ಅಗ್ನಿಪಥ್ ಯೋಜನೆ: ಸುಳ್ಳು ಸುದ್ದಿ ಹರಡಿ ಹಿಂಸೆಗೆ ಪ್ರಚೋದನೆ- ವಾಟ್ಸ್​ಆ್ಯಪ್​ ಬ್ಯಾನ್​, 10 ಮಂದಿ ಬಂಧನ

whatsapp
Published on

ನವದೆಹಲಿ: ಯುವಜನರನ್ನು ಸೈನ್ಯಕ್ಕೆ ಸೇರಿಸಿಕೊಳ್ಳುವ ಕೇಂದ್ರದ ಮಹಾತ್ವಾಕಾಂಕ್ಷಿ ಯೋಜನೆ ವಿರುದ್ಧ ದೇಶದ ಕೆಲವೆಡೆ ಪ್ರತಿಭಟನೆ, ಹಿಂಸಾಚಾರ ನಡೆಯುತ್ತಿದೆ. ಈ ಯೋಜನೆ ಕುರಿತಾಗಿ ಕೇಂದ್ರ ಸರ್ಕಾರ ಎಷ್ಟೇ ಸ್ಪಷ್ಟನೆ ಕೊಡುತ್ತಿದ್ದರೂ ಯೋಜನೆ ಕುರಿತಾಗಿ ಕೆಲವು ಸುಳ್ಳು ಮಾಹಿತಿಗಳನ್ನು ಒಂದು ವರ್ಗ ಪ್ರಚಾರ ಮಾಡುತ್ತಿದೆ. ಆದ್ದರಿಂದ ಯೋಜನೆಯ ಕುರಿತು ಸರಿಯಾಗಿ ತಿಳಿದುಕೊಳ್ಳದೇ ಎಷ್ಟೋ ಮಂದಿ ಹಿಂಸಾಚಾರ ಮಾರ್ಗವನ್ನು ಅನುಸರಿಸುತ್ತಿದ್ದಾರೆ ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಸುಳ್ಳು ಸುದ್ದಿ ಹರಿಬಿಡುತ್ತಿದ್ದ ಆರೋಪದ ಮೇಲೆ ಸದ್ಯ 35 ವಾಟ್ಸ್​ಆ್ಯಪ್​ ಗ್ರೂಪ್​ಗಳನ್ನು ಬಂದ್​ ಮಾಡಲಾಗಿದ್ದು, ಇದಕ್ಕೆ ಸಂಬಂಧಿಸಿದಂತೆ 10 ಮಂದಿಯನ್ನು ಅರೆಸ್ಟ್​ ಮಾಡಲಾಗಿದೆ. ವಾಟ್ಸ್​ಆ್ಯಪ್​ ಬ್ಯಾನ್​ಗಳ ಸಂಖ್ಯೆ ಹಾಗೂ ಬಂಧಿತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.

ಕಳೆದ ಕೆಲವು ದಿನಗಳಿಂದ ಮುಖ್ಯವಾಗಿ ಉತ್ತರ ಭಾರತದ ಉತ್ತರ ಪ್ರದೇಶ, ಬಿಹಾರ, ದೆಹಲಿ, ರಾಜಸ್ಥಾನ ಮತ್ತು ಹರಿಯಾಣ ರಾಜ್ಯಗಳಲ್ಲಿ ವ್ಯಾಪಕ ಹಿಂಸಾಚಾರ ನಡೆಯುತ್ತಿದೆ. ರೈಲುಗಳು ಮತ್ತು ನಿಲ್ದಾಣಗಳನ್ನು ಸುಟ್ಟುಹಾಕಲಾಯಿಗಿದೆ, ರಸ್ತೆಗಳನ್ನು ನಿರ್ಬಂಧಿಸಲಾಗಿದೆ.ಈ ಹಿಂಸಾಚಾರಕ್ಕೆ ವಾಟ್ಸ್​ಆ್ಯಪ್​ಗಳ ಮೂಲಕ ಬರುತ್ತಿರುವ ಸಂದೇಶಗಳೂ ಕಾರಣ ಎನ್ನುವ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ.

ಬಿಹಾರದಲ್ಲಿ ಇದಾಗಲೇ ಇಂಟರ್ನೆಟ್ ಸೇವೆಗಳು ಸ್ಥಗಿತಗೊಂಡಿವೆ. ಸಾರ್ವಜನಿಕರನ್ನು ಪ್ರಚೋದಿಸುವ ಮತ್ತು ಜೀವ ಮತ್ತು ಆಸ್ತಿಗೆ ಹಾನಿ ಮಾಡುವ ಉದ್ದೇಶದಿಂದ ವದಂತಿಗಳನ್ನು ಹರಡಲು 'ಆಕ್ಷೇಪಾರ್ಹ ವಿಷಯವನ್ನು' ಪ್ರಸಾರ ಮಾಡಲು ಇಂಟರ್ನೆಟ್ ಅನ್ನು ಬಳಸಲಾಗುತ್ತಿದೆ ಎಂದು ರಾಜ್ಯ ಸರ್ಕಾರ ಹೇಳಿತ್ತು.

ಪಾಟ್ನಾದಲ್ಲಿ 190 ಪ್ರತಿಭಟನಾಕಾರರನ್ನು ಬಂಧಿಸಲಾಗಿದೆ, 11 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. ತೆಲಂಗಾಣ ಪೊಲೀಸರು ಕೂಡ ಈ ಹಿಂದೆ ಪಲ್ನಾಡು ಜಿಲ್ಲೆಯ ನರಸರಾವ್‌ಪೇಟೆಯಲ್ಲಿ ಯುವಕರನ್ನು ಅಗ್ನಿಪಥ ಯೋಜನೆಯನ್ನು ವಿರೋಧಿಸಲು ಪ್ರಚೋದಿಸಿದ ಆರೋಪದ ಮೇಲೆ ಕೋಚಿಂಗ್ ಇನ್‌ಸ್ಟಿಟ್ಯೂಟ್ ಮಾಲೀಕನನ್ನು ಬಂಧಿಸಿದ್ದರು ಎಂದು ವರದಿಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net