

ಮುಂಬೈ: ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಕೊನೆಗೂ ಬಚಾವ್ ಆಗಿದ್ದಾನೆ. ಕಳೆದ ಅಕ್ಟೋಬರ್ 30ರಂದು ಹಡಗಿನಲ್ಲಿ ಪಾರ್ಟಿ ಮಾಡುವ ಸಮಯದಲ್ಲಿ ಸಿಕ್ಕಿಬಿದ್ದು ಒದ್ದಾಡುತ್ತಿದ್ದ ಆರ್ಯನ್ಗೆ ವಿಶೇಷ ತನಿಖಾಧಿಕಾರಿಗಳು ಕ್ಲೀನ್ಚಿಟ್ ನೀಡಿದ್ದು, ಈ ಸಮಯದಲ್ಲಿ ಆರ್ಯನ್ ಖಾನ್ ಬಳಿ ಡ್ರಗ್ಸ್ ಇರುವುದಕ್ಕೆ ಸಾಕ್ಷ್ಯಾಧಾರ ಸಿಕ್ಕಿಲ್ಲ ಎಂದಿದ್ದಾರೆ. ಆರ್ಯನ್ ಖಾನ್ ಬಗ್ಗೆ ಯಾವುದೇ ಪುರಾವೆಗಳಿಲ್ಲ ಮತ್ತು ರಿಕವರಿ ಮಾಡಲಾದ ವಸ್ತುಗಳಲ್ಲಿ ಡ್ರಗ್ಸ್ ಕಂಡು ಬಂದಿಲ್ಲ ಎಂದು ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಲಾಗಿದೆ. 22 ದಿನ ಜೈಲು ಶಿಕ್ಷೆಯನ್ನು ಅನುಭವಿಸಿದ್ದ ಆರ್ಯನ್ ಖಾನ್ ಕೊನೆಗೂ ನೆಮ್ಮದಿಯಿಂದ ಉಸಿರುಬಿಡುವಂತಾಗಿದೆ.
ಈ ಮಧ್ಯೆಯೇ, ವಿಚಾರಣೆ ವೇಳೆ ಆರ್ಯನ್ ಖಾನ್, ತಾನು ಡ್ರಗ್ಸ್ ಸೇವನೆ ಮಾಡುತ್ತಿದ್ದುದು ನಿಜ ಎಂದು ಒಪ್ಪಿಕೊಂಡಿದ್ದಾನೆ. ಅಮೆರಿಕದಲ್ಲಿ ಪದವಿ ಕಲಿಯುತ್ತಿದ್ದ ವೇಳೆ ತಾನು ಗಾಂಜಾ ಸೇವಿಸುತ್ತಿದ್ದೆ ಎಂದು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಮುಂದೆ ಹೇಳಿಕೆ ನೀಡಿದ್ದಾರೆ. ತನಗೆ ಆ ಸಮಯದಲ್ಲಿ ನಿದ್ದೆ ಬರುತ್ತಿರಲಿಲ್ಲ. ಇಂಟರ್ನೆಟ್ನಲ್ಲಿ ಈ ಬಗ್ಗೆ ಹುಡುಕಿದಾಗ ಗಾಂಜಾ ಸೇವನೆ ಮಾಡಬೇಕು ಎಂಬ ಮಾಹಿತಿ ಸಿಕ್ಕಿತು. ಅದಕ್ಕಾಗಿ ನಾನು ಸೇವಿಸುತ್ತಿದ್ದೆ ಎಂದು ಹೇಳಿದ್ದಾನೆ.
ಆರ್ಯನ್ ಖಾನ್ ತನ್ನ ಸ್ನೇಹಿತೆ ಅನನ್ಯ ಪಾಂಡೆಯ ಜತೆ ಪಾರ್ಟಿಗೂ ಮೊದಲು ಕೊಕೇನ್ ಪ್ಲ್ಯಾನ್ ಮಾಡಿದ್ದ ವಾಟ್ಸ್ಆ್ಯಪ್ ಸಂದೇಶ ಸಿಕ್ಕಿತ್ತು. ಇದರ ಜತೆಗೆ ಗಾಂಜಾ ಬಗ್ಗೆಯೂ ಅದರಲ್ಲಿ ಉಲ್ಲೇಖ ಮಾಡಲಾಗಿತ್ತು. ಇದಕ್ಕೆ ಉತ್ತರಿಸಿರುವ ಆರ್ಯನ್, ಈ ಮೆಸೇಜ್ ಮಾಡಿದ್ದು ನಾನೇ. ಆದರೆ ಅವೆಲ್ಲಾ ತಮಾಷೆಗೆ ಮಾಡಿರುವ ಮೆಸೇಜ್ಗಳಷ್ಟೇ. ನಾವೇನೂ ಪಾರ್ಟಿಯಲ್ಲಿ ಡ್ರಗ್ಸ್ ಸೇವನೆ ಮಾಡುತ್ತಿರಲಿಲ್ಲ ಎಂದಿದ್ದಾನೆ.
ಮುಂಬೈನಿಂದ ಒಬ್ಬ ಡೀಲರ್ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ ಬಗ್ಗೆ ಈ ಹಿಂದೆ ಆರ್ಯನ್ ಬಾಯಿಬಿಟ್ಟಿದ್ದ. ಡ್ರಗ್ಸ್ ಪೂರೈಕೆ ಮಾಡುತ್ತಿದ್ದುದು ನಿಜ. ಆದರೆ ಆತನ ಹೆಸರು ಹಾಗೂ ಮಾಹಿತಿ ಗೊತ್ತಿಲ್ಲ ಎಂದು ತಿಳಿಸಿದ್ದಾನೆ. ಅದೇನೇ ಆದರೂ ಅಧಿಕಾರಿಗಳು ಇದೀಗ ಕ್ಲೀನ್ಚಿಟ್ ಕೊಟ್ಟಿದ್ದರಿಂದ ಶಾರುಖ್ ಪುತ್ರ ನೆಮ್ಮದಿಯಿಂದ ಇದ್ದಾನೆ.