

ಮುಂಬೈ: ಲಯನ್ಸ್ ಹೋಮ್ ಫೈನಾನ್ಸ್ ಲಿಮಿಟೆಡ್ನ ಉದ್ಯಮಿ ಅನಿಲ್ ಅಂಬಾನಿ ಅವರ ಪುತ್ರ ಜೈ ಅನ್ಮೋಲ್ ಅಂಬಾನಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಸಾಮಾಜಿಕ ನೆಟ್‍ವರ್ಕಿಂಗ್ ಕಂಪನಿಯಾದ ಡಿಸ್ಕೋದ ಸಂಸ್ಥಾಪಕಿ, ಸಾಮಾಜಿಕ ಕಾರ್ಯಕರ್ತೆಯಾಗಿರುವ ಮುಂಬೈನ ಕ್ರಿಶಾ ಷಾ ಇವರ ಬಾಳ ಸಂಗಾತಿಯಾಗಿದ್ದಾರೆ.
ಮುಂಬೈನಲ್ಲಿ ಮದುವೆ ಅದ್ಧೂರಿಯಾಗಿ ಮದುವೆ ಸಮಾರಂಭ ನಡೆದಿದೆ. ಮುಂಬೈನ ಕಫೆ ಪರೇಡ್‍ನಲ್ಲಿರುವ ಅವರ ಕುಟುಂಬದ ಮನೆಯಾದ ಸೀ ವಿಂಡ್‍ನಲ್ಲಿ ಈ ಜೋಡಿ ದಾಂಪತ್ಯಕ್ಕೆ ಕಾಲಿಟ್ಟಿದೆ.
ವರ ಬಿಳಿ ಶೆರ್ವಾನಿಯಿಂದ ಕಂಗೊಳಿಸುತ್ತಿದ್ದರೆ, ಕೆಂಪು ಮತ್ತು ಚಿನ್ನದ ಬಣ್ಣದ ಲೆಹೆಂಗಾ ತೊಟ್ಟಿದ್ದ ವಧು ವಜ್ರದ ಆಭರಣಗಳನ್ನು ತೊಟ್ಟುಕೊಂಡಿದ್ದರು. ಅಂಬಾನಿ ಕುಟುಂಬ ಸ್ನೇಹಿತರು, ಗಣ್ಯರು, ಬಾಲಿವುಡ್ ಸೆಲೆಬ್ರೆಟಿಗಳು ಮದುವೆಯಲ್ಲಿ ಭಾಗವಹಿಸಿದ್ದರು.
ಕ್ರಿಶಾ ಲಂಡನ್‍ನಲ್ಲಿ ಕೆಲಸ ಮಾಡುತ್ತಿದ್ದರು. ನಂತರ ಉದ್ಯಮಿಯಾಗಲು ಭಾರತಕ್ಕೆ ವಾಪಸಾಗಿದ್ದಾರೆ. ಕ್ಯಾಲಿಪೋರ್ನಿಯಾ ವಿಶ್ವವಿದ್ಯಾಲಯದ ರಾಜಕೀಯ ಅರ್ಥಶಾಸ್ತ್ರದಲ್ಲಿ ಪದವೀಧರರಾಗಿದ್ದಾರೆ. ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‍ನಲ್ಲಿ ಉನ್ನತ ಶಿಕ್ಷಣವನ್ನು ಪಡೆದರು. ಸೋಶಿಯಲ್ ಪಾಲಿಸಿ ಮತ್ತು ಡೆವಲ್ಪಮೆಂಟ್ ವಿಷಯದಲ್ಲೂ ಪದವಿ ಪಡೆದುಕೊಂಡಿದ್ದಾರೆ.