

ಕೋಲಾರ: ನಗರದ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಸಂಜೆ ಕಾಂಗ್ರೆಸ್ನಿಂದ ಟಿಕೆಟ್ಗೆ ಅರ್ಜಿ ಪಡೆದಿರುವ ಆಕಾಂಗಳ ಪರವಾಗಿ ಕಾಂಗ್ರೆಸ್ ಪದಾಧಿಕಾರಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರಿಂದ ಅಭಿಪ್ರಾಯ ಸಂಗ್ರಹಿಸಲಾಯಿತು.
ಮಧ್ಯಾಹ್ನ 3ಕ್ಕೆ ಸಭೆ ನಿಗದಿಪಡಿಸಿತ್ತಾದರೂ ಸಭೆ ಆರಂಭವಾಗಿದ್ದು ಸಂಜೆ 4ರ ನಂತರ. ಮಧ್ಯಾಹ್ನ 2ರಿಂದಲೇ ಕಾರ್ಯಕರ್ತರು, ಪಕ್ಷದ ತಾಲೂಕುವಾರು ಮುಖಂಡರು ಪಕ್ಷದ ಕಚೇರಿ ಮುಂಭಾಗ ಜಮಾಯಿಸಿದ್ದರು. ಕಳೆದ ತಿಂಗಳು ಕಾಂಗ್ರೆಸ್ ಕಚೇರಿ ಮುಂಭಾಗ ಕೆ.ಎಚ್.ಮುನಿಯಪ್ಪ ನೇತೃತ್ವದಲ್ಲಿ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಉಂಟಾದ ಗದ್ದಲದಿಂದಾಗಿ ಶುಕ್ರವಾರ ಬೆಳಗ್ಗೆಯಿಂದಲೇ ಕಚೇರಿ ಮುಂಭಾಗ ಪೊಲೀಸ್ ಬಂದೋಬಸ್ತ್ ನೀಡಲಾಗಿತ್ತು.
4.30ಕ್ಕೆ ಕೆ.ಎಚ್.ಮುನಿಯಪ್ಪ, ಮಾಜಿ ಸಿಎಂ ವೀರಪ್ಪಮೊಯ್ಲಿ ಆಗಮಿಸಿದಾಗ ಕಾರ್ಯಕರ್ತರು ಜೈಕಾರ ಕೂಗಿ ಸ್ವಾಗತಿಸಿದರು.
ವ್ಯಕ್ತಿ ಪರ ಜೈಕಾರ: ಕಾಂಗ್ರೆಸ್ ಟಿಕೆಟ್ ಅರ್ಜಿ ಸಲ್ಲಿಸಿರುವ ಎಲ್.ಎ.ಮಂಜುನಾಥ್, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪ್ರಸಾದ್ ಬಾಬು ಸೇರಿದಂತೆ ಇತರರು ಮಾಲಾರ್ಪಣೆ ಮಾಡಿ ಬರಮಾಡಿಕೊಂಡರು. ಈ ಸಂದರ್ಭ ಕೆ.ಎಚ್.ಮುನಿಯಪ್ಪ ಅವರಿಗೆ ಕಾರ್ಯಕರ್ತರ ಜೈಕಾರ ಜೋರಾಗಿ ಕೇಳಿಬಂತು.
ಕಾಂಗ್ರೆಸ್ ಭವನದ ಸಭಾಂಗಣದಲ್ಲಿ ಆಸನ ವ್ಯವಸ್ಥೆ ಮಾಡಿದ್ದರಾದರೂ ಎಲ್ಲ ತಾಲೂಕುಗಳಿಂದ ಹೆಚ್ಚಿನ ಕಾರ್ಯಕರ್ತರ ಆಗಮಿಸಿದ್ದರಿಂದಾಗಿ ನೂಕುನುಗ್ಗಲಿಗೆ ಕಾರಣವಾಯಿತು. ಕಾಂಗ್ರೆಸ್ ಜಿಲ್ಲಾ ಉಸ್ತುವಾರಿ ನಾರಾಯಣಸ್ವಾಮಿ ಅವರು ಶಿಸ್ತು ಪಾಲಿಸಿ, ಕರೆದವರು ಮಾತ್ರ ಬರಬೇಕು. ಪಕ್ಷದ ಪದಾಧಿಕಾರಿಗಳಿಗೆ ಮಾತ್ರ ಅವಕಾಶ. ಟಿಕೆಟ್ ಅರ್ಜಿ ಪಡೆದವರಿಗೆ ಇಲ್ಲಿ ಅವಕಾಶವಿಲ್ಲ. ಜನಸಂದಣಿಯಾಗದೆ ಶಾಂತಿ ಕಾಪಾಡಿ ಎಂದು ವಿನಂತಿಸಿದರು. ಆದರೂ ಯಾವ ಮುಖಂಡರು, ಕಾರ್ಯಕರ್ತರು ಸಭಾಂಗಣದಿಂದ ಕಾಲ್ತೆಗೆಯಲಿಲ್ಲ.
