

ಬೆಂಗಳೂರು: ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಸ್ಥಾನಕ್ಕೆ ವಿಧಾನಪರಿಷತ್ ಮಾಜಿ ಸದಸ್ಯೆ, ನಟಿ ತಾರಾ ಅನುರಾಧಾ ಅವರ ಹೆಸರನ್ನು ಮುಖ್ಯಮಂತ್ರಿ ಶಿಫಾರಸು ಮಾಡಿರುವುದು ಬಹಿರಂಗವಾಗಿದ್ದು, ನಿಯಮಕ್ಕೆ ವಿರುದ್ಧವಾದ ಈ ನಡೆ ಚರ್ಚೆಗೆ ಗ್ರಾಸವಾಗಿದೆ.
ನಿಯಮಾನುಸಾರ ಅವಧಿ ಮುಗಿಯುವ ಮುನ್ನವೇ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರ ನೇಮಕಕ್ಕೆ ಅವಕಾಶವಿಲ್ಲವೆಂಬ ಸಚಿವೆ ಜೊಲ್ಲೆ ಶಶಿಕಲಾ ಹಿಂಬರಹದೊಂದಿಗೆ ಶಿಫಾರಸು ಪತ್ರವನ್ನು ಮುಖ್ಯಮಂತ್ರಿ ಕಚೇರಿಗೆ ವಾಪಸ್ ಕಳುಹಿಸಿದ್ದಾರೆ. ಮುಖ್ಯಮಂತ್ರಿ ನೀಡಿದ ಭರವಸೆಯಂತೆ ಜ.1ರಂದು ಶಿಫಾರಸು ಮಾಡಿದ್ದ ಈ ಪತ್ರದಲ್ಲಿ ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನಕ್ಕೆ ನಟಿ ಶ್ರುತಿ ಹಾಗೂ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಸ್ಥಾನಕ್ಕೆ ತಾರಾ ಅನುರಾಧ ನೇಮಕಕ್ಕೆ ಸೂಚಿಸಲಾಗಿತ್ತು.
ಸಿಎಂ ಸೂಚಿಸಿದ ನಿಗಮಕ್ಕೆ ಶ್ರುತಿ ಅವರನ್ನು ನೇಮಿಸಿ ಆದೇಶ ಹೊರಡಿಸುವುದಕ್ಕೆ ಯಾವುದೇ ಅಡ್ಡಿಯಿಲ್ಲ. ಆದರೆ ತಾರಾ ಅನುರಾಧಾ ನೇಮಕಕ್ಕೆ ಸಿಎಂ ಶಿಫಾರಸು ಮಾಡಿರುವುದು, ಇಲಾಖೆ ಹಿಂಬರಹದೊಂದಿಗೆ ಪತ್ರ ಹಿಂತಿರುಗಿಸಿರುವುದು ರಾಜಕೀಯ ವಲಯದಲ್ಲಿ ಬಿಸಿ ಚರ್ಚೆ ಹುಟ್ಟು ಹಾಕಿದೆ.
ಈಗಿನ ಅಧ್ಯಕ್ಷರು: ಸೆಬಾಸ್ಟಿಯನ್ ಅಂತೋಣಿ ಆಯೋಗದ ಹಾಲಿ ಅಧ್ಯಕ್ಷರು. ಹಿಂದಿನ ಸರ್ಕಾರ 2018ರ ಡಿಸೆಂಬರ್ನಲ್ಲಿ ನೇಮಿಸಿ ಆದೇಶ ಹೊರಡಿಸಿದೆ. ಮೂರು ವರ್ಷಗಳ ಅವಧಿಯಾಗಿರುವುದರಿಂದ ಇನ್ನೂ ಎರಡು ವರ್ಷದ ತನಕ ಈ ಹುದ್ದೆ ಖಾಲಿಯಿಲ್ಲ. ನೇಮಕ ನಿಯಮ ಹಾಗೂ ಅವಧಿ ತಿಳಿಯದೆ ಸಿಎಂ ಶಿಫಾರಸು ಮಾಡಿದರೆ ಎನ್ನುವುದು ಚರ್ಚೆಯ ಮುಖ್ಯಾಂಶ.
ನಿಯಮವೇನು?: ಈ ಹುದ್ದೆಗೆ ನಾಮನಿರ್ದೇಶನ ಅಥವಾ ನೇರ ನೇಮಕ ಮಾಡಲು ಅವಕಾಶವಿಲ್ಲ. ಕೇಂದ್ರ ಸರ್ಕಾರದ ಮಕ್ಕಳ ಕಲ್ಯಾಣ 2005ರ ಕಾಯ್ದೆ ನಿಯಮ 70ರಡಿ ಆಯೋಗಕ್ಕೆ ಅಧ್ಯಕ್ಷರ ನೇಮಕ ಪ್ರಕ್ರಿಯೆ ನಡೆಯುತ್ತದೆ. ನೇಮಕ ಸಮಿತಿ ಈ ಹುದ್ದೆಗೆ ಅರ್ಜಿ ಕರೆಯಲಿದ್ದು, ಸಮಿತಿ ಅಂತಿಮಗೊಳಿಸಿದ ಪಟ್ಟಿ ಪ್ರಕಾರ ಮೊದಲಿಗರು ಅಧ್ಯಕ್ಷರಾಗುತ್ತಾರೆ. ಒಂದು ವೇಳೆ ಅಧ್ಯಕ್ಷ ಸ್ಥಾನಕ್ಕೆ ಅವಧಿಗೆ ಮೊದಲು ಈ ಹುದ್ದೆ ತ್ಯಜಿಸಿದರೆ ಅಂತಿಮ ಪಟ್ಟಿಯಲ್ಲಿ ಇರುವ ಎರಡನೇಯವರು ನೇಮಕವಾಗುವರು.
ಆಯೋಗದ ಅಧ್ಯಕ್ಷ ಹುದ್ದೆಗೆ ರಾಜಕೀಯ ವ್ಯಕ್ತಿಗಳನ್ನು ನೇಮಿಸಲು ಬರುವುದಿಲ್ಲ. ಅಪೇಕ್ಷೆ ಪಟ್ಟರೆ ಯಾವುದೇ ರಾಜಕೀಯ ಪಕ್ಷದ ಸದಸ್ಯತ್ವ ಹೊಂದಿಲ್ಲವೆಂಬ ಷರಾದೊಂದಿಗೆ ಅಧ್ಯಕ್ಷರಾಗಬಹುದು ಎಂದು ನಿಯಮದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.