ಟ್ವಿಟರ್​ ಬಳಸಿ 9 ಕೊಲೆ ಮಾಡಿದ್ದ ಈತ! ಗಲ್ಲುಶಿಕ್ಷೆ ವಿಧಿಸಿದ ಕೋರ್ಟ್​; ಟ್ವಿಟರ್​ ಕಿಲ್ಲರ್​ನ ವಿಚಿತ್ರ ಕಥೆ ಇಲ್ಲಿದೆ...

twitter
Published on

ಟೋಕಿಯೊ (ಜಪಾನ್​): ಈ ಚಿತ್ರದಲ್ಲಿ ಕಾಣಿಸುತ್ತಿರುವಾಗ ಟ್ವಿಟರ್​ ಕಿಲ್ಲರ್​. ಟ್ವಿಟರ್​ನಲ್ಲಿಯೇ ಜನರನ್ನು ಪರಿಚಯ ಮಾಡಿಕೊಂಡು ಈತ ಹತ್ಯೆ ಮಾಡುತ್ತಿದ್ದ!

ನಂಬಲು ಅಸಾಧ್ಯ ಎನಿಸುವ ಕೃತ್ಯ ಎಸಗುತ್ತಿದ್ದ ಈ ಯುವಕನ ಹೆಸರು ಟಕಹಿರೋ ಶಿರೇಷಿ. 27 ವರ್ಷದ ಈ ಯುವಕ ಟ್ವಿಟರ್​ ಬಳಸಿ ಒಟ್ಟೂ ಒಂಬತ್ತು ಮಂದಿಯನ್ನು ಕೊಲೆ ಮಾಡಿದ್ದಾನೆ! ಅದಕ್ಕಾಗಿಯೇ ಇವರಿಗೆ ಟ್ವಿಟರ್​ ಕಿಲ್ಲರ್​ ಎಂಬ ಹೆಸರು.

ಅಂದಹಾಗೆ ಈಗ ಜಪಾನ್​ನ ಟೋಕಿಯೊ ನಿವಾಸಿ. ಅತ್ಯಂತ ನಿಗೂಢವಾಗಿಯೇ ಉಳಿದಿದ್ದ ಒಂಬತ್ತು ಮಂದಿಯ ಕೊಲೆ ಪ್ರಕರಣವನ್ನು ಭೇದಿಸಿದ್ದ ಜಪಾನ್​ ಪೊಲೀಸರಿಗೆ ಕೊನೆಗೂ ಈ ಯುವಕ ಸಿಕ್ಕಿಬಿದ್ದಿದ್ದಾನೆ. ಅತ್ಯಂತ ವಿಚಿತ್ರ ರೀತಿಯಲ್ಲಿ ಈತ 9 ಮಂದಿಯನ್ನು ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ.

ಈತನಿಗೆ ಜಪಾನ್​ ಕೋರ್ಟ್​ ಇದೀಗ ಗಲ್ಲುಶಿಕ್ಷೆ ವಿಧಿಸಿದೆ. ಎಂಟು ಮಂದಿ ಯುವತಿಯರು ಹಾಗೂ ಒಬ್ಬ ಯುವಕ ಸೇರಿದಂತೆ ಒಂಬತ್ತು ಮಂದಿಯನ್ನು ಕೊಲೆ ಮಾಡಿರುವ ಹೇಯ ಕೃತ್ಯ ಎಸಗಿದವನಿಗೆ ಇದೇ ಸರಿಯಾದ ಶಿಕ್ಷೆ ಎಂದು ಕೋರ್ಟ್​ ಹೇಳಿದೆ.

ಕೊಲೆ ಹೇಗೆ ಮಾಡುತ್ತಿದ್ದ?

2009ರಿಂದ 2011ರವರೆಗೆ ಸೂಪರ್ ಮಾರ್ಕೆಟ್​ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಟಕಹಿರೋ ಶಿರೇಷಿ ಕೆಲಸವನ್ನು ಬಿಟ್ಟಿದ್ದ. ನಂತರ ಕೆಲಸಕ್ಕಾಗಿ ತುಂಬಾ ಪ್ರಯತ್ನಪಟ್ಟಿದ್ದರೂ ಯಾವ ಕೆಲಸವೂ ಸಿಕ್ಕಿರಲಿಲ್ಲ, ಇದರಿಂದ ಮಾನಸಿಕವಾಗಿ ಕುಗ್ಗಿದ್ದ, ಜತೆಗೆ ವಿಚಿತ್ರವಾಗಿ ಆಡತೊಡಗಿದ್ದ.

