

ಅಹಮದಾಬಾದ್ (ಗುಜರಾತ್): ಒಂದೆಡೆ ಅತಿ ಚಿಕ್ಕ ವಯಸ್ಸಿನಲ್ಲಿಯೇ ಹೃದಯಾಘಾತಕ್ಕೆ ಒಳಗಾಗಿ ಸಾಯುವವರ ಸಂಖ್ಯೆ ಹೆಚ್ಚುತ್ತಲೇ ಇದ್ದರೆ, ಅದೇ ಇನ್ನೊಂದೆಡೆ, ಹೃದಯಾಘಾತಕ್ಕೆ ಒಳಗಾಗಿದ್ದ 107 ವರ್ಷ ವಯಸ್ಸಿನ ವಯೋವೃದ್ಧೆಗೆ ಆಂಜಿಯೋಪ್ಲಾಸ್ಟಿ ಶಸ್ತ್ರಚಿಕಿತ್ಸೆ ಮೂಲಕ ಯಶಸ್ವಿಯಾಗಿ ಆಪರೇಷನ್ ಮಾಡಿರುವ ಘಟನೆ ಗುಜರಾತ್ನಲ್ಲಿ ನಡೆದಿದೆ.
ಅತ್ಯಂತ ಕಠಿಣ ಮತ್ತು ಸವಾಲಿನ ಶಸ್ತ್ರಚಿಕಿತ್ಸೆಯನ್ನು ಮಾಡಿ ಇಳಿ ವಯಸ್ಸಿನಲ್ಲಿಯೂ ಶಸ್ತ್ರಚಿಕಿತ್ಸೆಯನ್ನು ಫಲಪ್ರದ ಮಾಡಿದ್ದಾರೆ.
ಹೀಗೆ ಇಳಿವಯಸ್ಸಿನಲ್ಲಿ ಪ್ರಾಣಾಪಾಯದಿಂದ ಪಾರಾಗಿರುವ ಮಹಿಳೆ ಮಧ್ಯಪ್ರದೇಶದ ಮಂಡಸೌರ ಜಿಲ್ಲೆಯ ಜಮ್ನಾಬೆನ್. ಜನ್ಮಾಬೆನ್ ಅವರ ರಕ್ತನಾಳಗಳಲ್ಲಿ ಶೇ.99ರಷ್ಟು ಸಮಸ್ಯೆ ಉಂಟಾಗಿತ್ತು. ಆಕೆ ಬದುಕುವುದೇ ಕಷ್ಟವಾಗಿತ್ತು. ನಂತರ ಆಕೆಯ ಕುಟುಂಬಸ್ಥರು ಸುಮಾರು 8 ಗಂಟೆ ಕಾಲ ದೂರ ಪ್ರಯಾಣ ಬೆಳೆಸಿ ಅಹಮದಾಬಾದ್ನ ಮಾರೆಂಗೋ ಸಿಮ್ಸ್ (ಸಿಐಎಂಸಿ) ಆಸ್ಪತ್ರೆಗೆ ದಾಖಲಿಸಿದ್ದರು.
ಆಕೆ ಹೃದಯ ಬಡಿತದಲ್ಲಿ ಏರುಪೇರಾಗಿದ್ದರಿಂದ ಅದನ್ನು ಸಹಜ ಸ್ಥಿತಿಗೆ ತರಲು ಆಂಜಿಯೋಪ್ಲಾಸ್ಟಿ ಶಸ್ತ್ರಚಿಕಿತ್ಸೆ ಮಾಡಬೇಕಿತ್ತು. ಈ ಶಸ್ತ್ರ ಚಿಕಿತ್ಸೆ ಮಾಡಿದರೆ ಮಹಿಳೆ ಬದುಕುಳಿಯುವುದು ಕಷ್ಟವಾಗಿತ್ತು. ಆದರೂ ಸವಾಲನ್ನು ಸ್ವೀಕರಿಸಿ ಹೃದ್ರೋಗ ತಜ್ಞ ಡಾ.ಕೆಯೂರ್ ಪಾರಿಖ್ ಮತ್ತು ಅರಿವಳಿಕೆ ತಜ್ಞ ಚಿಂತನ್ ಸೇಠ್ ಅವರ ತಂಡ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿದೆ.