VIDEO: ಫ್ರೀಡಂ ಬೇಕು ಅಂತ ಮನೆ ಬಿಟ್ರು, 25 ಕೋಟಿ ಡಿಮಾಂಡ್​ ಮಾಡಿದ್ರು- ನಟಿ ಚೈತ್ರಾಳ ವಿರುದ್ಧ ಪತಿ ಹೇಳಿದ್ದೇನು?

1280954
Published on

ಬೆಂಗಳೂರು: ಒಂದೆಡೆ ಪತಿಯ ವಿರುದ್ಧ ಗಂಭೀರ ದೌರ್ಜನ್ಯದ ಆರೋಪ ಮಾಡಿ ನಟಿ ಚೈತ್ರಾ ಹಳ್ಳಿಕೇರಿ ಮಾಧ್ಯಮಗೋಷ್ಠಿಯಲ್ಲಿ ಹೇಳಿಕೊಂಡರೆ, ಅದೇ ಇನ್ನೊಂದೆಡೆ ಪತ್ನಿ ಚೈತ್ರಾರ ವಿರುದ್ಧ ಪತಿ ಬಾಲಾಜಿಯವರು ಪತ್ರಕರ್ತರ ಎದುರು ಹೇಳಿಕೊಂಡಿದ್ದಾರೆ.

ಪತ್ರಿಕಾಗೋಷ್ಠಿ ಕರೆದ ಅವರು, ಹೇಳಿದ್ದಿಷ್ಟು: ಮೊದಲು ನಮ್ಮ ಸಂಸಾರ ಚೆನ್ನಾಗಿಯೇ ಇತ್ತು. ಇಬ್ಬರು ಮಕ್ಕಳಾದ ಮೇಲೆ ಚೈತ್ರಾ ಅವರಿಗೆ ಫ್ರೀಡಂ ಬೇಕು ಎನ್ನಿಸಲು ಶುರುವಾಯಿತು. ಅದಾಗಲೇ ಮಿಸಸ್​ ಇಂಡಿಯಾಕ್ಕೂ ಹೋಗಲು ಸಿದ್ಧತೆ ನಡೆಸಿದ್ದರು. ಈ ಸ್ವಾತಂತ್ರ್ಯ ಬೇಕು ಎನ್ನುವುದೇ ನಮ್ಮಿಬ್ಬರ ನಡುವೆ ಗಲಾಟೆಗೆ ಕಾರಣವಾಯಿತು. ಆದರೂ ನಾನು ಮಕ್ಕಳ ಸಲುವಾಗಿ ಹೇಗೋ ಸಹಿಸಿಕೊಂಡು ಹೋದೆ. ಬರುಬರುತ್ತಾ ಇದು ವಿಪರೀತ ಪ್ರಮಾಣಕ್ಕೆ ಹೋಯಿತು.

ಈ ಗಲಾಟೆ ಇಂದು-ನಿನ್ನೆಯದ್ದಲ್ಲ. ಸುಮಾರು ಏಳೆಂಟು ವರ್ಷಗಳಿಂದ ನಡೀತಾನೇ ಇದೆ. ನನಗೆ ಪಬ್ಲಿಕ್​ ಲೈಫ್​ನಲ್ಲಿ ಇರುವ ಆಸೆ ಎಂದೆಲ್ಲಾ ಗಲಾಟೆ ಮಾಡುತ್ತಿದ್ದರು. ನಾನು ಮಾತನಾಡಿದರೆ ಸ್ತ್ರೀ ಪರವಾಗಿ ಇರುವ ಕಾನೂನುಗಳನ್ನು ಬಳಸಿಕೊಂಡು ಕೇಸ್​ ಹಾಕುವುದಾಗಿ ಬೆದರಿಸುತ್ತಿದ್ದರು. ನಾನೇನೋ ಸುಮ್ಮನಿದ್ದೆ. ಆದರೆ ಎಷ್ಟು ವರ್ಷ ಎಂದು ಇದನ್ನು ಸಹಿಸಿಕೊಂಡು ಇರುವುದು?

ನಾವು ಸ್ವಂತ ಮನೆಯಲ್ಲಿಯೇ ಇದ್ದರೂ, ಫ್ರೀಡಂ ಬೇಕು ಎಂದು ಹೇಳಿ ಬಾಡಿಗೆ ಮನೆ ಮಾಡಿದರು ಚೈತ್ರಾ. ಮುತ್ತಿನಂಥ ಇಬ್ಬರು ಮಕ್ಕಳು ಇದ್ದಾರೆ. ಸಂಸಾರ ನಡೆಸಿಕೊಂಡು ಹೋಗೋಣ ಎಂದರೆ ದಿನವೂ ಕಿರಿಕಿರಿ, ಗಲಾಟೆ ಮಾಡುತ್ತಿದ್ದರು. ಮಕ್ಕಳನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ಈಗಲೂ ಮಕ್ಕಳು ಅಮ್ಮನ ಜತೆ ಇದ್ದಾರೆ, ನನ್ನ ಬಳಿಯೂ ಬಂದು ಹೋಗುತ್ತಾರೆ. ಇಂಥ ಮುದ್ದು ಮಕ್ಕಳು ಇರುವಾಗ ಯಾಕೆ ಇವೆಲ್ಲಾ ಗಲಾಟೆ ಎಂದರೂ ಕೇಳಿಲ್ಲ. 13 ವರ್ಷ ಮಕ್ಕಳನ್ನು ನೋಡಿಕೊಂಡಿದ್ದೇನೆ. ಅವರ ಎಲ್ಲಾ ಖರ್ಚುಗಳನ್ನೂ ನಾನೇ ನಿಭಾಯಿಸಿದ್ದೇನೆ.

