

ಕಿಯೆವ್/ಮಾಸ್ಕೊ: ಯೂಕ್ರೇನ್ ರಾಜಧಾನಿ ಕಿಯೆವ್ ಮತ್ತು ದೇಶದ ಎರಡನೇ ದೊಡ ನಗರ ರ್ಖಾವ್ ಮೇಲೆ ರಷ್ಯಾ ಸೇನೆ ಮಂಗಳವಾರ ತೀವ್ರವಾಗಿ ದಾಳಿ ಮಾಡಿದೆ. ರಾಜಧಾನಿ ಕಿಯೆವ್ನ ಆಡಳಿತ ಕಟ್ಟಡಗಳು, ನಾಗರಿಕ ಪ್ರದೇಶಗಳು ಟಾರ್ಗೆಟ್ ಆಗಿದ್ದವು. ಮೊದಲ ಹಂತದ ಶಾಂತಿ ಮಾತುಕತೆ ವಿಫಲಗೊಂಡ ಬೆನ್ನಿಗೆ ರಷ್ಯಾ ಸೇನೆ ಯೂಕ್ರೇನ್ ಪಟ್ಟಣಗಳ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಬಾಂಬಿಂಗ್ ಮತ್ತು ಷೆಲ್ಲಿಂಗ್ ನಡೆಸಿದ ಇದರಿಂದ ಯೂಕ್ರೇನ್ ಕನಿಷ್ಠ 70 ಯೋಧರು ಸಾವನ್ನಪ್ಪಿದ್ದಾರೆ. ರ್ಖಾವ್ನಲ್ಲಿ ಕರ್ನಾಟಕದ ಮೂಲದ ಯುವಕ, ಮಕ್ಕಳು ಮತ್ತು ನಾಗರಿಕರು ಮೃತಪಟ್ಟಿದ್ದಾರೆ. ಒಟ್ಟಾರೆ ಆರು ದಿನ ಈ ಯುದ್ಧದಲ್ಲಿ 14 ಮಕ್ಕಳ ಸಹಿತ 352 ಮಂದಿ ಮೃತಪಟ್ಟಿದ್ದಾರೆ. ರಷ್ಯಾ ಪಡೆಗಳು ಈವರೆಗೆ 56 ಕ್ಷಿಪಣಿಗಳನ್ನು ಯೂಕ್ರೇನ್ ಮೇಲೆ ಪ್ರಯೋಗಿಸಿದೆ ಎಂದು ಮೂಲಗಳು ತಿಳಿಸಿವೆ. ದೇಶದ ಎಲ್ಲ ಪಟ್ಟಣಗಳನ್ನು ರಷ್ಯಾ ಕೈವಶವಾಗದಂತೆ ಸೇನೆ ತಡೆಯುತ್ತಿದೆ ಎಂದು ಯೂಕ್ರೇನ್ ಸರ್ಕಾರ ಹೇಳಿದೆ. ಆದಾಗ್ಯೂ, ಖಾರ್ಕಿವ್ ಪಟ್ಟಣದ ತುಂಬಾ ರಷ್ಯಾದ ಟ್ಯಾಂಕ್ಗಳು ತುಂಬಿಕೊಂಡಿವೆ. ದಾಳಿ ತೀವ್ರಗೊಳಿಸುವ ಮೂಲಕ ಮಾತುಕತೆ ಸಂದರ್ಭದಲ್ಲೂ ಒತ್ತಡ ಹೇರುವ ತಂತ್ರವನ್ನು ರಷ್ಯಾ ಅನುಸರಿಸಿದೆ. ಎಂದು ಯೂಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ವಿಡಿಯೋ ಸಂದೇಶದಲ್ಲಿ ಟೀಕಿಸಿದ್ದಾರೆ.
