ಬಿಜೆಪಿಯ ಸಚಿವ ಸ್ಥಾನ ತೊರೆಯುತ್ತಲೇ ಗ್ರಹಚಾರ! ಸ್ವಾಮಿ ಪ್ರಸಾದ್‌ಗೆ ಕೋರ್ಟ್‌ನಿಂದ ಅರೆಸ್ಟ್‌ ವಾರೆಂಟ್‌

mourya
Published on

ಲಖನೌ: ಉತ್ತರ ಪ್ರದೇಶ ಚುನಾವಣೆ ಬೆನ್ನಲ್ಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಸಚಿವ ಸ್ವಾಮಿ ಪ್ರಸಾದ್‌ ಮೌರ್ಯ ಅವರಿಗೆ ದೊಡ್ಡ ಶಾಕ್‌ ಎದುರಾಗಿದೆ. ಇವರಿಗೆ ಕೋರ್ಟ್‌ನಿಂದ ಅರೆಸ್ಟ್‌ ವಾರೆಂಟ್‌ ಜಾರಿಯಾಗಿದೆ!

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಆಪ್ತರೆಂದೇ ಗುರುತಿಸಿಕೊಂಡಿದ್ದ ಮೌರ್ಯ ಸೇರಿದಂತೆ ಶಾಸಕರಾಗಿರುವ ರೋಷನ್‌ ಲಾ ವರ್ಮಾ, ಬ್ರಿಜೇಶ್‌ ಪ್ರಜಾಪತಿ, ಭಾಗ್ವತಿ ಸಾಗರ್‌, ವಿನಯ್‌ ಶಂಕ್ಯಾ ರಾಜೀನಾಮೆ ನೀಡಿದ್ದಾರೆ. ಭಿನ್ನ ಸಿದ್ಧಾಂತಗಳ ನಡುವೆಯೂ ಯೋಗಿ ಆದಿತ್ಯನಾಥ್‌ ಸಂಪುಟದಲ್ಲಿ ನಾನು ಸಮರ್ಪಣಾ ಮನೋಭಾವದಿಂದ ಕೆಲಸ ಮಾಡಿದ್ದೇನೆ. ಆದರೆ ದಲಿತರು, ಒಬಿಸಿಗಳು, ರೈತರು, ನಿರುದ್ಯೋಗಿಗಳು ಮತ್ತು ಸಣ್ಣ ಉದ್ಯಮಿಗಳ ಮೇಲೆ ಆಗುತ್ತಿರುವ ತೀವ್ರ ದಬ್ಬಾಳಿಕೆಯಿಂದ ನಾನು ನೊಂದಿದ್ದೇನೆ. ಆದ್ದರಿಂದ ಅನಿವಾರ್ಯವಾಗಿ ರಾಜೀನಾಮೆ ನೀಡುತ್ತಿದ್ದೇನೆ’ ಎಂದಿದ್ದಾರೆ. ನಾನು ಬಿಜೆಪಿ ತೊರೆದ ಮೇಲೆ ಆ ಪಕ್ಷಕ್ಕೆ ಎಂಥ ಪರಿಣಾಮ ಬೀರುತ್ತದೆ ಎಂಬುದು ಬರುವ ವಿಧಾನಸಭಾ ಚುನಾವಣೆಯಲ್ಲಿಯೇ ತಿಳಿದುಬರಲಿದೆ ಎಂದೂ ಹೇಳಿದ್ದರು.

