ವಿಧಿಯಾಟ ಬಲ್ಲವರಾರು? ಅಪಘಾತವಾದದ್ದು ಎರಡು ಲಾರಿಗಳ ಮಧ್ಯೆ- ಮೃತಪಟ್ಟಿದ್ದು ಆಟೋದಲ್ಲಿದ್ದ ದಂಪತಿ, ಮಗು!

accident
Published on

ಗೋದಾವರಿಖನಿ (ತೆಲಂಗಾಣ): ಚಲಿಸುತ್ತಿದ್ದ ಆಟೋದ ಮೇಲೆ ಲಾರಿಯೊಂದು ಉರುಳಿ ಬಿದ್ದಿದ್ದು, ದಂಪತಿ ಜತೆ ಮಗು ಮೃತಪಟ್ಟಿರುವ ಭಯಾನಕ ಘಟನೆ ತೆಲಂಗಾಣದ ಗೋದಾವರಿಖನಿ ಬಳಿ ನಡೆದಿದೆ. ಇಲ್ಲಿಯ ಗಂಗಾನಗರ ರಸ್ತೆಯಲ್ಲಿ ಇಂಥದ್ದೊಂದು ಅನಾಹುತ ಸಂಭವಿಸಿದೆ.

ಎರಡು ಲಾರಿಗಳ ಮಧ್ಯೆ ಅಪಘಾತ ನಡೆದು, ಆ ಪೈಕಿ ಲಾರಿಯೊಂದು ಚಲಿಸುತ್ತಿದ್ದ ಆಟೋದ ಮೇಲೆ ಬಿದ್ದು ಈ ಘಟನೆ ಸಂಭವಿಸಿದೆ. ಈ ಘಟನೆಯಲ್ಲಿ ರಾಮಗುಂಡ ನಿವಾಸಿ ಶೇಖ್​ ಶೇಕಿಲ್, ಪತ್ನಿ ರೇಷ್ಮಾ ಹಾಗೂ ಮಗು ಮೃತಪಟ್ಟಿದ್ದಾರೆ.

ದಂಪತಿ ತಮ್ಮ ಇಬ್ಬರು ಮಕ್ಕಳು ಹಾಗೂ ಇನ್ನಿಬ್ಬರು ಒಟ್ಟು ಆರು ಜನರ ಜತೆ ಮಂಚಿರ್ಯಾಲಾ ಜಿಲ್ಲೆಯ ಇಂದರಾಂ ಗ್ರಾಮಕ್ಕೆ ಹೋಗುತ್ತಿದ್ದರು. ಈ ಸಂದರ್ಭದಲ್ಲಿ ಫ್ಲೈಓವರ್ ಬಳಿ ಕಲ್ಲಿದ್ದಲು ತುಂಬಿಕೊಂಡು ಒಂದೆಡೆಯಿಂದ ಲಾರಿ ಬರುತ್ತಿದ್ದರೆ, ಇನ್ನೊಂದೆಡೆಯಿಂದ ಮಣ್ಣು ತೆಗೆದುಕೊಂಡು ಹೋಗುತ್ತಿದ್ದ ಲಾರಿ ಬರುತ್ತಿತ್ತು. ಇವೆರಡರ ಮಧ್ಯೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ.

ಈ ಪೈಕಿ ಒಂದು ಲಾರಿ ಅಲ್ಲಿಯೇ ಕೆಳಕ್ಕೆ ಪ್ರಯಾಣಿಸುತ್ತಿದ್ದ ಆಟೋ ಮೇಲೆ ಬಿದ್ದಿದೆ. ಈ ರಭಸಕ್ಕೆ ಆಟೋದಲ್ಲಿದ್ದ ದಂಪತಿ ಮತ್ತು ಮಗು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನೊಂದು ಎರಡು ತಿಂಗಳ ಮಗು ಸೇರಿದಂತೆ ಮೂವರಿಗೆ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದರು. ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net