

ಮುಂಬೈ: ದೇಶದಲ್ಲಿ ಮಾತ್ರವಲ್ಲದೇ ವಿದೇಶದಲ್ಲಿಯೂ ಭಾರಿ ಕೋಲಾಹಲ ಸೃಷ್ಟಿಸಿರುವ ಚಿತ್ರ 'ದಿ ಕಶ್ಮೀರ್ ಫೈಲ್ಸ್'. 1990ರ ಕಾಶ್ಮೀರಿ ಕಣಿವೆಯಲ್ಲಿ ಕಾಶ್ಮೀರಿ ಪಂಡಿತರ ಮೇಲೆ ಆಗಿರುವ ಘೋರ ಅನ್ಯಾಯ, ಹತ್ಯಾಕಾಂಡದ ಸತ್ಯವನ್ನು, ಇಲ್ಲಿಯವರೆಗೆ ಜನರ ಮುಂದೆ ಬಾರದಿದ್ದ ನೈಜ ಘಟನೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಈ ಚಿತ್ರ ಒಂದು ವರ್ಗವನ್ನಂತೂ ಅಕ್ಷರಶಃ ಬೆವರಿಳಿಸಿರುವುದು ನಿಜ. ಈ ಚಿತ್ರದ ಬಿಡುಗಡೆಗೆ ವಿರೋಧ ವ್ಯಕ್ತಪಡಿಸಿದವರಿಗೆ ಕೊನೆಗೂ ಸೋಲುಂಟಾಗಿ ಜನಸಾಮಾನ್ಯರ ಮುಂದೆ ಭಯಾನಕ ಸತ್ಯವನ್ನು ಹೊರಗೆಡವಿದ ಈ ಚಿತ್ರದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ.
'ದಿ ಕಶ್ಮೀರ್ ಫೈಲ್ಸ್' ಇಂದಿಗೂ ಕೆಲವರಿಗೆ ಸಹಿಸಿಕೊಳ್ಳಲು ಆಗದ ಚಿತ್ರ. ಹಲವು ರಾಜ್ಯಗಳು ಈ ಚಿತ್ರಕ್ಕೆ ತೆರಿಗೆ ವಿನಾಯತಿ ಘೋಷಣೆ ಮಾಡಿ, ಜನರೂ ನೋಡುವಂತೆ ಮಾಡಿದರು. ಹೀಗಾಗಿ ದೇಶದಲ್ಲಿ ಮಾತ್ರವಲ್ಲ, ವಿದೇಶದಲ್ಲೂ ಈ ಸಿನಿಮಾ ರಿಲೀಸ್ ಆಗಿ ಹಂಗಾಮಾ ಸೃಷ್ಟಿಸಿದೆ.
ಇದರಲ್ಲಿ ತೋರಿಸಿರುವ ಸತ್ಯವನ್ನು ಅರಗಿಸಿಕೊಳ್ಳಲು ಆಗದ ಒಂದು ವರ್ಗ ಇಂದಿಗೂ ವಿರೋಧ ವ್ಯಕ್ತಪಡಿಸುತ್ತಲೇ ಇದೆ. ಅದೆಷ್ಟರ ಮಟ್ಟಿಗೆ ಎಂದರೆ, ಸಿಂಗಪುರ ಸೇರಿದಂತೆ ಕೆಲ ದೇಶಗಳಲ್ಲಿ ಈ ಸಿನಿಮಾವನ್ನು ತಮ್ಮ ದೇಶದಲ್ಲಿ ರಿಲೀಸ್ ಮಾಡದಂತೆ ನಿರ್ಬಂಧ ಹೇರಿದವು. ಅಲ್ಲದೇ, ವಿವೇಕ್ ಅಗ್ನಿಹೋತ್ರಿ ಅವರ ಭಾಷಣಕ್ಕೂ ಅಡೆತಡೆ ಮಾಡಲಾಯಿತು. ಆದರೆ ಎಲ್ಲಾ ವಿರೋಧ, ವಿರೋಧಿಗಳನ್ನು ಹಿಮ್ಮೆಟ್ಟಿಸಿ ಬಾಕ್ಸ್ ಆಫೀಸ್ನಲ್ಲಿಯೇ ಧೂಳೆಬ್ಬಿಸಿರುವ ದಿ ಕಶ್ಮೀರಿ ಫೈಲ್ಸ್ನ ಭಾಗ ಎರಡು ತೆರೆಯ ಮೇಲೆ ಬರಲಿದೆಯೇ ಎಂಬ ನಿರೀಕ್ಷೆಯಲ್ಲಿ ಹಲವರಿದ್ದಾರೆ. ಸಿನಿಮಾ ರಂಗದಲ್ಲಿನ ಅನೇಕ ದಾಖಲೆಗಳನ್ನು ಮುರಿದು ಭರ್ಜರಿ ಯಶಸ್ಸನ್ನು ಕಂಡ ಈ ಚಿತ್ರದ ಪಾರ್ಟ್-2 ಯಾವಾಗ ಎಂದು ಜನರು ಪ್ರಶ್ನೆ ಕೇಳುತ್ತಿದ್ದಾರೆ.