ನಂತರ ಅದೇ ವೇದಿಕೆಯಲ್ಲಿ ಮಾತನಾಡಿದ ನಾರಾಯಣಸ್ವಾಮಿ, ನಾವು ಬಿ ಫಾರಂ ನೀಡಲು ಬಂದಿಲ್ಲ, ಆಕಾಂಗಳು ಹೆಚ್ಚಾಗಿರುವುದರಿಂದ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ಆಕಾಂಗಳ ಪಟ್ಟಿ ಕಡಿಮೆ ಮಾಡಿ ಹೈಕಮಾಂಡ್ಗೆ ತಲುಪಿಸಲು ಬಂದಿದ್ದೇವೆ. ಮುಕ್ತವಾಗಿ ಎಲ್ಲರ ಅಹವಾಲನ್ನು ಆಲಿಸುತ್ತೇವೆ, ಇದಕ್ಕೆ ಅವಕಾಶ ಮಾಡಿಕೊಡಿ ಎಂದರು.
ಮುಕ್ತವಾಗಿ ಅಭಿಪ್ರಾಯ ಸಂಗ್ರಹ: ಮಾಜಿ ಸಿಎಂ ವೀರಪ್ಪಮೊಯ್ಲಿ ಮಾತನಾಡಿ, ಕಾರ್ಯಕರ್ತರ ಉತ್ಸಾಹ ಎಲ್ಲೆಡೆ ಹೆಚ್ಚಾಗಿದೆ. ಈ ಉತ್ಸಾಹವೇ ಕಾಂಗ್ರೆಸ್ಗೆ ಶಕ್ತಿ. ಎಲ್ಲರ ಅಭಿಪ್ರಾಯ ಸಂಗ್ರಹಿಸಿ ಅರ್ಹರಿಗೆ ಮಾತ್ರ ಟಿಕೆಟ್ ನೀಡಲು ಶಿಫಾರಸು ಮಾಡಲಾಗುತ್ತದೆ. ಟಿಕೆಟ್ ಅರ್ಜಿ ಪಡೆದಿರುವ ಯಾರನ್ನೂ ಕಡೆಗಣಿಸುವುದಿಲ್ಲ. ಎಲ್ಲರ ಅಭಿಪ್ರಾಯಗಳನ್ನು ಮುಕ್ತವಾಗಿ ಸಂಗ್ರಹಿಸುತ್ತೇವೆ, ಇದಕ್ಕೆ ಅವಕಾಶ ನೀಡಬೇಕು ಎಂದು ಕೋರಿದರು.
ಮಾಜಿ ಸಚಿವ ರಾಮಲಿಂಗಾರೆಡ್ಡಿ ಸಹ ನಾರಾಯಣಸ್ವಾಮಿ ಮತ್ತು ವೀರಪ್ಪಮೊಯ್ಲಿ ಅವರ ದಾಟಿಯಲ್ಲೆ ಕಾಂಗ್ರೆಸ್ ಕಾರ್ಯಕರ್ತರಿಗೆ ತಿಳಿಸಿ ಪದಾಧಿಕಾರಿಗಳ ಅಭಿಪ್ರಾಯ ಪಡೆಯಲು ಪ್ರತ್ಯೇಕ ಕೊಠಡಿಗೆ ಹೋಗಿ ಒಬ್ಬೊಬ್ಬರಿಂದಲೇ ಅಭಿಪ್ರಾಯ ಪಡೆದರು. ಆರಂಭದಲ್ಲಿ ಆಯಾ ತಾಲೂಕಿನ ಪಕ್ಷದ ಪದಾಧಿಕಾರಿಗಳ ಅಭಿಪ್ರಾಯ ಪಡೆದ ಬಳಿಕ ಕೊನೆಯಲ್ಲಿ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಲಾಯಿತು.
ಶ್ರೀನಿವಾಸಪುರ ಕ್ಷೇತ್ರದ ಆಕಾಂ ದಳಸನೂರು ಎಲ್.ಗೋಪಾಲಕೃಷ್ಣ ಪಕ್ಷದಲ್ಲಿ ಪದಾಧಿಕಾರಿಗಳು ಶಾಸಕರು ಹೇಳಿದಂತೆ ಕೇಳುತ್ತಾರೆ. ನಾನೂ ಹಲವಾರು ವರ್ಷಗಳಿಂದ ಕಾಂಗ್ರೆಸ್ಗೆ ದುಡಿದಿದ್ದೇನೆ, ನನಗೂ ಅವಕಾಶ ನೀಡಬೇಕು. ನನ್ನ ಕಾರ್ಯಕರ್ತರ ಅಭಿಪ್ರಾಯವನ್ನು ಸಂಗ್ರಹಿಸಬೇಕು ಎಂದು ಆಗಮಿಸಿದ್ದ ವರಿಷ್ಠರಲ್ಲಿ ಮನವಿ ಮಾಡಿದರು.
ವೀಕ್ಷಕರಾಗಿ ಕೇಂದ್ರ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ, ಎಐಸಿಸಿ ಕಾರ್ಯದರ್ಶಿ ಅಭಿಷೇಕ್ ದತ್, ಬಾಗೇಪಲ್ಲಿ ಸಂಪಂಗಿ ಹಾಗೂ ಎಂಎಲ್ಸಿ ಅನಿಲ್ಕುಮಾರ್ ಇದ್ದರು.