Russian Drone Attack| ಯುಕ್ರೇನ್‌ನ ಕೈವ್‌ ಮೇಲೆ ರಷ್ಯಾ ಡ್ರೋನ್​ ದಾಳಿ: ವಿದ್ಯುತ್ ಕಡಿತ, 20 ಜನರಿಗೆ ಗಂಭೀರ ಗಾಯ

Russian Drone Attack
Published on

Russian Drone Attack: ಯುಕ್ರೇನ್‌ನ ಕೈವ್‌ ಮೇಲೆ ರಷ್ಯಾದ ಡ್ರೋನ್ ಮತ್ತು ಕ್ಷಿಪಣಿ ದಾಳಿಗಳು ನಡೆಸಿದ್ದು, ಕನಿಷ್ಠ 20 ಜನರನ್ನು ಗಾಯಗೊಳಿಸಿದೆ. ಅಲ್ಲದೆ, ವಸತಿ ಕಟ್ಟಡಗಳಿಗೆ ಹಾನಿ ಉಂಟು ಮಾಡಿದವು ಮತ್ತು ವಿದ್ಯುತ್ ಕಡಿತವಾಗಿದೆ ಎಂದು ಅಧಿಕಾರಿಗಳು ಶುಕ್ರವಾರ (ಸೆಪ್ಟೆಂಬರ್​,10) ತಿಳಿಸಿದ್ದಾರೆ.

ಯುಕ್ರೇನಿಯನ್ ರಾಜಧಾನಿಯ ಹೃದಯಭಾಗದಲ್ಲಿರುವ ಆರನೇ ಮತ್ತು ಏಳನೇ ಮಹಡಿಗಳಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ರಕ್ಷಣಾ ತಂಡಗಳು 17 ಅಂತಸ್ತಿನ ಅಪಾರ್ಟ್ಮೆಂಟ್ ಕಟ್ಟಡದಿಂದ 20 ಕ್ಕೂ ಹೆಚ್ಚು ಜನರನ್ನು ಹೊರತೆಗೆದಿವೆ. ಅಲ್ಲದೆ, ಐದು ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇತರರಿಗೆ ಸ್ಥಳದಲ್ಲೇ ಪ್ರಥಮ ಚಿಕಿತ್ಸೆ ನೀಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಎಕ್ಸ್​ನಲ್ಲಿ ಪೋಸ್ಟ್​ ಮಾಡಿರುವ ಯುಕ್ರೇನ್​ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ, ಮುಂದೆ ಬರುತ್ತಿರುವ ಚಳಿಗಾಲಕ್ಕೆ ಯುಕ್ರೇನ್ ಸಿದ್ಧವಾಗುತ್ತಿದ್ದು, ಇದೆ ಸಮಯದಲ್ಲಿ ರಷ್ಯಾದ ದಾಳಿಗಳು ನಾಗರಿಕ ಮತ್ತು ಇಂಧನ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡಿವೆ ಎಂದು ತಿಳಿಸಿದ್ದಾರೆ.

ಈ ದಾಳಿಯ ಬಗ್ಗೆ ಮಾತನಾಡಿರುವ ಪ್ರಧಾನಿ ಯೂಲಿಯಾ ಸ್ವೈರಿಡೆಂಕೊ, ಈ ದಾಳಿಯನ್ನು ಉಕ್ರೇನ್‌ನ ಇಂಧನ ಮೂಲಸೌಕರ್ಯದ ವಿರುದ್ಧದ ಅತಿದೊಡ್ಡ ಕೇಂದ್ರೀಕೃತ ದಾಳಿಗಳಲ್ಲಿ ಒಂದಾಗಿದೆ ಎಂದು ಬಣ್ಣಿಸಿದ್ದಾರೆ.

ರಷ್ಯಾ ದಾಳಿಯು ನಗರದ ಎರಡೂ ಬದಿಗಳಲ್ಲಿ ವಿದ್ಯುತ್ ಕಡಿತಗೊಳಿಸಿದೆ ಎಂದು ಕೈವ್ ಮೇಯರ್ ವಿಟಾಲಿ ಕ್ಲಿಟ್ಸ್ಕೊ ಹೇಳಿದ್ದಾರೆ. ಇದು ಡ್ನಿಪ್ರೊ ನದಿಯಿಂದ ಭಾಗಿಸಲ್ಪಟ್ಟಿದೆ. ಆದರೆ, ಯುಕ್ರೇನ್‌ನ ಅತಿದೊಡ್ಡ ವಿದ್ಯುತ್ ಆಪರೇಟರ್ ಡಿಟಿಇಕೆ, ಅನೇಕ ಹಾನಿಗೊಳಗಾದ ಉಷ್ಣ ಸ್ಥಾವರಗಳ ದುರಸ್ತಿ ಕಾರ್ಯ ಈಗಾಗಲೇ ನಡೆಯುತ್ತಿದೆ ಎಂದು ಹೇಳಿದೆ.

ರಷ್ಯಾದ ಇತ್ತೀಚಿನ ದಾಳಿಯಲ್ಲಿ 465 ಸ್ಟ್ರೈಕ್ ಮತ್ತು ಡಿಕಾಯ್ ಡ್ರೋನ್‌ಗಳು ಹಾಗೂ ವಿವಿಧ ರೀತಿಯ 32 ಕ್ಷಿಪಣಿಗಳು ಸೇರಿವೆ ಎಂದು ಯುಕ್ರೇನ್‌ನ ವಾಯುಪಡೆ ಶುಕ್ರವಾರ ತಿಳಿಸಿದೆ. ವಾಯು ರಕ್ಷಣಾ ಪಡೆಗಳು 405 ಡ್ರೋನ್‌ಗಳು ಮತ್ತು 15 ಕ್ಷಿಪಣಿಗಳನ್ನು ತಡೆಹಿಡಿದಿವೆ.

ಆಗ್ನೇಯ ಜಪೋರಿಝಿಯಾ ಪ್ರದೇಶದಲ್ಲಿ, ವಸತಿ ಪ್ರದೇಶಗಳು ಮತ್ತು ಇಂಧನ ತಾಣಗಳ ಮೇಲೆ ದಾಳಿ ಡ್ರೋನ್‌ಗಳು, ಕ್ಷಿಪಣಿಗಳು ಮತ್ತು ಮಾರ್ಗದರ್ಶಿ ಬಾಂಬ್‌ಗಳಿಂದ ದಾಳಿ ನಡೆಸಲಾಗಿದ್ದು, 7 ವರ್ಷದ ಬಾಲಕ ಸಾವನ್ನಪ್ಪಿದ್ದು, ಪೋಷಕರು ಮತ್ತು ಇತರರು ಗಾಯಗೊಂಡಿದ್ದಾರೆ ಎಂದು ಮಿಲಿಟರಿ ಆಡಳಿತ ಅಧಿಕಾರಿಗಳು ತಿಳಿಸಿದ್ದಾರೆ. ಮುನ್ನೆಚ್ಚರಿಕೆಯಾಗಿ ಈ ಪ್ರದೇಶದಲ್ಲಿನ ಜಲವಿದ್ಯುತ್ ಸ್ಥಾವರವನ್ನು ಆಫ್‌ಲೈನ್‌ನಲ್ಲಿ ಇರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net