ಅಂಥವರಿಗೆ ಇದೀಗ ಉತ್ತರಿಸಿದ್ದಾರೆ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ. ಪಾರ್ಟ್-2 ಬರಲಿದೆಯಾ ಎಂದ ಪ್ರಶ್ನೆಗೆ ಉತ್ತರಿಸಿರುವ ಅವರು, ಸದ್ಯ ದಿ ಡೆಲ್ಲಿ ಫೈಲ್ಸ್ ಸಿನಿಮಾ ಮಾಡುತ್ತಿದ್ದೇನೆ. ಇದರಲ್ಲಿಯೂ ಹತ್ಯಾಕಾಂಡವೇ ಪ್ರಧಾನ ಕಥೆಯಾಗಿ ಮೂಡಿ ಬರಲಿದೆ. ಇದೊಂದು ರೀತಿಯಲ್ಲಿ ದಿ ಕಶ್ಮೀರ್ ಫೈಲ್ಸ್ನ ಮುಂದುವರೆದಿರುವ ಭಾಗವೇ ಅಂದುಕೊಳ್ಳಬಹುದು ಎಂದಿದ್ದಾರೆ.
ಇದರಿಂದಾಗಿ ಈ ಚಿತ್ರದಲ್ಲಿ ಏನಿರಬಹುದು ಎಂಬ ಕುತೂಹಲ ಹಲವರಲ್ಲಿ ಮನೆ ಮಾಡಿದ್ದರೆ, ಇದಕ್ಕಿನ್ನೆಷ್ಟು ಮಂದಿ ವಿರೋಧ ವ್ಯಕ್ತಪಡಿಸಬಹುದು ಎಂಬುದು ಕುತೂಹಲದ ವಿಷಯವೇ ಆಗಿದೆ.
ಅಂದಹಾಗೆ , ದಿಲ್ಲಿ ಫೈಲ್ಸ್ 1984 ರ ಕರಾಳ ದಿನಗಳನ್ನು ತೋರಿಸುತ್ತದೆ. ಇದು ಭಾರತದ ಇತಿಹಾಸದಲ್ಲಿ ಕರಾಳ ಅಧ್ಯಾಯವಾಗಿದೆ. ಪಂಜಾಬ್‌ನಾದ್ಯಂತ ಉಗ್ರಗಾಮಿ ಪರಿಸ್ಥಿತಿಯನ್ನು ನಿಭಾಯಿಸಿದ ರೀತಿ ಅಮಾನವೀಯವಾಗಿದ್ದು ಅದನ್ನು ಇದರಲ್ಲಿ ಚಿತ್ರಿಸಲಾಗುತ್ತಿದೆ. ಪಂಜಾಬ್ನಲ್ಲಿ ಕಾಂಗ್ರೆಸ್ ವೋಟ್ಬ್ಯಾಂಕ್ಗಾಗಿ ಹೇಗೆ ಭಯೋತ್ಪಾದನೆಯನ್ನು ಪ್ರೋತ್ಸಾಹಿಸಿತು, ಭಯೋತ್ಪಾದನೆಯನ್ನು ಹುಟ್ಟಿಸಿ ನಂತರ ನಿರ್ನಾಮ ಮಾಡಿದ್ದು ಹೇಗೆ? ಇದಾದ ನಂತರ ಅನೇಕ ಅಮಾಯಕರನ್ನು ಕೊಂದು ಸತ್ಯಾಂಶವನ್ನು ಹೇಗೆ ಮುಚ್ಚಿಡಲಾಯಿತು. ಇಲ್ಲಿಯವರೆಗೂ ನ್ಯಾಯ ಸಿಗದೇ ಪರದಾಡುತ್ತಿರುವವರ ಸ್ಥಿತಿ ಎಂಥದ್ದು ಎಂಬ ಬಗ್ಗೆ ಈ ಚಿತ್ರದಲ್ಲಿ ತೋರಿಸಲಾಗುತ್ತದೆ ಎಂದು ವಿವೇಕ್ ಅವರು ಈ ಹಿಂದೆ ಸಂದರ್ಶನವೊಂದರಲ್ಲಿ ಹೇಳಿದ್ದರು.