87 ವಸತಿ ಸಂಕೀರ್ಣ ನಾಶ: ರಷ್ಯಾ ಸೇನೆ ಮಂಗಳವಾರ ನಡೆಸಿದ ಷೆಲ್ಲಿಂಗ್ಗೆ ಕನಿಷ್ಠ 9 ನಾಗರಿಕರು ಬಲಿಯಾಗಿದ್ದಾರೆ. 37 ಜನ ಗಾಯಗೊಂಡಿದ್ದು, 87 ವಸತಿ ಸಂಕೀರ್ಣಗಳು ನಾಶವಾಗಿವೆ. ಇದು ಯುದ್ಧವಷ್ಟೇ ಅಲ್ಲ, ಯೂಕ್ರೇನಿಯನ್ನರ ಹತ್ಯೆ ಎಂದು ರ್ಖಾವ್ನ ಮೇಯರ್ ಇಗೋರ್ ತೆರೆಖೋವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾನವ ಹಕ್ಕುಗಳ ಉಲ್ಲಂಘನೆ: ಯೂಕ್ರೇನ್ ಮೇಲೆ ಯುದ್ಧ ಸಾರಿರುವ ರಷ್ಯಾ, ಅಂತಾರಾಷ್ಟ್ರೀಯ ಮಾನವಹಕ್ಕುಗಳ ಉಲ್ಲಂಘನೆಯನ್ನು ಮಾಡುತ್ತಿದೆ. ಯೂಕ್ರೇನ್ನ ದೊಡ್ಡ ದೊಡ್ಡ ನಗರಗಳ ಮೇಲೆ ಕ್ಷಿಪಣಿ ದಾಳಿ ನಡೆಸುತ್ತಿದೆ. ನಾಗರಿಕರನ್ನು ಹತ್ಯೆ ಮಾಡುತ್ತಿದೆ. ನಾಗರಿಕ ಮೂಲಸೌಕರ್ಯಗಳ ಮೇಲೂ ದಾಳಿ ನಡೆಸುತ್ತಿದೆ ಎಂದು ಯೂಕ್ರೇನ್ ವಿದೇಶಾಂಗ ಸಚಿವಾಲಯ ಟೀಕಿಸಿದೆ. ಇದರ ಜತೆಗೆ ಆಡಳಿತ ಕಟ್ಟಡಕ್ಕೆ ಕ್ಷಿಪಣಿ ದಾಳಿ ನಡೆದ ಸಂದರ್ಭದ ಕಿರು ವಿಡಿಯೋವನ್ನೂ ಅದು ಶೇರ್ ಮಾಡಿದೆ.
ಎಲ್ಐಸಿ ಐಪಿಒ ವಿಳಂಬ?: ರಷ್ಯಾ-ಯೂಕ್ರೇನ್ ಸಂಘರ್ಷ ತೀವ್ರಗೊಂಡ ಪರಿಣಾಮ ಜಗತ್ತಿನ ಆರ್ಥಿಕತೆ ಮೇಲಾಗಿದೆ. ಹೀಗಾಗಿ, ಎಲ್ಐಸಿಯ ಐಪಿಒ ವಿಳಂಬವಾಗುವ ಸಾಧ್ಯತೆ ಇದೆ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಈ ಕುರಿತು ಸುಳಿವು ನೀಡಿದ್ದಾರೆ.
ನಿರ್ಬಂಧ ಲೆಕ್ಕಕ್ಕಿಲ್ಲ: ನಮ್ಮ ದೇಶದ ಮೇಲೆ ಎಷ್ಟೇ ನಿರ್ಬಂಧ ಹೇರಿದರೂ ಪ್ರಯೋಜನವಿಲ್ಲ. ಯೂಕ್ರೇನ್ ಮೇಲಿನ ದಾಳಿಯಿಂದ ನಾವು ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ರಷ್ಯಾ ಸರ್ಕಾರ ಮಂಗಳವಾರ ಸ್ಪಷ್ಟಪಡಿಸಿದೆ.
2ನೇ ಸುತ್ತಿನ ಮಾತುಕತೆ ಇಂದು: ರಷ್ಯಾ-ಯೂಕ್ರೇನ್ ಶಾಂತಿಮಾತುಕತೆ ಮೊದಲೇ ಸುತ್ತು ವಿಫಲವಾದ ಬೆನ್ನಿಗೆ. ಎರಡನೇ ಸುತ್ತಿನ ಮಾತುಕತೆ ಮಾರ್ಚ್ 2ರಂದು ಬೆಲಾರೂಸ್-ಪೋಲೆಂಡ್ ಗಡಿಯಲ್ಲಿ ಆಯೋಜನೆ ಆಗಿದೆ ಎಂದು ರಷ್ಯಾ ಸೇನಾ ಮೂಲಗಳು ತಿಳಿಸಿವೆ.
