ಅಮೆರಿಕ​ ಬ್ರಹ್ಮಾಸ್ತ್ರಕ್ಕೆ ಬಗ್ಗದ ರಷ್ಯಾ! ಡೊನಾಲ್ಡ್​ ಟ್ರಂಪ್​ ಬೆದರಿಕೆಗೆ ಖಡಕ್​ ತಿರುಗೇಟು | Russia

ವಿಜಯವಾಣಿ (4)
Published on

Russia: ಯುಕ್ರೇನ್​ ವಿರುದ್ಧ ನಿರಂತರವಾಗಿ ಯುದ್ಧ ದಾಳಿ ನಡೆಸುತ್ತಿರುವ ರಷ್ಯಾಗೆ ಖಡಕ್​ ಎಚ್ಚರಿಕೆ ರವಾನಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್, ಮುಂದಿನ 50 ದಿನಗಳಲ್ಲಿ ಯುಕ್ರೇನ್​ ಮೇಲಿನ ಯುದ್ಧವನ್ನು ಕೈಬಿಡಬೇಕು. ಇಲ್ಲದಿದ್ದರೆ ಭಾರೀ ಸುಂಕವನ್ನು ಎದುರಿಸಲು ಸಜ್ಜಾಗಿ ಎಂದಿದ್ದರು. ಈ​ ಬೆದರಿಕೆಗೆ ಕಡೆಗೂ ರಷ್ಯಾ ಪ್ರತಿಕ್ರಿಯಿಸಿದೆ.

ಯುಕ್ರೇನ್‌ ಮೇಲಿನ ಯುದ್ಧವನ್ನು ಮುಂದಿನ 50 ದಿನಗಳಲ್ಲಿ ಪರಿಹರಿಸದಿದ್ದರೆ, ರಷ್ಯಾ ರಾಜಧಾನಿ ಮಾಸ್ಕೋದ ಉಳಿದ ವ್ಯಾಪಾರ ಪಾಲುದಾರರ ವಿರುದ್ಧ ಅತ್ಯಂತ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಯುದ್ಧವನ್ನು ಇಲ್ಲಿಗೆ ಕೈಬಿಡದಿದ್ದರೆ ಭಾರೀ ಸುಂಕವನ್ನು ವಿಧಿಸುವುದಾಗಿ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ರವಾನಿಸಿದ್ದರು. ಈ ಸುದ್ದಿ ಭಾರೀ ಸದ್ದು ಮಾಡುತ್ತಿದ್ದಂತೆ ಹಾಗೂ ಚರ್ಚೆಗೆ ಗ್ರಾಸವಾಗುತ್ತಿದ್ದಂತೆ ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ಪ್ರತಿಕ್ರಿಯೆ ನೀಡಿದ್ದಾರೆ.

ಜು.15ರಂದು ಶಾಂಘೈ ಸಹಕಾರ ಸಂಸ್ಥೆ (SCO) ಶೃಂಗಸಭೆಯಲ್ಲಿ ಭಾಗವಹಿಸಿದ್ದ ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, "ಟ್ರಂಪ್ ಅವರು ಸುಂಕಗಳನ್ನು ವಿಧಿಸುವುದಾಗಿ ಹೇಳಿದ್ದಾರೆ. ಅದು ಕೂಡ, ಶೇ.100ಕ್ಕಿಂತ ಹೆಚ್ಚು ಎಂದು. ಇದಕ್ಕೆಲ್ಲ ನಾವು ತಲೆಕಡಿಸಿಕೊಳ್ಳುವುದಿಲ್ಲ. ಬದಲಿಗೆ ಎದುರಿಸುತ್ತೇವೆ. ಈ ರೀತಿಯ ಬೆದರಿಕೆಗಳು ನಮಗೆ ಆಶ್ಚರ್ಯಕರವಾಗಿವೆ" ಎಂದು ಹೇಳಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net