

ಬೆಂಗಳೂರು: ಪಕ್ಷದ ಜನಾಕ್ರೋಶ ಯಾತ್ರೆಗೆ ಜನರ ಸ್ಪಂದನೆ, ಯಶಸ್ಸಿನಿಂದ ಆಡಳಿತ ಪಕ್ಷ ಗಾಬರಿಯಾಗಿದೆ. ಕೇಂದ್ರ ಸರ್ಕಾರದ ವಿರುದ್ಧ ಏ.17 ಹೋರಾಟಕ್ಕೆ ಮುಂದಾಗಿದೆ. ಆ ಮೂಲಕ ವಿಷಯಾಂತರ ಮಾಡಿ ಜನರ ಗಮನ ಬೇರೆಡೆ ಸೆಳೆಯುವ ಕಪಟ ನಾಟಕವಾಡಲು ಸಜ್ಜಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಟಕಿಯಾಡಿದರು.
ಪಕ್ಷದ ರಾಜ್ಯ ಕಚೇರಿಯಲ್ಲಿ ಸೋಮವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊದಲ ಹಂತದ ಐದು ದಿನಗಳ ಜನಾಕ್ರೋಶ ಯಾತ್ರೆಯು 1115 ಕಿ.ಮೀ. ಕ್ತಮಿಸಿ, ಒಂಭತ್ತು ಜಿಲ್ಲೆಗಳಲ್ಲಿ ಸಂಚರಿಸಿದೆ. ಜತೆಗೆ 50 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸಿದ್ದರು.
ಬೆಲೆಗಳ ಏರಿಕೆ, ಮುಸ್ಲಿಂ ಓಲೈಕೆ, ದಲಿತರ ಹಣ ಲೂಟಿ ಸೇರಿ ಜನ ವಿರೋಧಿ ನೀತಿಗಳನ್ನು ಜನರ ಮುಂದೆ ಪರಿಣಾಮಕಾರಿಯಾಗಿ ಮಂಡಿಸಿ, ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗಿದೆ. ಇದರಿಂದಾಗಿ ರಾಜ್ಯ ಸರ್ಕಾರ ತನ್ನ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಪದೇ ಪದೆ ಕೇಂದ್ರದ ಮೇಲೆ ಆರೋಪ ಮಾಡುತ್ತಿದೆ ಎಂದು ಬಿ.ವೈ.ವಿಜಯೇಂದ್ರ ವಾಗ್ದಾಳಿ ಮಾಡಿದರು.
ಶೋಷಿತರು, ನಿರ್ಲಕ್ಷಿತರು, ಹಿಂದುಳಿದವರು ಅಭಿವೃದ್ಧಿಯಾಗಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಈಗಿನ ಜಾತಿ ಜನಗಣತಿ ವರದಿ ಅವೈಜ್ಞಾನಿಕ, ಔಟ್ ಡೇಟೆಡ್ ಆಗಿದ್ದು, ಮೊದಲು ಕಸದ ಬುಟ್ಟಿಗೆ ಎಸೆಯಲಿ. ಈ ವರದಿ ಬಗ್ಗೆ ರಾಜ್ಯ ಸರ್ಕಾರ ತೆಗೆದುಕೊಳ್ಳಲಿರುವ ನಿರ್ಧಾರ ಕಾದು ನೋಡಿ ಬಿಜೆಪಿ ಅಧಿಕೃತವಾಗಿ ಪ್ರತಿಕ್ರಿಯೆ ನೀಡಲಿದೆ ಎಂದರು.
ಈ ವರದಿ 10 ವರ್ಷಗಳ ಹಿಂದಿನ ಸಮೀಕ್ಷೆ ಆಧರಿಸಿದ ಅಂಕಿ-ಅಂಶಗಳನ್ನು ಒಳಗೊಂಡಿದ್ದು, ಅವಧಿ ಮೀರಿದ್ದಾಗಿರುವ ಕಾರಣ ಕೈಬಿಟ್ಟು ಹೊಸದಾಗಿ ಸಮಿತಿ ರಚಿಸಿ ವೈಜ್ಞಾನಿಕವಾಗಿ ಸಮೀಕ್ಷೆ ನಡೆಸಬೇಕು. ವರದಿ ಬಗ್ಗೆ ನಮ್ಮ ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ. ಆಡಳಿತ ಪಕ್ಷದಲ್ಲೇ ಗೊಂದಲ, ವಿಭಿನ್ನ ಅಭಿಪ್ರಾಯಗಳಿವೆ ಎಂದು ಹೇಳಿದರು.
ಹೋರಾಟ ಮಾಡುವ ನೈತಿಕತೆ ಬಿಜೆಪಿಗೆ ಇಲ್ಲವೆಂದು ಕಾಂಗ್ರೆಸ್ ನಾಯಕರು, ಸಿಎಂ ಸಿದ್ದರಾಮಯ್ಯ ಟೀಕಿಸುವ ಮುನ್ನ ಜನರ ಮುಂದೆ ಹೋದರೆ ನೈತಿಕತೆ ಇದೆಯೋ ಇಲ್ಲವೋ ಗೊತ್ತಾಗುತ್ತದೆ. ಯಾರಿಗೆ ನೈತಿಕತೆ ಇದೆ ಎಂಬುದು ಅವರಿಗೂ ಅರ್ಥ ಆಗಲಿದೆ ಎಂದು ಬಿ.ವೈ.ವಿಜಯೇಂದ್ರ ಛೇಡಿಸಿದರು.