ಅತ್ತ ರಾಜೀನಾಮೆ ನೀಡುತ್ತಿದ್ದಂತೇ ಇತ್ತ ಅವರಿಗೆ ಎಂಪಿ,ಎಂಎಲ್‌ಎಗಳ ವಿಶೇಷ ಕೋರ್ಟ್‌ನಿಂದ ಅರೆಸ್ಟ್‌ ವಾರೆಂಟ್‌ ಜಾರಿಯಾಗಿದೆ. ಇದಕ್ಕೆ ಕಾರಣ, 2014ರ ಪ್ರಕರಣ. ಸದ್ಯ ಬಿಜೆಪಿ ತೊರೆದು ಸಮಾಜವಾದಿ ಪಕ್ಷವನ್ನು ಸೇರ್ಪಡೆಗೊಳ್ಳಲಿರುವ ಮೌರ್ಯ ಅವರು, ಬಿಜೆಪಿಗೆ ಬರುವುದಕ್ಕೂ ಮುನ್ನ 2016ರವರೆಗೆ ಬಿಎಸ್‌ಪಿಯಲ್ಲಿಯೇ ಇದ್ದರು. 2014ರಲ್ಲಿ ಬಿಎಸ್‌ಪಿಯಲ್ಲಿ ಇದ್ದ ಸಂದರ್ಭದಲ್ಲಿ ಹಿಂದೂ ದೇವರ ಬಗ್ಗೆ ಅವಹೇಳನಕಾರಿ ಭಾಷಣ ಮಾಡಿರುವುದಕ್ಕೆ ಸಂಬಂಧಿಸಿದಂತೆ ಅವರ ವಿರುದ್ಧ ಕೇಸೊಂದು ದಾಖಲಾಗಿತ್ತು. ಅದು ವಿಶೇಷ ಕೋರ್ಟ್‌ನಲ್ಲಿ ಇನ್ನೂ ಇತ್ಯರ್ಥವಾಗದೇ ಬಾಕಿ ಉಳಿದುಕೊಂಡಿತ್ತು.

ಇದೀಗ ರಾಜೀನಾಮೆ ಘೋಷಿಸಿದ ತಕ್ಷಣವೇ ಈ ಕೇಸ್‌ಗೆ ಚಾಲನೆ ಸಿಕ್ಕಿದ್ದು, ಅವರಿಗೆ ಬಂಧನಕ್ಕೆ ಕೋರ್ಟ್‌ ಆದೇಶಿಸಿದೆ. ಇದಕ್ಕೆ ಕಾರಣ ಈ ಹಿಂದೆ ವಿಚಾರಣೆ ವೇಳೆ ಇವರಿಗೆ ಕೋರ್ಟ್‌ನಿಂದ ಹಲವಾರು ಬಾರಿ ಸಮನ್ಸ್‌ ಜಾರಿಯಾಗಿತ್ತು. ಇದರ ಹೊರತಾಗಿಯೂ ಅವರು ಕೋರ್ಟ್‌ಗೆ ಹಾಜರು ಆಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಕಾನೂನಿನ ಅನ್ವಯ ಬಂಧನ ವಾರೆಂಟ್‌ ಜಾರಿಗೊಳಿಸಲಾಗಿದೆ.

ಈ ಬಗ್ಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಮೌರ್ಯ ಅವರು, ‘ಇದು ಇನ್ನೂ ಆರಂಭವಷ್ಟೇ. ಮುಂದೆ ಇನ್ನೂ ಏನೇನೋ ನೋಡಬೇಕಿದೆ’ ಎಂದು ವ್ಯಂಗ್ಯವಾಡಿದ್ದಾರೆ.

ಮೌರ್ಯ ಅವರು ಕುಶಿನಗರದ ಪದ್ರೌನಾ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿದ್ದಾರೆ. ಅವರ ಪುತ್ರಿ ಸಂಘಮಿತ್ರ ಮೌರ್ಯ ಬದೌನ್ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಸಂಸದರಾಗಿದ್ದಾರೆ. ಸ್ವಾಮಿ ಪ್ರಸಾದ್ ಮೌರ್ಯ ಅವರು ತಮ್ಮ ಪುತ್ರ ಅಶೋಕ್‌ಗೆ ವಿಧಾನಸಭೆ ಚುನಾವಣೆಗೆ ಟಿಕೆಟ್ ಕೇಳುತ್ತಿದ್ದರು. ಆದರೆ ಸ್ವಾಮಿ ಪ್ರಸಾದ್ ಮೌರ್ಯ ಅವರ ಬೇಡಿಕೆಯನ್ನು ಒಪ್ಪಿಕೊಳ್ಳಲು ಬಿಜೆಪಿ ಒಲವು ತೋರಲಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net