9,000 ಭಾರತೀಯರು ಸ್ವದೇಶಕ್ಕೆ: ಆಪರೇಷನ್ ಗಂಗಾ ಕಾರ್ಯಾಚರಣೆಯ ಭಾಗವಾಗಿ ರೊಮೇನಿಯಾದ ರಾಜಧಾನಿ ಬುಚಾರೆಸ್ಟ್ನಿಂದ 182 ಏಳನೇ ತಂಡ ಮುಂಬೈಗೆ ಮತ್ತು ಹಂಗೇರಿಯ ಬುಡಾಪೆಸ್ಟ್ನಿಂದ 216 ಜನರನ್ನು ಒಳಗೊಂಡ ವಿಮಾನ ದೆಹಲಿಗೆ ಮಂಗಳವಾರ ಆಗಮಿಸಿವೆ.
9,000 ಭಾರತೀಯರ ಸ್ಥಳಾಂತರ: ಯೂಕ್ರೇನ್ನಲ್ಲಿದ್ದ ಭಾರತೀಯರ ಪೈಕಿ 9,000ಕ್ಕೂ ಹೆಚ್ಚು ಜನರನ್ನು ಸುರಕ್ಷಿತವಾಗಿ ಭಾರತಕ್ಕೆ ಸ್ಥಳಾಂತರಿಸಲಾಗಿದೆ. ಉಳಿದವರನ್ನು ವಾಪಸ್ ಕರೆತರುವ ಪ್ರಯತ್ನ ಪ್ರಗತಿಯಲ್ಲಿದೆ ಎಂದು ಸರ್ಕಾರ ತಿಳಿಸಿದ್ದಾಗಿ ಎಎನ್ಐ ವರದಿ ಮಾಡಿದೆ.
ಪೈಲಟ್ಗಳ ಕೊರತೆ: ಭಾರತೀಯರ ರಕ್ಷಣಾ ಕಾರ್ಯಾಚರಣೆ ಮೇಲೆ ಪೈಲಟ್ಗಳ ಕೊರತೆ ವ್ಯತಿರಿಕ್ತ ಪರಿಣಾಮ ಬೀರಿದೆ. ಏರ್ ಇಂಡಿಯಾ ಸದ್ಯ ಸಣ್ಣ ವಿಮಾನಗಳ ಮೂಲಕ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ. ಬಿ 747 ವಿಮಾನ ಚಲಾಯಿಸುವ ಪೈಲಟ್ಗಳ ಕೊರತೆ ಕಾಡಿದೆ. ಈ ವಿಮಾನದಲ್ಲಿ 600 ಪ್ರಯಾಣಿಕರನ್ನು ಒಮ್ಮೆಗೇ ಕರೆತರಬಹುದು. ಸದ್ಯ ಸಣ್ಣ ವಿಮಾನ ಬಳಸುತ್ತಿರುವ ಕಾರಣ ಹಲವು ಬಾರಿ ವಿಮಾನ ಸಂಚರಿಸಬೇಕಾದ ಪರಿಸ್ಥಿತಿ ನಿರ್ವಣವಾಗಿದೆ.
ಸ್ಲೊವಾಕಿಯಾಕ್ಕೆ ಸ್ಪೈಸ್ ಜೆಟ್: ಸ್ಲೊವಾಕಿಯಾ ತಲುಪಿರುವ ಭಾರತೀಯರನ್ನು ಭಾರತಕ್ಕೆ ಕರೆತರುವ ಆಪರೇಷನ್ ಗಂಗಾ ಕಾರ್ಯಾಚರಣೆಗಾಗಿ ಸ್ಪೈಸ್ ಜೆಟ್ ವಿಮಾನವನ್ನು ಕಳುಹಿಸಲಾಗಿದೆ. ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವ ಕಿರೆಣ್ ರಿಜಿಜು ಈ ವಿಮಾನದಲ್ಲಿ ತೆರಳಿದ್ದಾರೆ. ಪೆಟ್ರೋಲಿಯಂ ಸಚಿವ ಹರದೀಪ್ ಸಿಂಗ್ ಪುರಿ ಹಂಗೇರಿಯ ಬುಡಾಪೆಸ್ಟ್ಗೆ ಹೊರಟಿದ್ದಾರೆ.
