ನೀವೇನೇ ಕೂಗಾಡಿದ್ರೂ ಡೋಂಟ್​ ಕೇರ್​ ಎಂದರು: ಅಗ್ನಿವೀರರಾಗಲು ಆರು ದಿನಗಳಲ್ಲಿ 1.83 ಲಕ್ಷ ಅರ್ಜಿ!

agnipath
Published on

ನವದೆಹಲಿ: ಹೆಚ್ಚು ಹೆಚ್ಚು ಯುವಕರಿಗೆ ಉದ್ಯೋಗ ನೀಡುವ ದೃಷ್ಟಿಯಿಂದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಅಗ್ನಿಪಥ್​ ಯೋಜನೆ ವಿರೋಧಿಸಿ ದೇಶಾದ್ಯಂತ ಒಂದು ಗುಂಪಿನ ಜನ ಭಾರಿ ಪ್ರತಿಭಟನೆ ನಡೆಸುತ್ತಿದ್ದಾರೆ. ಅದೇ ಇನ್ನೊಂದೆಡೆ ಅಗ್ನಿಪಥ್​ಕ್ಕೆ ನೇಮಕವಾಗುವ ಯುವಕರಿಗೆ ಇರುವ ಸೌಲಭ್ಯಗಳ ಕುರಿತು ಕೇಂದ್ರ ಸರ್ಕಾರ ಜನರಿಗೆ ಮನವರಿಕೆ ಮಾಡುತ್ತಲೇ ಬಂದಿದೆ.

ಇದರ ಪ್ರತಿಫಲವಾಗಿಯೇ ವಾಯುಪಡೆಗೆ ಕೇವಲ ಆರು ದಿನಗಳಲ್ಲಿ 1.83 ಲಕ್ಷಕ್ಕೂ ಹೆಚ್ಚು ಅರ್ಜಿಗಳನ್ನು ಕೇಂದ್ರ ಸರ್ಕಾರ ಸ್ವೀಕರಿಸಿದೆ. ಅಗ್ನಿಪಥ್ ಯೋಜನೆಯಡಿ ಅಗ್ನಿವೀರರಾಗಿ ಸೇವೆ ಸಲ್ಲಿಸಲು ದೇಶದ ಯುವಕರು ಅತ್ಯುತ್ಸಾಹ ತೋರಿಸಿದ್ದಾರೆ. ಇಲ್ಲಿಯವರೆಗೆ, 1,83,634 ಭವಿಷ್ಯದ ಅಗ್ನಿವೀರ್‌ಗಳು ನೋಂದಣಿ ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಬರುವ ಜುಲೈ 5ರಂದು ನೋಂದಣಿ ಮುಕ್ತಾಯವಾಗುತ್ತದೆ ಎಂದು ಭಾರತೀಯ ವಾಯುಪಡೆಯು ಅಧಿಕೃತ ಮಾಹಿತಿಯನ್ನು ಬಿಡುಗಡೆ ಮಾಡಿದೆ.

ಅಗ್ನಿಪಥ್ ಯೋಜನೆಯಡಿಯಲ್ಲಿ ನೇಮಕಗೊಂಡವರನ್ನು ' ಅಗ್ನಿವೀರ್ ' ಎಂದು ಕರೆಯಲಾಗುತ್ತದೆ. ಜೂನ್ 16 ರಂದು ಸರ್ಕಾರವು ಯೋಜನೆಯಡಿಯಲ್ಲಿ ನೇಮಕಾತಿಗಾಗಿ ಗರಿಷ್ಠ ವಯಸ್ಸಿನ ಮಿತಿಯನ್ನು 2022 ಕ್ಕೆ 21 ರಿಂದ 23 ವರ್ಷಗಳಿಗೆ ಹೆಚ್ಚಿಸಿದೆ.

ಜೂನ್ 24 ರಂದು ಪ್ರಾರಂಭವಾದ ನೋಂದಣಿ ಪ್ರಕ್ರಿಯೆಯು ಜುಲೈ 5 ರಂದು ಮುಕ್ತಾಯಗೊಳ್ಳಲಿದೆ. ಆನ್‌ಲೈನ್ ಪರೀಕ್ಷೆ ಪ್ರಕ್ರಿಯೆ ಜುಲೈ 24 ರಿಂದ ಪ್ರಾರಂಭವಾಗಿದೆ. ಆಸಕ್ತ ಅಭ್ಯರ್ಥಿಗಳು ತಮ್ಮ ಅಧಿಕೃತ ವೆಬ್‌ಸೈಟ್ ಮೂಲಕ ನೇರವಾಗಿ ಅಗ್ನಿಪಥ್ ಯೋಜನೆ 2022 ಗಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ಅರ್ಹತೆಯ ಮಾನದಂಡಗಳು ಹೀಗಿವೆ
ಆಸಕ್ತ ಅಭ್ಯರ್ಥಿಗಳು 10ನೇ ತರಗತಿ ಅಥವಾ ಮೆಟ್ರಿಕ್ಯುಲೇಷನ್ ಉತ್ತೀರ್ಣ ಪ್ರಮಾಣಪತ್ರ, ಮಧ್ಯಂತರ ಅಥವಾ 10+2 ಅಥವಾ ತತ್ಸಮಾನ ಅಂಕಪಟ್ಟಿ ಅಥವಾ 3 ವರ್ಷಗಳ ಇಂಜಿನಿಯರಿಂಗ್ ಡಿಪ್ಲೊಮಾ ಅಂತಿಮ ವರ್ಷದ ಮಾರ್ಕ್​ಷೀಟ್​ ಮತ್ತು ಮೆಟ್ರಿಕ್ಯುಲೇಷನ್ ಅಂಕಪಟ್ಟಿ ಅಥವಾ 2 ವರ್ಷಗಳ ವೃತ್ತಿಪರ ಕೋರ್ಸ್ ಮಾರ್ಕ್​ಷೀಟ್​ ಮತ್ತು ವೃತ್ತಿಯಲ್ಲದ ಅಂಕಪಟ್ಟಿಗಳನ್ನು ಹೊಂದಿರಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net