

ಶ್ರೀನಗರ: ಗಡಿ ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನ ಸೈನಿಕರು ನಡೆಸಿದ ಕದನ ವಿರಾಮ ಉಲ್ಲಂಘನೆಯಲ್ಲಿ ಗಡಿ ಭದ್ರತಾ ಪಡೆ(ಬಿಎಸ್ ಎಫ್) ಸಬ್ ಇನ್ಸ್ಪೆಕ್ಟರ್ ರಾಕೇಶ್ ದೋವಲ್ ಸೇರಿದಂತೆ ನಾಲ್ವರು ಯೋಧರು ಹುತಾತ್ಮರಾಗಿದ್ದಾರೆ. ಅಲ್ಲದೇ ಶೆಲ್ ದಾಳಿಯಲ್ಲಿ ಮೂವರು ನಾಗರಿಕರು ಮೃತಪಟ್ಟಿದ್ದಾರೆ. ರಾಕೇಶ್ ದೋವಲ್ ಉತ್ತರಾಖಂಡದ ರಿಷಿಕೇಶ್ ಜಿಲ್ಲೆಯ ಗಂಗನಗರ ನಿವಾಸಿ.
ಈ ವಾರದಲ್ಲಿ ಇದು ಎರಡನೇ ಬಾರಿಗೆ ಪಾಕಿಸ್ತಾನ ಕದನ ವಿರಾಮವನ್ನು ಉಲ್ಲಂಘನೆ ಮಾಡಿದೆ.
ಬಾರಾಮುಲ್ಲಾ ಜಿಲ್ಲೆಯ ಉರಿ ಪ್ರದೇಶದ ಕಮಲ್ಕೋಟ್ ಸೆಕ್ಟರ್ನಲ್ಲಿ ಇಬ್ಬರು ನಾಗರಿಕರು ಮೃತಪಟ್ಟಿದ್ದು, ಉರಿಯ ಹಾಜಿ ಪೀರ್ಸೆಕ್ಟರ್ ನ ಬಾಲ್ಕೋಟ್ ಪ್ರದೇಶದಲ್ಲಿ ಮಹಿಳೆ ಮೃತಪಟ್ಟಿದ್ದಾರೆ.
ಈ ಗುಂಡಿನ ಚಕಮಕಿಯಲ್ಲಿ ಭಾರತೀಯ ಯೋಧರು ಸಾಹಸ ಮೆರೆದಿದ್ದಾರೆ. ಅನೇಕ ಪಾಕಿಸ್ತಾನಿ ಬಂಕರ್‌ಗಳನ್ನು ಸಹ ನಾಶಪಡಿಸಲಾಗಿದೆ.
ಇದಲ್ಲದೆ ಇಂಧನ ಡಂಪ್‌ಗಳು ಮತ್ತು ಲಾಂಚ್ ಪ್ಯಾಡ್‌ಗಳು ಸಹ ನಾಶವಾಗಿವೆ. ಪಾಕಿಸ್ತಾನದ ಮೂರು ಕಮಾಂಡೋಗಳು ಹಾಗೂ ಐವರು ಸೈನಿಕರನ್ನು ಹೊಡೆದುರುಳಿಸಲಾಗಿದೆ ಎಂದು ಸೇನೆಯ ಮೂಲಗಳು ಹೇಳಿವೆ. 12 ಪಾಕಿಸ್ತಾನಿ ಸೈನಿಕರು ಗಾಯಗೊಂಡಿದ್ದಾರೆ.
ಉರಿಯ ವಿವಿಧ ಸ್ಥಳಗಳಲ್ಲದೆ ಬಂಡಿಪೋರಾ ಜಿಲ್ಲೆಯ ಗುರೆಜ್ ಸೆಕ್ಟರ್ ನ ಇಜ್ಮಾರ್ಗ್ ಮತ್ತು ಕುಪ್ವಾರ ಜಿಲ್ಲೆಯ ಕೆರಾನ್ ಸೆಕ್ಟರ್ನಲ್ಲಿಯೂ ಕದನ ವಿರಾಮ ಉಲ್ಲಂಘನೆ ಮಾಡಿರುವ ವರದಿಯಾಗಿದೆ.
ಕದನ ವಿರಾಮ ಉಲ್ಲಂಘನೆಯ ಮೂಲಕ ಕೆರಾನ್ ಸೆಕ್ಟರ್ನ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಒಳನುಸುಳುವಿಕೆ ಯತ್ನವನ್ನು ಸೇನೆ ತಡೆಯಲು ಹೋದಾಗ ಯೋಧರು ಹುತಾತ್ಮರಾಗಿದ್ದಾರೆ.