ವಿಧಾನಸಭೆಯಿಂದ ಅರ್ನಬ್‌ ಗೋಸ್ವಾಮಿಗೆ ಹಕ್ಕುಚ್ಯುತಿ ನೋಟಿಸ್‌: 'ಸುಪ್ರೀಂ' ಅಸಮಾಧಾನ

arnab-SC
Published on

ನವದೆಹಲಿ: ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ಪ್ರಕರಣದ ಚರ್ಚೆಗಳಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ಕೆಲವು ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ರಿಪಬ್ಲಿಕ್ ಟಿವಿ ಮುಖ್ಯ ಸಂಪಾದಕ ಅರ್ನಬ್ ಗೋಸ್ವಾಮಿ ಅವರಿಗೆ ನೀಡಿರುವ ಹಕ್ಕುಚ್ಯುತಿ ನೋಟಿಸ್‌ಗೆ ಸುಪ್ರೀಂಕೋರ್ಟ್‌ ಅಸಮಾಧಾನ ವ್ಯಕ್ತಪಡಿಸಿದೆ.

ಈ ನೋಟಿಸ್‌ ಪ್ರಶ್ನಿಸಿ ಅರ್ನಬ್‌ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸದ ಸುಪ್ರೀಂಕೋರ್ಟ್‌, ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ವಿಧಾನಸಭಾ ಕಾರ್ಯದರ್ಶಿಯವರಿಗೆ ನೋಟಿಸ್‌ ಜಾರಿಗೆ ಆದೇಶಿಸಿದೆ.

"ಈ ಹಕ್ಕುಚ್ಯುತಿ ನೋಟಿಸ್‌ ಕೊಟ್ಟವರ ಬಗ್ಗೆ ನಮಗೆ ಗಂಭೀರ ಪ್ರಶ್ನೆ ಇದೆ, ಈ ಪ್ರಶ್ನೆಯನ್ನು ಕಡೆಗಣಿಸುವುದು ನಮಗೆ ಅಸಾಧ್ಯವಾಗಿದೆ. ಆದ್ದರಿಂದ ಈ ಬಗ್ಗೆ ನಮಗೆ ಸ್ಪಷ್ಟ ಕಾರಣ ಬೇಕಿದೆ ಎಂದು ಮುಖ್ಯ ನ್ಯಾಯಮೂರ್ತಿ ಎಸ್‌ಎ ಬೊಬ್ಡೆ ನೇತೃತ್ವದ ಪೀಠ ಅಭಿಪ್ರಾಯ ಪಟ್ಟಿದೆ.

ನಾಗರಿಕರು ತಮ್ಮ ಹಕ್ಕುಗಳನ್ನು ಚಲಾಯಿಸುವುದನ್ನು ತಡೆಯುವ ಇಂತಹ ಪ್ರಯತ್ನಗಳು ನಡೆಯುತ್ತಿರುವುದು ನ್ಯಾಯಯುತ ಆಡಳಿತ ವ್ಯವಸ್ಥೆಯಲ್ಲಿ ಗಂಭೀರ ಹಸ್ತಕ್ಷೇಪಕ್ಕೆ ಕಾರಣವಾಗುತ್ತವೆ ಎಂದ ನ್ಯಾಯಮೂರ್ತಿಗಳು, ಈ ನೋಟಿಸ್‌ ಉದ್ದೇಶ ಅರ್ಜಿದಾರರನ್ನು ಬೆದರಿಸುವಂತಿದೆ. ಅವರಿಗೆ ಕೋರ್ಟಿಗೆ ಹೋದರೆ ದಂಡ ಹಾಕುವುದಾಗಿ ಬೆದರಿಕೆ ಹಾಕಲಾಗಿದೆ. ಇದು ನಮ್ಮ ಸಂವಿಧಾನದ ಪ್ರಕಾರ ತಪ್ಪು. ವ್ಯಕ್ತಿಯ ಮೂಲಭೂತ ಹಕ್ಕನ್ನು ಕಸಿದುಕೊಂಡಂತೆ ಎಂದಿದೆ ಪೀಠ.

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಜೂನ್ 14ರಂದು ಮುಂಬೈನ ಉಪನಗರ ಬಾಂದ್ರಾದಲ್ಲಿರುವ ತನ್ನ ಅಪಾರ್ಟ್ ಮೆಂಟ್ ನಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದರು. ಈ ಬಗ್ಗೆ ಸಿಬಿಐ ತನಿಖೆ ನಡೆಸುತ್ತಿದೆ. ಆದರೆ ಗೋಸ್ವಾಮಿಯವರು ಈ ಬಗ್ಗೆ ಮಹಾರಾಷ್ಟ್ರ ಸರ್ಕಾರವನ್ನು ಟೀಕಿಸಿದ್ದರು.

ಈ ಹಿನ್ನೆಲೆಯಲ್ಲಿ, ಅಕ್ಟೋಬರ್ 13 ರಂದು ಗೋಸ್ವಾಮಿಯವರಿಗೆ ಮಹಾರಾಷ್ಟ್ರ ವಿಧಾನಸಭೆ ಕಾರ್ಯದರ್ಶಿ ಹಕ್ಕುಚ್ಯುತಿ ನೋಟಿಸ್‌ ಜಾರಿಗೊಳಿಸಿದ್ದಾರೆ.

2018ರಲ್ಲಿ ಇಂಟೀರಿಯರ್ ಡಿಸೈನರ್ ಆತ್ಮಹತ್ಯೆಗೆ ಪ್ರೇರಣೆ ನೀಡಿದ್ದಾರೆಂಬ ಆರೋಪದ ಹಿನ್ನೆಲೆ ಈಗಾಗಲೇ ಅರ್ನಬ್‌ ಬಂಧನಕ್ಕೊಳಗಾಗಿದ್ದಾರೆ. ಸದ್ಯ 14 ದಿನಗಳ ನ್ಯಾಯಾಂಗ ಬಂಧನದಲ್ಲಿ ಇದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net