

ನವದೆಹಲಿ: ಹೆಚ್ಚು ಹೆಚ್ಚು ಯುವ ಸಮುದಾಯವನ್ನು ಸೇನೆಗೆ ಸೇರಿಸುವ ಸಂಬಂಧ ಕೇಂದ್ರ ಸರ್ಕಾರ ರೂಪಿಸಿರುವ ಅಗ್ನಿಪಥ್ ಯೋಜನೆಗೆ ಅಚ್ಚರಿ ಎನಿಸುವಷ್ಟು ಮಂದಿ ಅರ್ಜಿ ಸಲ್ಲಿಸಿದ್ದಾರೆ. ಭಾರತೀಯ ವಾಯುಪಡೆಯಲ್ಲಿನ (IAF) ನೇಮಕಾತಿಗೆ ಆನ್ಲೈನ್ ಮೂಲಕ ಜೂನ್ 24 ರಿಂದ ಅರ್ಜಿ ಸ್ವೀಕರಿಸಲು ಆರಂಭಿಸಲಾಗಿತ್ತು. ಅರ್ಜಿ ಪಡೆಯುವ ಕಡೆಯ ದಿನ ಜುಲೈ 5 ಆಗಿತ್ತು.
ಈ ಕಡಿಮೆ ಅವಧಿಯಲ್ಲಿಯೇ ಭಾರತೀಯ ವಾಯುಪಡೆಗೆ 7.5 ಲಕ್ಷ ಅರ್ಜಿಗಳು ಬಂದಿವೆ. ಇದರಲ್ಲಿ ಶೇ.20ರಷ್ಟು ಮಂದಿ ಯುವತಿಯರೇ ಆಗಿದ್ದಾರೆ ಎಂದು ವಾಯುಪಡೆ ಮೂಲಗಳು ತಿಳಿಸಿವೆ. ಈ ಬಾರಿ 7,49,899 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಇದು ದಾಖಲೆಯನ್ನೇ ನಿರ್ಮಿಸಿದೆ ಎಂದು ಅದು ಹೇಳಿದೆ.
ಜೂನ್ 14 ರಂದು ಯೋಜನೆಯನ್ನು ಘೋಷಿಸಿದ ನಂತರ ಅಗ್ನಿಪಥ್ ವಿರುದ್ಧ ಹಿಂಸಾತ್ಮಕ ಪ್ರತಿಭಟನೆಗಳು ಸುಮಾರು ಒಂದು ವಾರದವರೆಗೆ ಹಲವಾರು ರಾಜ್ಯಗಳಲ್ಲಿ ನಡೆದಿದ್ದವು. ವಿವಿಧ ವಿರೋಧ ಪಕ್ಷಗಳು ಅಗ್ನಿಪಥ್ ಯೋಜನೆಯನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿದ್ದವು. ಇದರ ನಡುವೆಯೇ ಈ ಪರಿಯಲ್ಲಿ ಅರ್ಜಿಗಳ ನೋಂದಣಿ ಆಗಿದೆ.
10ನೇ ತರಗತಿ ಅಥವಾ ಮೆಟ್ರಿಕ್ಯುಲೇಷನ್ ಉತ್ತೀರ್ಣ ಪ್ರಮಾಣಪತ್ರ, ಮಧ್ಯಂತರ ಅಥವಾ 10+2 ಅಥವಾ ತತ್ಸಮಾನ ಅಂಕಪಟ್ಟಿ ಅಥವಾ 3 ವರ್ಷಗಳ ಇಂಜಿನಿಯರಿಂಗ್ ಡಿಪ್ಲೊಮಾ ಅಂತಿಮ ವರ್ಷದ ಮಾರ್ಕ್ ಶೀಟ್ ಮತ್ತು ಮೆಟ್ರಿಕ್ಯುಲೇಷನ್ ಅಂಕಪಟ್ಟಿ ಅಥವಾ 2 ವರ್ಷಗಳ ವೃತ್ತಿಪರ ಕೋರ್ಸ್ ಮಾರ್ಕ್ ಶೀಟ್ ಮತ್ತು ವೃತ್ತಿಯಲ್ಲದ ಅಂಕಪಟ್ಟಿಗಳನ್ನು ಹೊಂದಿರಬೇಕು ಎಂದು ತಿಳಿಸಲಾಗಿತ್ತು. ಈ ಎಲ್ಲಾ ದಾಖಲೆಗಳನ್ನು ನೀಡಿ ಅರ್ಜಿ ಸಲ್ಲಿಕೆಯಾಗಿದೆ.
ಅಗ್ನಿಪಥ್ ನೇಮಕಾತಿ ಯೋಜನೆಗಾಗಿ ಅಗ್ನಿವೀರ್‌ಗಳ ಮೊದಲ ಬ್ಯಾಚ್‌ನಲ್ಲಿ ಶೇಕಡಾ 20 ರಷ್ಟು ಅಭ್ಯರ್ಥಿಗಳು ಮಹಿಳೆಯರಾಗಿರುತ್ತಾರೆ. ಅವರನ್ನು ನೌಕಾಪಡೆಯ ವಿವಿಧ ಭಾಗಗಳಿಗೆ ಮತ್ತು ಶಾಖೆಗಳಿಗೆ ಕಳುಹಿಸಲಾಗುವುದು ಎಂದು ನೌಕಾಪಡೆಯ ಅಧಿಕಾರಿಗಳನ್ನು ಉಲ್ಲೇಖಿಸಿ ಎಎನ್‌ಐ ವರದಿ ಮಾಡಿದೆ.
ನೇಮಕಾತಿಯಲ್ಲಿ ಯಾವುದೇ ರೀತಿಯ ಪಕ್ಷಪಾತ ಇರುವುದಿಲ್ಲ. ಅನಾರೋಗ್ಯಕರ ಸ್ಪರ್ಧೆಯೂ ಇರುವುದಿಲ್ಲ. ಕಾಯಂ ನೇಮಕಾತಿಗಳಾಗಿ ಅಗ್ನಿವೀರರ ಆಯ್ಕೆಯನ್ನು ವಸ್ತುನಿಷ್ಠವಾಗಿ ಕೈಗೊಳ್ಳಲಾಗುವುದು ಎಂದು ಲೆಫ್ಟಿನೆಂಟ್ ಜನರಲ್ ರಾಜು ಹೇಳಿದ್ದಾರೆ. ಆರು ತಿಂಗಳ ತರಬೇತಿ ಅವಧಿಯ ಕೊನೆಯಲ್ಲಿ ಮೊದಲ ಮೌಲ್ಯಮಾಪನವನ್ನು ಅಗ್ನಿವೀರ ಆಕಾಂಕ್ಷಿಗಳಿಗೆ ನೀಡಲಾಗುವುದು ಎಂದು ಅವರು ಹೇಳಿದರು.