ ಲಿಜ್ ಬೌರ್ಗೊಯಿಸ್, 'ನಾವು ನಮ್ಮ ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಳ್ಳುವುದನ್ನು ತಡೆಯಲು ವಿಶೇಷ ಪರಿಣತರ ತಂಡವನ್ನು ಕಟ್ಟಿದ್ದೇವೆ. ಮುಂಚೂಣಿ ತಜ್ಞರ ಜತೆ ಕೆಲಸ ಮಾಡುತ್ತಿದ್ದೇವೆ. ಅನುಚಿತ ವರ್ತನೆಗಳಲ್ಲಿ ತೊಡಗಿದ್ದ 100ಕ್ಕೂ ಹೆಚ್ಚು ಜಾಲಗಳನ್ನು ತೆಗೆದುಹಾಕಿದ್ದೇವೆ' ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net