

ಲಖನೌ: ಹೆಚ್ಚು ಹೆಚ್ಚು ಯುವಕ-ಯುವತಿಯನ್ನು ಸೇನೆಗೆ ಸೇರಿಸಿಕೊಳ್ಳುವ ಸಂಬಂಧ ಕೇಂದ್ರ ಸರ್ಕಾರ ರೂಪಿಸಿರುವ ಅಗ್ನಿಪಥ್ ಯೋಜನೆಗೆ ಸಂಬಂಧಿಸಿದಂತೆ ಪ್ರತಿಭಟನೆಯ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಆಸ್ತಿಪಾಸ್ತಿ ಹಾನಿ ಮಾಡಲಾಗಿದೆ. ರೈಲಿಗೆ ಬೆಂಕಿ ಹಚ್ಚುವುದು ಸೇರಿದಂತೆ ಕಲ್ಲು ತೂರಾಟ ನಡೆಸುವ ಮೂಲಕ ನಷ್ಟ ಮಾಡಿದ್ದಾರೆ ಗಲಭೆಕೋರರು.
ಇವರಿಗೆ ಬುದ್ಧಿ ಕಲಿಸುವ ನಿಟ್ಟಿನಲ್ಲಿ ಉತ್ತರ ಪ್ರದೇಶ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ತನ್ನ ರಾಜ್ಯದಲ್ಲಿ ಪ್ರತಿಭಟನೆ ರೂಪದಲ್ಲಿ ಆಸ್ತಿಪಾಸ್ತಿಗೆ ನಷ್ಟ ಉಂಟುಮಾಡಿರುವ ಗಲಭೆಕೋರರಿಂದಲೇ ನಷ್ಟವನ್ನು ವಸೂಲಿ ಮಾಡಲು ಸರ್ಕಾರ ನಿರ್ಧರಿಸಿದೆ. ಉತ್ತರ ಪ್ರದೇಶದಲ್ಲಿ ನಡೆದ ಹಿಂಸಾಚಾರದಲ್ಲಿ ಭಾಗಿಯಾಗಿರುವ ಜನರಿಂದ ನಮ್ಮ ನಷ್ಟವನ್ನು ವಸೂಲಿ ಮಾಡುವುದಾಗಿ ಅಡಿಷನಲ್ ಡೈರೆಕ್ಟರ್ ಜನರಲ್ (ಲಾ ಅಂಡ್ ಆರ್ಡರ್ ) ಪ್ರಶಾಂತ್ ಕುಮಾರ್ ಅವರು ತಿಳಿಸಿದ್ದಾರೆ.
ವಾರಾಣಸಿಯಲ್ಲಿ ಪ್ರತಿಭಟನೆ ವೇಳೆ ದುಷ್ಕರ್ಮಿಗಳು 36 ಬಸ್‌ಗಳಿಗೆ ಹಾನಿ ಮಾಡಿದ್ದರು. ಇದರಿಂದ ಸರ್ಕಾರಕ್ಕೆ 12 ಲಕ್ಷ ರೂಪಾಯಿಗೂ ಅಧಿಕ ನಷ್ಟ ಉಂಟಾಗಿದೆ. ಜೂನ್ 17ರಂದು ನಡೆದ ಹಿಂಸಾಚಾರದಲ್ಲಿ ಉತ್ತರ ಪ್ರದೇಶ ಸಾರಿಗೆ ನಿಗಮ ವಾರಾಣಸಿ ವಿಭಾಗದ ಮತ್ತು ವಾರಾಣಸಿ ನಗರ ಸಾರಿಗೆ ಸೇವೆಗಳ ನಿಯಮಿತದ 36 ಬಸ್‌ಗಳಿಗೆ ಹಾನಿ ಮಾಡಲಾಗಿದೆ. ಇದರಲ್ಲಿ 21 ಬಸ್‌ಗಳನ್ನು ಕಂಟೋನ್ಮೆಂಟ್ ಬಸ್ ನಿಲ್ದಾಣದಲ್ಲಿ ನಿಲ್ಲಿಸಲಾಗಿತ್ತು. ಉಳಿದ 15 ಬಸ್‌ಗಳು ವರ್ಕ್‌ಶಾಪ್‌ಗೆ ತೆರಳುತ್ತಿದ್ದವು. ಸುಮಾರು 100-150 ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿ ಈ ಬಸ್‌ಗಳಿಗೆ ಹಾನಿ ಮಾಡಿದ್ದರು. ಇದರಿಂದ ಉತ್ತರ ಪ್ರದೇಶ ಸಾರಿಗೆ ನಿಗಮಕ್ಕೆ 4 ಲಕ್ಷ ಮತ್ತು ವಾರಾಣಸಿ ನಗರ ಸಾರಿಗೆ ನಿಗಮಕ್ಕೆ 8 ಲಕ್ಷ ರೂ ನಷ್ಟ ಉಂಟಾಗಿತ್ತು.
ಉತ್ತರ ಪ್ರದೇಶದಲ್ಲಿ ಸದ್ಯ 49 ಮಂದಿ ಮೇಲೆ ಎಫ್.ಐ.ಆರ್ ದಾಖಲು ಮಾಡಲಾಗಿದೆ. 525 ಪ್ರತಿಭಟನಾಕಾರರನ್ನು ಬಂಧಿಸಲಾಗಿದೆ. ಇವರಿಂದಲೇ ನಷ್ಟ ವಸೂಲಿ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಈ ಯೋಜನೆಯನ್ನು ವಿರೋಧಿಸಿ ಆರಂಭದಲ್ಲಿ ಶಾಂತಿಯುತವಾಗಿಯೇ ಪ್ರತಿಭಟನೆ ನಡೆಯುತ್ತಿತ್ತು. ಆದರೆ ಕೆಲ ವರ್ಗದವರು ಹಾಗೂ ರಾಜಕೀಯ ವ್ಯಕ್ತಿಗಳು ಇದರ ದುರ್ಲಾಭ ಪಡೆದು ಪ್ರತಿಭಟನೆಯನ್ನು ಹಿಂಸಾಚಾರಕ್ಕೆ ತಿರುಗಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದರು.
ಯುವಕರು ಯಾವುದೇ ತಪ್ಪು ಮಾಹಿತಿಗಳಿಗೆ ಮರುಳಾಗಬಾರದು ಮತ್ತು ಯಾವುದೇ ಹಿಂಸಾತ್ಮಕ ಚಟುವಟಿಕೆಗಳಲ್ಲಿ ತೊಡಗಬಾರದು. ಅದು ಭವಿಷ್ಯದಲ್ಲಿ ಅವರಿಗೆ ಸರ್ಕಾರಿ ಉದ್ಯೋಗ ಸಿಗದಂತೆ ಸಂಚಕಾರ ಉಂಟುಮಾಡಲಿದೆ ಎಂದು ಅವರು ಇದೇ ವೇಳೆ ಮನವಿ ಮಾಡಿದ್ದಾರೆ.