ನಿಮ್ಮ ಬೆಂಬಲ ಇಲ್ಲದೆಯೇ ಯೂಕ್ರೇನ್ ಒಂಟಿಯಾಗಿ ರಷ್ಯಾ ಜತೆಗೆ ಹೋರಾಟ ನಡೆಸಿದೆ. ನಮ್ಮ ನೆಲಕ್ಕಾಗಿ, ನೆಲದ ಸ್ವಾತಂತ್ರ್ಯ, ಸಾರ್ವಭೌಮತೆಗಾಗಿ ನಾವು ಹೋರಾಡುತ್ತೇವೆ. ಯಾರೂ ನಮ್ಮನ್ನು ಒಡೆಯ ಲಾರರು. ನಾವು ಯೂಕ್ರೇನಿಯನ್ನರು, ಬಲಿಷ್ಠರು. ಯುರೋಪಿಯನ್ನರಾದ ನೀವು ನಮ್ಮ ಜತೆಗಿರುವುದನ್ನು ಖಾತರಿಪಡಿಸುವ ಹೊಣೆಗಾರಿಕೆ ನಿಮ್ಮದು. | ವೊಲೊಡಿಮಿರ್ ಝೆಲೆನ್ಸ್ಕಿ ಯೂಕ್ರೇನ್ ಅಧ್ಯಕ್ಷ
ಕಿಯೆವ್ ಬಿಟ್ಟು ಹೊರಡಿ: ರಷ್ಯಾ ಪಡೆಗಳು ದಾಳಿ ತೀವ್ರಗೊಳಿಸಿರುವ ಹಿನ್ನೆಲೆಯಲ್ಲಿ ರಾಜಧಾನಿ ಕಿಯೆವ್ನಲ್ಲಿರುವ ಭಾರತೀಯರು (ವಿದ್ಯಾರ್ಥಿಗಳು ಸೇರಿ)ಸಾಧ್ಯವಾದಷ್ಟು ಬೇಗ ಬೇರೆಡೆ ಹೊರಡಬೇಕು. ಟ್ರೇನ್ ಅಥವಾ ಇನ್ಯಾವುದಾದರೂ ಸಾರಿಗೆ ಹಿಡಿದು ಹೊರಡಬೇಕು ಎಂದು ಯೂಕ್ರೇನ್ನಲ್ಲಿರುವ ಭಾರತದ ರಾಯಭಾರ ಕಚೇರಿ ಸೂಚಿಸಿದೆ.
ಭಾರತೀಯರನ್ನು ಕರೆತರಲು ಬಾಹುಬಲಿ: ಯೂಕ್ರೇನ್ನಿಂದ ಭಾರತೀಯರನ್ನು ತುರ್ತಾಗಿ ಭಾರತಕ್ಕೆ ಕರೆತರುವುದಕ್ಕಾಗಿ ಕೈ ಜೋಡಿಸುವಂತೆ ವಾಯುಪಡೆಗೆ ಪ್ರಧಾನಿ ನರೇಂದ್ರ ಮೋದಿ ಸೂಚಿಸಿದ್ದಾರೆ. ನಾಗರಿಕ ವಿಮಾನಗಳಲ್ಲಿ ಕಡಿಮೆ ಪ್ರಮಾಣದ ಪ್ರಯಾಣಿಕರನ್ನಷ್ಟೇ ಕರೆತರುವುದು ಸಾಧ್ಯವಾಗುತ್ತಿದೆ. ಹೀಗಾಗಿ ದೊಡ್ಡ ಪ್ರಮಾಣದಲ್ಲಿ ರಕ್ಷಣಾ ಕಾರ್ಯ ಆಗಬೇಕಾದರೆ ಸೇನೆಯ ದೊಡ್ಡ ವಿಮಾನವಾದ ಸಿ-17 ಅನ್ನೇ ಬಳಸಬೇಕು ಎಂಬ ಅಭಿಪ್ರಾಯವನ್ನು ಪ್ರಧಾನಿ ಮೋದಿ ವ್ಯಕ್ತಪಡಿಸಿದ್ದಾರೆ.
