ರಾಜಸ್ಥಾನದ ರಾಜಕೀಯದಲ್ಲಿ ಬಿರುಗಾಳಿ: 90 ಶಾಸಕರು ರಾಜೀನಾಮೆ-ಸಿಎಂ ಕೈವಾಡ?

rajsthan
Published on

ಜೈಪುರ: ರಾಜಸ್ಥಾನ ಕಾಂಗ್ರೆಸ್‌ನಲ್ಲಿ ರಾಜಕೀಯ ಬಿಕ್ಕಟ್ಟು ಎದುರಾಗಿದ್ದು, ಸಿಎಂ ಅಶೋಕ್ ಗೆಹ್ಲೋಟ್ ಬಣದ 90 ಶಾಸಕರು ರಾಜೀನಾಮೆ ಸಲ್ಲಿಸಿದ್ದಾರೆ.

ಎಐಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವ ಅಶೋಕ್ ಗೆಹ್ಲೋಟ್ ಅವರು ಚುನಾವಣೆಗೆ ನಿಲ್ಲುವುದಾಗಿ ತಿಳಿಸಿರುವ ಬೆನ್ನಲ್ಲೇ ಇಂಥದ್ದೊಂದು ಬೆಳವಣಿಗೆ ಉಂಟಾಗಿದೆ. ಸಿಎಂ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಪಕ್ಷದಲ್ಲಿ ಭಾರೀ ಬಿಕ್ಕಟ್ಟು ಉಂಟಾಗಿರುವ ಕಾರಣದಿಂದಲೇ ಗೆಹ್ಲೋಟ್ ಬೆಂಬಲಿಗ ಶಾಸಕರು ಸ್ಪೀಕರ್​ಗೆ ರಾಜೀನಾಮೆ ಸಲ್ಲಿಸಿದ್ದಾರೆ. ಬಂಡಾಯ ಶಾಸಕರೊಂದಿಗೆ ಮಲ್ಲಿಕಾರ್ಜುನ್ ಖರ್ಗೆ ಮತ್ತು ಅಜಯ್ ಮಾಕೇನ್ ಮಾತುಕತೆಗೆ ಪ್ರಯತ್ನಿಸಿದರೂ ಅವರು ಭೇಟಿಗೆ ನಿರಾಕರಿಸಿದ್ದಾರೆ ಎಂದು ತಿಳಿದುಬಂದಿದೆ.

ಅಶೋಕ್ ಗೆಹ್ಲೋಟ್ ಅವರು ಕಾಂಗ್ರೆಸ್ ಮುಖ್ಯಸ್ಥರಾಗಿ ಆಯ್ಕೆಯಾದರೆ ರಾಜಸ್ಥಾನದ ಮುಂದಿನ ಮುಖ್ಯಮಂತ್ರಿ ಸ್ಥಾನವನ್ನು ಹೊಸ ತಲೆಮಾರಿನವರಿಗೆ ಕೊಡಬೇಕೆಂದು ಹೇಳಿದ್ದರು. ಈ ಕಾರಣಕ್ಕೆ ಸಚಿನ್ ಪೈಲಟ್ ಅವರೇ ಮುಂದಿನ ಸಿಎಂ ಎಂದು ಚರ್ಚೆಯಾಗಿತ್ತು. ಆದರೆ ಪೈಲಟ್​ಗೆ ಸ್ಥಾನ ನೀಡುವುದು ಬೇಡ ಎನ್ನುವ ಕಾರಣಕ್ಕೆ ರಾಜೀನಾಮೆಯ ಹೈಡ್ರಾಮಾ ನಡೆದಿದೆ. ನಮ್ಮಲ್ಲಿಯೇ ಯಾರಾದರೂ ಅನುಭವಿ ರಾಜಕಾರಣಿಗಳಿಗೆ ಈ ಸ್ಥಾನ ನೀಡಿ ಎಂದು ಪ್ರತಿಭಟನೆ ಶುರುವಾಗಿದೆ. ಇಲ್ಲದೇ ಹೋದಲ್ಲಿ ಹಲವು ಶಾಸಕರು ಕಾಂಗ್ರೆಸ್ ತೊರೆಯುವುದಾಗಿಯೂ ಹೈಕಮಾಂಡ್‌ಗೆ ಎಚ್ಚರಿಕೆ ನೀಡಲಾಗಿದೆ.

ಕಾಂಗ್ರೆಸ್ ಹೈಕಮಾಂಡ್ ನಾಯಕರ ಭೇಟಿಗೆ ಅಶೋಕ್ ಗೆಹ್ಲೋಟ್ ಬಣದ ಶಾಸಕರು ನಿರಾಕರಿಸಿದ್ದಾರೆ. ಹೀಗಾಗಿ, ಮಲ್ಲಿಕಾರ್ಜುನ ಖರ್ಗೆ, ಅಜಯ್ ಮಾಕೇನ್ ದೆಹಲಿಗೆ ವಾಪಸಾಗಿದ್ದಾರೆ. ಈ ಬಗ್ಗೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿ ಈ ಬಗ್ಗೆ ವರದಿ ಸಲ್ಲಿಸಲಿದ್ದಾರೆ.

ಇದರ ಹಿಂದೆ ಅಶೋಕ್ ಗೆಹ್ಲೋಟ್ ಕೈವಾಡವಿದೆಯೇ ಎಂಬ ಚರ್ಚೆಗಳೂ ಶುರುವಾಗಿದೆ. ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆಯ ನಂತರವೇ ರಾಜಸ್ಥಾನದ ಮುಖ್ಯಮಂತ್ರಿಯ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಶಾಸಕರು ಒತ್ತಾಯಿಸಿದ್ದಾರೆ. ನಿಷ್ಠಾವಂತರು, ಶಾಸಕರ ಅಭಿಪ್ರಾಯಗಳನ್ನು ಗಣನೆಗೆ ತೆಗೆದುಕೊಳ್ಳಬೇಕು ಎಂದಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net