ಅಮೆರಿಕಕ್ಕೆ ರಷ್ಯಾ ಕಟು ಎಚ್ಚರಿಕೆ; ಇರಾನ್ ವಿರುದ್ಧ ಮಿಲಿಟರಿ ಕಾರ್ಯಾಚರಣೆ ಅಪಾಯಕಾರಿ ಕ್ರಮ

Israel
Published on

ಟೆಲ್ ಅವೀವ್/ಟೆಹ್ರಾನ್: ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ಎರಡನೇ ವಾರಕ್ಕೆ ಕಾಲಿಟ್ಟಿದ್ದು, ಎರಡೂ ದೇಶಗಳ ನಡುವೆ ತೀವ್ರ ಕ್ಷಿಪಣಿ ದಾಳಿ ನಡೆಯುತ್ತಿದೆ. ಇದೇ ವೇಳೆ ಇರಾನ್ ವಿರುದ್ಧ ಮಿಲಿಟರಿ ಕಾರ್ಯಾಚರಣೆ ಆರಂಭಿಸುವ ಕುರಿತು ಅಮೆರಿಕ ಹೇಳಿಕೆ ನೀಡಿದ ಬೆನ್ನಲ್ಲೇ ಅಮೆರಿಕಕ್ಕೆ ರಷ್ಯಾ ಎಚ್ಚರಿಕೆ ನೀಡಿದೆ.

ಇರಾನ್-ಇಸ್ರೇಲ್ ಸಂಘರ್ಷದಲ್ಲಿ ಅಮೆರಿಕ ಮಿಲಿಟರಿ ಹಸ್ತಕ್ಷೇಪ ಮಾಡುವುದರ ವಿರುದ್ಧ ನಾವು ಎಚ್ಚರಿಕೆ ನೀಡುತ್ತಿದ್ದೇವೆ. ಇದು ಅಪಾಯಕಾರಿ ಕ್ರಮವಾಗಿರಲಿದೆ ಮತ್ತು ಇದರಿಂದ ಋಣಾತ್ಮಕ ಪರಿಣಾಮಗಳು ಉಂಟಾಗುತ್ತವೆ ಎಂದು ರಷ್ಯಾದ ವಿದೇಶಾಂಗ ಸಚಿವಾಲಯದ ವಕ್ತಾರೆ ಮಾರಿಯಾ ಜಖರೋವಾ ತಿಳಿಸಿದ್ದಾರೆ. ಇದಕ್ಕೂ ಮುನ್ನ ರಷ್ಯಾದ ಉಪ ವಿದೇಶಾಂಗ ಸಚಿವ ಸರ್ಗೆಯ್ ರೆಯಾಬ್ಕೋವ್ ಸಹ ಇಸ್ರೇಲ್​ಗೆ ಮಿಲಿಟರಿ ನೆರವು ನೀಡುವುದರ ವಿರುದ್ಧ ಅಮೆರಿಕಕ್ಕೆ ಎಚ್ಚರಿಕೆ ನೀಡಿದ್ದರು.

ಇದರ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್​ನ ಪರಮಾಣು ಕಾರ್ಯಕ್ರಮದ ಕುರಿತು ಮಾತುಕತೆಗೆ ಗಣನೀಯ ಅವಕಾಶ ಇರುವುದರಿಂದ ಅಮೆರಿಕ ಮಿಲಿಟರಿ ನೇರವಾಗಿ ಯುದ್ಧದಲ್ಲಿ ಭಾಗಿಯಾಗಲಿದೆಯೇ ಎಂಬುದನ್ನು ಮುಂದಿನ 2 ವಾರದಲ್ಲಿ ನಿರ್ಧರಿಸುವುದಾಗಿ ತಿಳಿಸಿದ್ದರು.

ಇರಾನ್​ನ ಬುಶೆಹರ್ ಪರಮಾಣು ವಿದ್ಯುತ್ ಸ್ಥಾವರವನ್ನು ರಷ್ಯಾ ನಿರ್ವಿುಸಿದ್ದು, ಇದರ ಮೇಲೆ ಇಸ್ರೇಲ್ ದಾಳಿ ನಡೆಸಿದೆ ಎಂದು ಇಸ್ರೇಲ್ ಮಿಲಿಟರಿಯ ವಕ್ತಾರರು ತಿಳಿಸಿದ್ದರು. ಆ ಬಳಿಕ ದಾಳಿ ಬಗ್ಗೆ ಖಚಿತವಾಗಿ ಹೇಳಲು ಸಾಧ್ಯವಿಲ್ಲ ಎಂದಿದ್ದರು. ಈ ಹಿನ್ನೆಲೆಯಲ್ಲಿ ಬುಶೆಹರ್ ಪರಮಾಣು ವಿದ್ಯುತ್ ಸ್ಥಾವರದ ಮೇಲೆ ಇಸ್ರೇಲ್ ದಾಳಿ ನಡೆಸಿದರೆ ಅದು ಚೆರ್ನೆಬಿಲ್ ಮಾದರಿಯ ದುರಂತಕ್ಕೆ ಕಾರಣವಾಗಬಹುದು ಎಂದು ರಷ್ಯಾದ ಪರಮಾಣು ಇಂಧನ ನಿಗಮದ ಮುಖ್ಯಸ್ಥರು ಗುರುವಾರ ಎಚ್ಚರಿಕೆ ನೀಡಿದ್ದರು.

