ಮದುವೆಗೆ ಹೊರಟವರು ಮಸಣ ಸೇರಿದರು: ನದಿಗೆ ಬಿದ್ದ ಕಾರು- ಮದುಮಗನೂ ಸೇರಿ 9 ಮಂದಿ ಸಾವು!

accident
Published on

ಕೋಟಾ: ಇನ್ನೇನು ಕೆಲವೇ ಗಂಟೆಗಳಲ್ಲಿ ಮದುಮಗ ದಾಂಪತ್ಯ ಜೀವನಕ್ಕೆ ಕಾಲಿಡಬೇಕಿತ್ತು. ಮದುವೆಯ ಕನಸು ಕಾಣುತ್ತಾ ಮದುಮಗನಿದ್ದರೆ, ಮದುಮಗನ ಕುಟುಂಬಸ್ಥರು ವಿವಾಹ ಸಂಭ್ರಮದಲ್ಲಿ ತೇಲಾಡುತ್ತಿದ್ದರು. ಆದರೆ ವಿಧಿಯಾಟವೇ ಬೇರೆಯಾಗಿತ್ತು. ಮದ್ಯಪಾನ ಮಾಡಿ ಕಾರು ಚಾಲನೆ ಮಾಡುತ್ತಿದ್ದ ಚಾಲಕನಿಂದಾಗಿ ಮದುಮಗನೂ ಸೇರಿ 9 ಮಂದಿ ಅಪಘಾತದಲ್ಲಿ ದುರಂತ ಅಂತ್ಯ ಕಂಡರು!

ಇದು ನಡೆದಿರುವುದು ರಾಜಸ್ಥಾನದ ಕೋಟಾದಲ್ಲಿ. ಛೋಟಿ ಪುಲಿಯಾದಿಂದ ಚಂಬಲ್ ನದಿಗೆ ಕಾರು ಬಿದ್ದು ಮದುಮಗ ಸೇರಿ ಎಂಟು ಮಂದಿ ಮೃತಪಟ್ಟಿದ್ದಾರೆ. ಇವರೆಲ್ಲರೂ ಬೆಳಗ್ಗೆ 5.30ಕ್ಕೆ ಸವಾಯಿ ಮಾಧೋಪುರದಿಂದ ಹೊರಟು ಉಜ್ಜಯಿನಿಗೆ (ಮಧ್ಯಪ್ರದೇಶ) ಹೋಗುತ್ತಿದ್ದರು. ಇದೇ ವೇಳೆ ಕಾರು ನಿಯಂತ್ರಣ ತಪ್ಪಿ ಚಂಬಲ್ ನದಿಗೆ ಬಿದ್ದಿದೆ.

ಕಾರಿನಲ್ಲಿದ್ದವರು ಗಾಜನ್ನು ತೆರೆಯಲು ಪ್ರಯತ್ನಿಸಿದ್ದಾರೆ. ಆದರೆ ಎಲ್ಲಾ ಗ್ಲಾಸ್‌ ತೆರೆದುಕೊಳ್ಳಲಿಲ್ಲ. ಒಂದು ಗ್ಲಾಸ್ ಮಾತ್ರ ತೆರೆಯಲು ಸಾಧ್ಯವಾಯಿತು, ಇದರಿಂದಾಗಿ ಕಾರಿನಲ್ಲಿದ್ದ ಏಳು ಮಂದಿ ಮೃತಪಟ್ಟಿದ್ದಾರೆ. ಉಳಿದ ಇಬ್ಬರ ದೇಹಗಳು ನದಿಯಲ್ಲಿ ತೇಲಿ ಹೋಗಿವೆ. ಬೆಳಗ್ಗೆ ಸ್ಥಳೀಯರು ಕಾರನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ ನಂತರವೇ ಪರಿಹಾರ ಕಾರ್ಯ ಆರಂಭಿಸಲಾಯಿತು.

ಡೈವಿಂಗ್ ತಂಡ ಇದುವರೆಗೆ 9 ಮೃತದೇಹಗಳನ್ನು ಹೊರತೆಗೆದಿದ್ದು, ಕಾರಿನಲ್ಲಿ ಬೇರೆ ಯಾರಾದರೂ ಇದ್ದಾರಾ ಎಂಬ ಬಗ್ಗೆ ಪೊಲೀಸ್ ತಂಡ ತನಿಖೆ ನಡೆಸುತ್ತಿದೆ. ಕ್ರೇನ್ ಸಹಾಯದಿಂದ ಕಾರನ್ನು ಹೊರತೆಗೆಯಲಾಯಿತು. ಚಾಲಕ ಕುಡಿದು ಕಾರು ಚಾಲನೆ ಮಾಡಿರುವುದು ಮೇಲ್ನೊಟಕ್ಕೆ ಕಂಡುಬಂದಿರುವುದಾಗಿ ಪೊಲೀಸರು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net