ಗ್ಲೋಬಲ್ ಮಾಸ್ಟರ್ ಎಂದು ಕರೆಯಲಾಗುವ ಸಿ-17 ವಿಮಾನವನ್ನು ಕಳೆದ ವರ್ಷ ಆಗಸ್ಟ್/ಸೆಪ್ಟೆಂಬರ್ ಸಮಯದಲ್ಲಿ ಸಂಘರ್ಷ ಪೀಡಿತ ಆಫ್ಘನ್ನಿಂದ ಭಾರತೀಯರನ್ನು ಕರೆತರಲು ಬಳಸಲಾಗಿತ್ತು. 640 ಮಂದಿಯನ್ನು ಕರೆತಂದಿದ್ದ ಈ ವಿಮಾನವನ್ನು ’ಬಾಹುಬಲ’ ಎಂಬ ಅಡ್ಡ ಹೆಸರಿನಿಂದಲೂ ಕರೆಯಲಾಗುತ್ತದೆ.
ಹಲವರ ಜತೆ ಪ್ರಧಾನಿ ಚರ್ಚೆ: ಬಿಜೆಪಿಯ ವಿದೇಶ ವ್ಯವಹಾರಗಳ ವಿಭಾಗ ಮತ್ತು ಶ್ರೀ ಶ್ರೀ ರವಿಶಂಕರ ಗುರೂಜಿ ಸೇರಿ ವಿವಿಧ ಧಾರ್ವಿುಕ ನೇತಾರರು, ಸರ್ಕಾರೇತರ ಸಂಘಟನೆಗಳ ಜತೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮಂಗಳವಾರ ಮಾತುಕತೆ ನಡೆಸಿದರು. ಯೂಕ್ರೇನ್ನಲ್ಲಿರುವ ಭಾರತದ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಅಲ್ಲಿಂದ ಹಿಂದಕ್ಕೆ ಕರೆತರಲು ಸರ್ವ ಪ್ರಯತ್ನವನ್ನು ಕೇಂದ್ರ ಸರ್ಕಾರ ಮಾಡಿರುವುದಾಗಿ ಸರ್ಕಾರದ ಮೂಲಗಳು ತಿಳಿಸಿವೆ. ಈ ಮಧ್ಯೆ, ಪ್ರಧಾನಿ ಮೋದಿಯವರು ಮಂಗಳವಾರ ನಾಲ್ಕನೇ ಸುತ್ತಿನ ಯೂಕ್ರೇನ್ ಬಿಕ್ಕಟ್ಟಿನ ಸಂಬಂಧ ಉನ್ನತ ಮಟ್ಟದ ಸಭೆ ನಡೆಸಿದರು.
ಸಂಸದರಿಗೆ ಪಾಲಕರ ಕರೆ: ಸಮರ ಪೀಡಿತ ಯೂಕ್ರೇನ್ನಲ್ಲಿ ಸಿಲುಕಿರುವ ಭಾರತೀಯರನ್ನು ವಾಪಸ್ ಕರೆತರುವಂತೆ ಅವರ ಕುಟುಂಬದ ಸದಸ್ಯರು ಸಂಸದರ ಮೊರೆ ಹೋಗುತ್ತಿದ್ದಾರೆ. ಇಂತಹ ಕಾಳಜಿಯುಳ್ಳ ಮಾಹಿತಿಯನ್ನು ವಿದೇಶಾಂಗ ಸಚಿವಾಲಯಕ್ಕೆ ನೀಡುವಂತೆ ವಿದೇಶಾಂಗ ಸಚಿವ ಎಸ್.ಜೈಶಂಕರ್ ಸಂಸದರಲ್ಲಿ ಮನವಿ ಮಾಡಿದ್ದಾರೆ.
