

ಮುಂಬೈ: ಇಂಟರ್ನೆಟ್ನಲ್ಲಿ ಸಿಗದ ವಿಷಯವೇ ಇಲ್ಲ ಎನ್ನಬಹುದೇನೊ. ಇದೀಗ ಕುತೂಹಲ ಎನಿಸುವ ವಿಷಯವೊಂದು ಇದರಲ್ಲಿ ಲಭ್ಯವಾಗಿದ್ದು, ಅದು ನಟಿ, ಮಾಜಿ ವಿಶ್ವಸುಂದರಿ ಐಶ್ವರ್ಯ ರೈ ಅವರ ಮೊದಲ ಸಂಬಳದ ಅಗ್ರೀಮೆಂಟ್ ಪೇಪರ್ ವೈರಲ್ ಆಗಿದೆ.
ಸದ್ಯ ಒಂದು ಚಿತ್ರಕ್ಕೆ 5 ರಿಂದ 6 ಕೋಟಿ ರೂಪಾಯಿ ಪಡೆದುಕೊಳ್ಳುತ್ತಿರುವ ಐಶ್ವರ್ಯ 1992ರಲ್ಲಿ ಐಶ್ವರ್ಯ ರೈ ಮಾಡೆಲಿಂಗ್ ಮಾಡುತ್ತಿದ್ದ ವೇಳೆ ಮಾಡಿಕೊಂಡಿರುವ ಮೊದಲ ಕಾಂಟ್ರಾಕ್ಟ್ ಇದು ಎನ್ನಲಾಗಿದೆ.
1994ರಲ್ಲಿ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಐಶ್ವರ್ಯ ರೈ ಪಾಲ್ಗೊಳ್ಳುವ ಎರಡು ವರ್ಷ ಮೊದಲು ಮಾಡೆಲಿಂಗ್ನಲ್ಲಿ ನಟಿಸಿದ್ದ ವೇಳೆ ಅವರು ಪಡೆದುಕೊಂಡಿರುವ ಸಂಬಳ ಇದಾಗಿದೆ. ಇದರಲ್ಲಿ ಒಂದು ಮಾಡೆಲಿಂಗ್ ಸೆಷನ್ಗೆ ಅವರು ಪಡೆದುಕೊಂಡದ್ದು 1500 ರೂಪಾಯಿಗಳು.
ಜಾಲತಾಣದಲ್ಲಿ ಇದು ಭಾರಿ ವೈರಲ್ ಆಗಿದ್ದು, ಥಹರೇವಾರಿ ಕಮೆಂಟ್ಗಳು ಬಂದಿವೆ. 1992ರಲ್ಲಿ ಈ ಮೊತ್ತ ಅಧಿಕವೇ ಎಂದು ಕೆಲವರು ಹೇಳಿದ್ದರೆ, ಆಗ ನಾನು ಇದಕ್ಕಿಂತ ಹೆಚ್ಚಿಗೆ ದುಡಿಯುತ್ತಿದ್ದೆ ಎಂದು ಕೆಲವರು ಹೇಳಿಕೊಂಡಿದ್ದಾರೆ. ಅದೇನೇ ಇದ್ದರೂ ಸದ್ಯ ಮಾತ್ರ ಐಶ್ವರ್ಯ ರೈ ಅವರ ಆಸ್ತಿಯ ಮೊತ್ತ ಸುಮಾರು 100 ಮಿಲಿಯನ್ ಡಾಲರ್. ರೂಪಾಯಿ ಲೆಕ್ಕದಲ್ಲಿ ಹೇಳುವುದಾದರೆ ಸುಮಾರು 776 ಕೋಟಿ ರೂಪಾಯಿಗಳು! ಇತ್ತೀಚೆಗೆ ಅವರು ಸುಮಾರು 21 ಕೋಟಿ ರೂಪಾಯಿಗಳ ಬಂಗಲೆ ಕೂಡ ಖರೀದಿಸಿದ್ದಾರೆ.