ಇದೇ ಅವನಲ್ಲಿ ವಿಕೃತ ಮನೋಭಾವಕ್ಕೆ ಕಾರಣವಾಗಿತ್ತು. ಸದಾ ಟ್ವಿಟರ್​ನಲ್ಲಿ ನಿತರನಾಗುತ್ತಿದ್ದ ಈತನಿಗೆ, ಕೆಲವರು ಪರಿಚಯವಾಗಿದ್ದರು. ಬದುಕಿನಲ್ಲಿ ತನ್ನಂತೆಯೇ ಹತಾಶರಾಗಿದ್ದು, ಟ್ವಿಟರ್​ನಲ್ಲಿ ಹೇಳಿಕೆಗಳನ್ನು ಪೋಸ್ಟ್​ ಮಾಡುವವರು ಇವನಿಗೆ ಟಾರ್ಗೆಟ್​ ಆದರು.

ಇವರು ಕೂಡ ತನ್ನಂತೆಯೇ ಮಾನಸಿಕವಾಗಿ ಕುಗ್ಗಿದ್ದರಿಂದ, ನಿಧಾನವಾಗಿ ಅವರಿಗೆಲ್ಲಾ ಮೆಸೇಜ್​ ಮಾಡಲು ಶುರು ಮಾಡಿದ್ದ. ನಿಮಗೆ ಆತ್ಮಹತ್ಯೆ ಮಾಡಿಕೊಳ್ಳಬೇಕು ಎನ್ನಿಸುತ್ತಿದೆಯೆ? ಈ ರೀತಿ ಬದುಕುವುದಕ್ಕಿಂತ ಆತ್ಮಹತ್ಯೆಯೇ ಮೇಲು ಎಂದೆಲ್ಲಾ ಅಂಥವರಿಗೆ ಹೇಳುತ್ತಿದ್ದ. ಈತನ ಮಾತು ಕೇಳಿದವರಿಗೆ ಇನ್ನೂ ಆತ್ಮಹತ್ಯೆ ಮನೋಭಾವ ಕಾಡತೊಡಗುತ್ತಿತ್ತು.

ಅವರ ಬ್ರೇನ್​ವಾಷ್​ ಮಾಡಿದ ನಂತರ ಅವರು ಹೌದು ತಮಗೆ ಆತ್ಮಹತ್ಯೆ ಮಾಡಿಕೊಳ್ಳಬೇಕು ಎನ್ನಿಸುತ್ತಿದೆ ಎನ್ನುತ್ತಿದ್ದರು. ಆಗ ಅವರನ್ನು ತನ್ನ ಬಳಿಗೆ ಬರಲು ಹೇಳುತ್ತಿದ್ದ ಈ ಯುವಕ. ನಿಮಗೆ ಯಾವುದೇ ತೊಂದರೆ ಇಲ್ಲದಂತೆ ಆತ್ಮಹತ್ಯೆ ಮಾಡಿಕೊಳ್ಳುವುದು ಹೇಗೆ ಎಂದು ನಾನು ಹೇಳಿಕೊಡುವೆ ಎಂದು ಅವರನ್ನು ಕರೆಸಿಕೊಂಡು ನಂತರ ವಿಕೃತವಾಗಿ ಅವರನ್ನು ಕೊಲೆ ಮಾಡುತ್ತಿದ್ದ.

ಹೀಗೆ ಎಂಟು ಮಂದಿ ಯುವತಿಯರು ಮತ್ತು ಒಬ್ಬ ಯುವಕ ಈತನಿಗೆ ಬಲಿಯಾದರು. 9 ಮಂದಿಯ ನಿಗೂಢ ಹತ್ಯೆಯನ್ನು ಭೇದಿಸಿದ ಪೊಲೀಸರು ನಂತರ ಖುದ್ದು ಟ್ವಿಟರ್​ ಮೂಲಕ ತಾವೇ ಆತನನ್ನು ಪರಿಚಯ ಮಾಡಿಕೊಂಡು ಆತನಿಗಾಗಿ ಬಲೆ ಬೀಸಿ ಹಿಡಿದಿದ್ದಾರೆ.

ತಾನು ಮಾಡಿರುವ ಕೃತ್ಯಗಳನ್ನು ಆತ ಒಪ್ಪಿಕೊಂಡಿದ್ದಾನೆ. ಜಪಾನ್​ನಲ್ಲಿ ಅಪರಾಧ ಪ್ರಕರಣಗಳು ಅತ್ಯಂತ ಕಡಿಮೆ. ಆದರೆ ಈ ರೀತಿ ಒಂಬತ್ತು ಕೊಲೆಗಳು ಪೊಲೀಸರ ನಿದ್ದೆಗೆಡಿಸಿದ್ದವು ಎನ್ನಲಾಗಿದೆ. ಈತನಿಗೆ ಶಿಕ್ಷೆಯ ಪ್ರಮಾಣ ವಿಧಿಸುವುದನ್ನು ತಿಳಿಯುತ್ತಿದ್ದಂತೆಯೇ ಇಲ್ಲಿಯ ಕೋರ್ಟ್​ನಲ್ಲಿ ಹಿಂದೆಂದೂ ಕಾಣದಷ್ಟು ರೀತಿಯಲ್ಲಿ ಜನರು ಕಿಕ್ಕಿರಿದು ತುಂಬಿದ್ದರು ಎಂದು ವರದಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net