ರಷ್ಯಾದಲ್ಲಿ ನೋಂದಣಿಯಾಯ್ತು ವಿಶ್ವದ ಪ್ರಪ್ರಥಮ ಕರೊನಾ ಲಸಿಕೆ; ಅಧ್ಯಕ್ಷ ಪುಟಿನ್​ ಮಗಳಿಗೆ ಚುಚ್ಚುಮದ್ದು ಪ್ರಯೋಗ

vladimir putin 0 20 DEC 19
Published on

ಮಾಸ್ಕೋ: ಜಗತ್ತಿನಲ್ಲಿಯೇ ಮೊಟ್ಟ ಮೊದಲ ಕರೊನಾ ಲಸಿಕೆ ಸಿದ್ಧಪಡಿಸಿದ ಶ್ರೇಯಕ್ಕೆ ರಷ್ಯಾ ಪಾತ್ರವಾಗಿದೆ. ಸರ್ಕಾರಿ ಸ್ವಾಮ್ಯದ ಸಂಸ್ಥೆಯೇ ಸಿದ್ಧಪಡಿಸಿರುವ ಈ ಲಸಿಕೆಯನ್ನು ರಷ್ಯಾದಲ್ಲಿ ನೋಂದಣಿ ಮಾಡಿಸಲಾಗಿದೆ.

ಪ್ರಯೋಗ ಹಂತದ ಪರೀಕ್ಷೆಯಲ್ಲಿ ಲಸಿಕೆ ತನ್ನ ಕ್ಷಮತೆಯನ್ನು ಸಾಬೀತು ಪಡಿಸಿದೆ. ಕರೊನಾ ವಿರುದ್ಧ ದೀರ್ಘಕಾಲದ ಪ್ರತಿರೋಧ ಶಕ್ತಿಯನ್ನು ಮಾನವ ದೇಹದಲ್ಲಿ ಸೃಷ್ಟಿಸಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್​ ಪುಟಿನ್​ ಹೇಳಿದ್ದಾರೆ.

ಎಲ್ಲಕ್ಕಿಂತ ಮುಖ್ಯವೆಂದರೆ, ತನ್ನ ಮಗಳಿಗೇ ಈ ಲಸಿಕೆಯನ್ನು ನೀಡಲಾಗಿದೆ ಎಂದು ಸ್ವತಃ ಪುಟಿನ್​ ಬಹಿರಂಗಪಡಿಸಿದ್ದಾರೆ. ಇಬ್ಬರು ಪುತ್ರಿಯರ ಪೈಕಿ ಒಬ್ಬಳಿಗೆ ಲಸಿಕೆ ನೀಡಲಾಗಿದ್ದು, ಆಕೆ ಆರೋಗ್ಯದಿಂದ ಇದ್ದಾಳೆ ಎಂದು ಪುಟಿನ್​ ಸುದ್ದಿಗಾರರಿಗೆ ತಿಳಿಸಿದ್ದಾರೆ.

ವೈದ್ಯಕೀಯ ಸಿಬ್ಬಂದಿ, ಶಿಕ್ಷಕರು ಹಾಗೂ ಸೋಂಕಿನಿಂದ ಹೆಚ್ಚು ಅಪಾಯಕ್ಕೊಳಗಾಗಿರುವವರಿಗೆ ಮೊದಲಿಗೆ ಚುಚ್ಚುಮದ್ದು ನೀಡಲಾಗುತ್ತದೆ. ರಷ್ಯಾ ತಿಳಿಸಿದೆ.

ಇದಷ್ಟೇ ಅಲ್ಲದೇ, ಲಸಿಕೆಯನ್ನು ಬೃಹತ್​ ಪ್ರಮಾಣದಲ್ಲಿ ಉತ್ಪಾದಿಸುವ ಕಾರ್ಯ ನಡೆಯುತ್ತಿದೆ. ಅಕ್ಟೋಬರ್​ನಲ್ಲಿ ತನ್ನ ಪ್ರಜೆಗಳಿಗೆ ಸಾರ್ವತ್ರಿಕವಾಗಿ ಲಸಿಕೆ ನೀಡುವ ಅಭಿಯಾನ ಹಮ್ಮಿಕೊಳ್ಳುವುದಾಗಿ ಈ ಹಿಂದೆಯೇ ರಷ್ಯಾ ಘೋಷಿಸಿತ್ತು.

ಆದರೆ, ಬೃಹತ್​ ಪ್ರಮಾಣದಲ್ಲಿ ಮೂರನೇ ಹಂತದ ಕ್ಲಿನಿಕಲ್​ ನಡೆಸದ ಹೊರತು ಬೇರೆ ದೇಶಗಳಲ್ಲಿ ಲಸಿಕೆಯ ನೋಂದಣಿ ಸಾಧ್ಯವಿಲ್ಲ. ಈ ಕಾರಣಕ್ಕಾಗಿಯೇ ರಷ್ಯಾದ ಲಸಿಕೆ ಬಗ್ಗೆ ಬೇರೆ ದೇಶಗಳು ಅನುಮಾನದ ದೃಷ್ಟಿಯಿಂದಲೇ ನೋಡುತ್ತಿವೆ. ಆದರೆ, ರಷ್ಯಾ ಮಾತ್ರ ಕರೊನಾ ಲಸಿಕೆ ಸಂಶೋಧನೆಯನ್ನು ತಾನೇ ತಯಾರಿಸಿ ಉಡಾಯಿಸಿದ್ದ ಜಗತ್ತಿನ ಮೊದಲ ಉಪಗ್ರಹ ಸ್ಫುಟ್ನಿಕ್​ನ ಯಶಸ್ಸಿಗೆ ಹೋಲಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net