ಅಮೆರಿಕ ಜತೆ ಮಾತುಕತೆ ಇಲ್ಲ

ಮಾತುಕತೆ ನಡೆಸುವಂತೆ ಅಮೆರಿಕ ನಿರಂತರವಾಗಿ ಕರೆ ನೀಡುತ್ತಿದೆ. ಆದರೆ ಇರಾನ್ ವಿರುದ್ಧ ಇಸ್ರೇಲ್ ತನ್ನ ದಾಳಿ ಮುಂದುವರಿಸಿರುವಾಗ ಅಮೆರಿಕದೊಂದಿಗೆ ಯಾವುದೇ ವಿಧದ ರಾಜತಾಂತ್ರಿಕ ಮಾತುಕತೆ ನಡೆಸಲು ಸಾಧ್ಯವಿಲ್ಲ ಎಂದು ಇರಾನ್​ನ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ತಿಳಿಸಿದ್ದಾರೆ. ಅಬ್ಬಾಸ್ ಯುರೋಪಿಯನ್ ಒಕ್ಕೂಟದ ನಾಯಕರೊಂದಿಗೆ ಮಾತುಕತೆ ನಡೆಸುತ್ತಿದ್ದು, ಅಂತಾರಾಷ್ಟ್ರೀಯ ಸಹಕಾರ ಪಡೆಯಲು ಪ್ರಯತ್ನಿಸುತ್ತಿದ್ದಾರೆ

ಇಸ್ರೇಲ್​ನಿಂದ ಭಾರತೀಯರ ರಕ್ಷಣೆ

ಇಸ್ರೇಲ್​ನಲ್ಲಿ ಸಿಲುಕಿರುವ ಭಾರತೀಯರನ್ನು ರಕ್ಷಿಸುವ ಕಾರ್ಯಾಚರಣೆ ಪ್ರಗತಿಯಲ್ಲಿದ್ದು ಇಸ್ರೇಲ್​ನಲ್ಲಿರುವ ಭಾರತೀಯ ರಾಯಭಾರ ಕಚೇರಿ ವೀಸಾ ಮತ್ತು ಇತರೆ ದಾಖಲೆಗಳು ಹಾಗೂ ಪ್ರಯಾಣದ ವ್ಯವಸ್ಥೆ ಮಾಡುತ್ತಿದೆ. ಭೂ ಗಡಿಯ ಮೂಲಕ ಜೋರ್ಡನ್​ಗೆ ಕರೆತಂದು ಅಲ್ಲಿಂದ ಭಾರತಕ್ಕೆ ಕಳುಹಿಸಲಾಗುತ್ತಿದೆ.

ಇರಾನ್​ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳು ಮತ್ತು ನಾಗರಿಕರನ್ನು ರಕ್ಷಿಸಲು ಅನುಕೂಲ ವಾಗುವಂತೆ ಇರಾನ್ ತನ್ನ ವಾಯುಪ್ರದೇಶದ ನಿರ್ಬಂಧವನ್ನು ಭಾರತೀಯ ವಿಮಾನಗಳಿಗೆ ತೆರವುಗೊಳಿಸಿದೆ. ಈ ಹಿನ್ನೆಲೆಯಲ್ಲಿ ಆಪರೇಷನ್ ಸಿಂಧು ಭಾಗವಾಗಿ ಮುಂದಿನ 2 ದಿನಗಳಲ್ಲಿ ಸುಮಾರು 1000ಕ್ಕೂ ಹೆಚ್ಚು ಭಾರತೀಯರನ್ನು ದೆಹಲಿಗೆ ಕರೆತರಲಾಗುವುದು.

ಗುರುಗ್ರಂಥ ಸಾಹೀಬ್ ತನ್ನಿ: ಯುದ್ಧ ಪೀಡಿತ ಇರಾನ್​ನ ಟೆಹ್ರಾನ್​ನಲ್ಲಿರುವ ಗುರುದ್ವಾರದಲ್ಲಿ ಇರಿಸಿರುವ ಗುರು ಗ್ರಂಥ ಸಾಹಿಬ್​ನ ಪ್ರತಿಗಳನ್ನು ರಕ್ಷಿಸಿ ಅಲ್ಲಿಂದ ಹೊರಗೆ ತೆಗೆದುಕೊಂಡು ಬರುವಂತೆ ಉತ್ತರ ಅಮೆರಿಕದ ಪಂಬಾಬಿ ಸಂಘವು ಶಿರೋಮಣಿ ಗುರುದ್ವಾರ ಪ್ರಬಂಧಕ್ ಸಮಿತಿಗೆ ಮನವಿ ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net