ಉಜ್ಜಯಿನಿ ಶ್ರೀಗಳ ಸಂತಾಪ: ಯೂಕ್ರೇನ್ನಲ್ಲಿ ರಷ್ಯಾದ ದಾಳಿ ಯಿಂದ ನವೀನ್ ಶೇಖರಪ್ಪ ಮೃತ ಪಟ್ಟಿರುವುದು ಮತ್ತು ಅಲ್ಲಿ ಭಾರತದ ಸಾವಿರಾರು ವಿದ್ಯಾರ್ಥಿಗಳು ಸಿಲುಕಿ ಕೊಂಡಿರುವುದಕ್ಕೆ ಉಜ್ಜಯಿನಿ ಪೀಠದ ಜಗದ್ಗುರು ಸಿದ್ಧಲಿಂಗ ರಾಜದೇಶೀಕೇಂದ್ರ ಶಿವಾಚಾರ್ಯ ಭಗವತ್ಪಾದರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ನವೀನ್ ಕುಟುಂಬಕ್ಕೆ ಶ್ರೀಗಳು ಸಂತಾಪ ವ್ಯಕ್ತಪಡಿಸಿದ್ದಾರೆ. ಯೂಕ್ರೇನ್ನಲ್ಲಿ ಸಿಲುಕಿಕೊಂಡಿರುವ ಎಲ್ಲ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರುವಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಯೂಕ್ರೇನ್ನಲ್ಲಿ ರಾಜ್ಯದ ವಿದ್ಯಾರ್ಥಿ ಬಲಿಯಾಗಿ ರುವುದು ಬಹಳ ಆತಂಕ ಮೂಡಿಸಿದೆ. ನಮ್ಮ ವಿದೇಶಾಂಗ ನೀತಿ, ವಿದ್ಯಾರ್ಥಿಗಳ ರಕ್ಷಣೆ ವಿಚಾರದಲ್ಲಿ ನಮ್ಮ ಕೇಂದ್ರ, ರಾಜ್ಯ ಸರ್ಕಾರಗಳು ವಿಫಲವಾಗಿವೆ. ಇನ್ನಾದರೂ ತುರ್ತು ಕ್ರಮಕೈಗೊಂಡು ಭಾರತೀಯರನ್ನು ತಾಯ್ನಾಡಿಗೆ ವಾಪಸ್ ಕರೆಸಿಕೊಳ್ಳಬೇಕು. | ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ ರಷ್ಯಾ ಸಾಕಷ್ಟು ಎಚ್ಚರಿಕೆಗಳನ್ನು ನೀಡಿದಾಗ್ಯೂ ಬಿಜೆಪಿ ಸರ್ಕಾರದ ನಿರ್ಲಕ್ಷ್ಯ, ವೈಫಲ್ಯದಿಂದ ಉಜ್ವಲ ಭವಿಷ್ಯ ಹೊಂದಿದ್ದ ಯುವ ವೈದ್ಯ ವಿದ್ಯಾರ್ಥಿ ನವೀನ್ ಬೆಲೆ ತೆರಬೇಕಾಯಿತು. ನಾಗರಿಕರ ಮೇಲೆ ದಾಳಿ ಅತ್ಯಂತ್ಯ ಕಳವಳಕಾರಿಯಾಗಿದ್ದು, ಅಂತಾರಾಷ್ಟ್ರೀಯ ಒಪ್ಪಂದಗಳನ್ನು ಗೌರವಿಸಲು ರಷ್ಯಾಗೆ ಭಾರತ ತಿಳಿಹೇಳಬೇಕು. | ಸಿದ್ದರಾಮಯ್ಯ ಪ್ರತಿಪಕ್ಷ ನಾಯಕ
ವಿಶ್ವಸಂಸ್ಥೆಯ 12 ರಷ್ಯನ್ ರಾಯಭಾರಿಗಳು ಔಟ್?: ವಿಶ್ವಸಂಸ್ಥೆಯಲ್ಲಿರುವ ರಷ್ಯಾದ 12 ರಾಜತಾಂತ್ರಿಕರು ತಮ್ಮ ಹೊಣೆಗಾರಿಕೆ ಮತ್ತು ಕರ್ತವ್ಯ ನಿಭಾಯಿಸುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ ಈ ರಾಜತಾಂತ್ರಿಕರನ್ನು ಉಚ್ಚಾಟಿಸುವುದಾಗಿ ಅಮೆರಿಕ ಹೇಳಿದೆ. ಈ ಕ್ರಮವು ವಿಯೆನ್ನಾ ಕನ್ವೆನ್ಷನ್ ಗವರ್ನಿಂಗ್ ಡಿಪ್ಲೊಮ್ಯಾಟಿಕ್ ರಿಲೇಷನ್ಸ್ನ ಉಲ್ಲಂಘನೆ ಎಂದು ವಿಶ್ವಸಂಸ್ಥೆಯ ರಷ್ಯಾ ರಾಯಭಾರಿ ವಸಿಲಿ ನೆಬೆನ್ಝಿಯಾ ಟೀಕಿಸಿದ್ದಾರೆ.