ಆದರೆ ಇದೀಗ ಹಣದ ಆಸೆ ವಿಪರೀತ ಎನ್ನುವಷ್ಟರ ಮಟ್ಟಿಗೆ ಹೋಗಿದೆ. 25 ಕೋಟಿ ರೂಪಾಯಿ ಡಿಮಾಂಡ್​ ಮಾಡುತ್ತಿದ್ದಾರೆ. ಅವರ ಸಹೋದರರೆಲ್ಲಾ ಬಂದು ನಮಗೆ ಕನ್​ಸ್ಟ್ರಕ್ಷನ್​ ಬಿಜಿನೆಸ್​ ಮಾಡಬೇಕು, ಹಣ ಕೊಡಿ ಅನ್ನುತ್ತಿದ್ದಾರೆ. ಅವರು ಉದ್ಯಮ ಶುರು ಮಾಡಲು ನಾನ್ಯಾಕ್ರೀ ದುಡ್ಡು ಕೊಡಬೇಕು?

ಮೊದಲಿಗೆ ಪ್ರತ್ಯೇಕವಾಗಿದ್ದು, ದುಡ್ಡಿಗೆ ಡಿಮಾಂಡ್​ ಮಾಡಿದರು. ಕೋರ್ಟ್​ನಲ್ಲಿ ಹೋದಾಗ ಅಷ್ಟು ಲಕ್ಷ ಬೇಕು, ಇಷ್ಟು ಲಕ್ಷ ಬೇಕು ಎಂದರು. ನನಗೆ ಐಷಾರಾಮಿ ಜೀವನ ಅಭ್ಯಾಸವಾಗಿಹೋಗಿದೆ, ಸ್ವಲ್ಪ ಹಣ ಸಾಕಾಗುವುದಿಲ್ಲ ಎಂದು ಖುದ್ದು ಕೋರ್ಟ್​ನಲ್ಲಿಯೇ ಅವರು ಒಪ್ಪಿಕೊಂಡಿದ್ದಾರೆ. ಆಗೆಲ್ಲಾ ಲಕ್ಷದಲ್ಲಿ ಹಣ ಕೇಳ್ತಿದ್ದೋರು ಈಗ ಬಲ್ಕ್​ ಆಗಿ 25 ಕೋಟಿ ರೂಪಾಯಿ ಕೇಳಿದ್ರೆ ನಾನೇನು ಮಾಡುವುದು?

ಅವರು ಕೇವಲ ನನ್ನ ಮೇಲೆ ದೂರು ಸಲ್ಲಿಸಿದ್ರೆ ನನಗೆ ನೋವಾಗುತ್ತಿರಲಿಲ್ಲ, ನಮ್ಮ ಖಾಸಗಿ ಜೀವನದ ಕುರಿತು ಹೀಗೆ ಪಬ್ಲಿಕ್​ ಆಗಿ ಬಂದು ಮಾತನಾಡುವ ಅವಶ್ಯಕತೆಯೂ ಇರಲಿಲ್ಲ. ಆದರೆ ಅವರು ನಮ್ಮ ತಂದೆಯ ವಿರುದ್ಧ ಬೊಟ್ಟು ಮಾಡಿದ್ದಾರೆ. ನಮ್ಮ ತಂದೆಯವರು ಎಂಥವರು ಎಂದು ಎಲ್ಲರಿಗೂ ತಿಳಿದಿದೆ. ಎಷ್ಟೊಂದು ಸಮಾಜಮುಖಿ ಸೇವೆಗಳನ್ನು ಮಾಡಿ ದೊಡ್ಡ ವ್ಯಕ್ತಿ ಎನಿಸಿಕೊಂಡಿರುವ ನಮ್ಮ ತಂದೆಯವರ ವಿರುದ್ಧ ಆರೋಪ ಮಾಡಿರುವುದು ನನಗೆ ಸಹಿಸಿಕೊಳ್ಳಲು ಆಗಲಿಲ್ಲ. ಅಷ್ಟೇ ಅಲ್ಲ, ನಾನು ಎಂಥವರು ಎಂದು ಚೈತ್ರಾರ ಹಲವು ಅಭಿಮಾನಿಗಳಿಗೂ ಗೊತ್ತಿದೆ. ಆದ್ದರಿಂದ ಅವರೇ ನನಗೆ ಇಲ್ಲಿಗೆ ಬಂದು ಹೇಳಿಕೆ ನೀಡಲು ಒತ್ತಾಯಿಸಿದರು. ನನ್ನ ವಿರುದ್ಧವಷ್ಟೇ ಚೈತ್ರಾ ಮಾತನಾಡಿದ್ದರೆ ಸುಮ್ಮನೆ ಇರುತ್ತಿದ್ದೆ, ಆದರೆ ನಮ್ಮ ತಂದೆಯವರ ಹೆಸರಿಗೂ ಕಳಂಕ ಬಂದಿರುವುದು ನಾನು ಸಹಿಸುವುದಿಲ್ಲ....

ಹೀಗೆ ತಮ್ಮ ನೋವನ್ನು ಬಾಲಾಜಿಯವರು ತೋಡಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net