ಕಿಯೆವ್ನಲ್ಲಿ ಕಟ್ಟಡಗಳ ಮೇಲೆ ಗಿ ಮಾರ್ಕ್: ರಷ್ಯಾ ದಾಳಿ ತೀವ್ರಗೊಂಡ ಬೆನ್ನಿಗೆ ಕಿಯೆವ್ನಲ್ಲಿ ಟಾರ್ಗೆಟ್ ಮಾಡಬೇಕಾದ ಕಟ್ಟಡಗಳ ಮೇಲೆ ‘ಗಿ’ ಮಾರ್ಕ್ ಗೋಚರಿಸಿದೆ. ಕೆಂಪು ಬಣ್ಣದ ಈ ಸಂಕೇತ ಇರುವ ಬಿಲ್ಡಿಂಗ್ ಮೇಲೆ ರಷ್ಯಾ ಸೇನೆ ದಾಳಿ ನಡೆಸಲಿದೆ ಎಂದು ಹೇಳಲಾಗುತ್ತಿದೆ.
ಕಿಯೆವ್ ಕಡೆಗೆ ರಷ್ಯಾ ಕಿಕ್ಔಟ್?: ವಿಶ್ವಸಂಸ್ಥೆಯ ಭದ್ರತಾ ಸಮಿತಿಯಿಂದ ರಷ್ಯಾವನ್ನು ಹೊರ ಹಾಕುವುದಕ್ಕೆ ಇರುವ ಅವಕಾಶದ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಬ್ರಿಟನ್ ಮಂಗಳವಾರ ಹೇಳಿದೆ.
ರಷ್ಯಾ ಪಡೆ: ರಷ್ಯಾದ ಸೇನೆಯ ಟ್ಯಾಂಕ್ಗಳು ಮತ್ತು ಇತರೆ ಸೇನಾ ವಾಹನಗಳು ಕಿಯೆವ್ನತ್ತ 40 ಮೈಲಿ ಉದ್ದದ ರಸ್ತೆಯಲ್ಲಿ ಸಾಲುಗಟ್ಟಿ ನಿಂತ ದೃಶ್ಯವನ್ನು ಮ್ಯಾಕ್ಸರ್ ಟೆಕ್ನಾಲಜೀಸ್ ಉಪಗ್ರಹದ ಮೂಲಕ ಸೆರೆ ಹಿಡಿದಿದೆ. ಯೂಕ್ರೇನ್ ಮೇಲೆ ರಷ್ಯಾ ದಾಳಿ ಆರು ದಿನ ಪೂರ್ಣಗೊಂಡಿದ್ದು, ಜಾಗತಿಕ ಮಟ್ಟದಲ್ಲಿ ಕಳವಳ ಆತಂಕ ಹೆಚ್ಚಾಗಿದೆ.
2ನೇ ಸುತ್ತಿನ ಮಾತುಕತೆ ಇಂದು: ರಷ್ಯಾ-ಯೂಕ್ರೇನ್ ಶಾಂತಿಮಾತುಕತೆ ಮೊದಲೇ ಸುತ್ತು ವಿಫಲವಾದ ಬೆನ್ನಿಗೆ. ಎರಡನೇ ಸುತ್ತಿನ ಮಾತುಕತೆ ಮಾರ್ಚ್ 2ರಂದು ಬೆಲಾರೂಸ್-ಪೋಲೆಂಡ್ ಗಡಿಯಲ್ಲಿ ಆಯೋಜನೆ ಆಗಿದೆ ಎಂದು ರಷ್ಯಾ ಸೇನಾ ಮೂಲಗಳು ತಿಳಿಸಿವೆ.