ಬ್ರೇಕ್ ಇನ್​ಸ್ಪೆಕ್ಟರ್​ಗಳ ನೇಮಕದಲ್ಲಿ ರೂಲ್ಸ್​ಬ್ರೇಕ್

RTO
Published on
ಆರ್​ಟಿಒ ಬ್ರೇಕ್ ಇನ್​ಸ್ಪೆಕ್ಟರ್​ಗಳ 150 ಹುದ್ದೆ ನೇಮಕ ಪ್ರಕ್ರಿಯೆ ಸಂಬಂಧ ತಾನೇ ರೂಪಿಸಿದ್ದ ವಾಹನ ದುರಸ್ತಿ ಸೇವಾನುಭವ ಪ್ರಮಾಣಪತ್ರದ ಅರ್ಹತೆಯನ್ನು ಕೆಪಿಎಸ್ಸಿ ಕೈಬಿಡಲು ಹೊರಟಿರು ವುದು ಅಭ್ಯರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಈ ಸಂಬಂಧ ಅಭ್ಯರ್ಥಿಗಳು ವಿಜಯವಾಣಿ ಸಹಾಯವಾಣಿಗೆ ಕರೆ ಮಾಡಿ ಅಳಲು ತೋಡಿಕೊಂಡ ಹಿನ್ನೆಲೆಯಲ್ಲಿ ಈ ವರದಿ ಸಿದ್ಧಪಡಿಸಲಾಗಿದೆ.

| ಕೀರ್ತಿನಾರಾಯಣ ಸಿ. ಬೆಂಗಳೂರು

ಆರು ವರ್ಷಗಳ ಬಳಿಕ ಪ್ರಾದೇಶಿಕ ಸಾರಿಗೆ ಕಚೇರಿ (ಆರ್​ಟಿಒ) ಬ್ರೇಕ್ ಇನ್​ಸ್ಪೆಕ್ಟರ್​ಗಳ 150 ಹುದ್ದೆ ನೇಮಕಾತಿ ಪ್ರಕ್ರಿಯೆ ಪುನರಾರಂಭಕ್ಕೆ ಸಿದ್ಧತೆ ಆರಂಭವಾಗಿರುವ ಬೆನ್ನಲ್ಲೇ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ)ದ ವಿರುದ್ಧ ಉದ್ಯೋಗಾಕಾಂಕ್ಷಿಗಳ ವಲಯದಿಂದ ‘ಅನ್ಯಾಯ’ದ ಕೂಗು ಕೇಳಿಬಂದಿದೆ. ಸುಪ್ರೀಂಕೋರ್ಟ್ ಮೆಟ್ಟಿಲೇರಿ ಕಾನೂನು ಹೋರಾಟ ಮುಂದುವರಿಸುವ ಜತೆಗೆ ಕೆಪಿಎಸ್ಸಿ ವಿರುದ್ಧ ಪ್ರತಿಭಟನೆಗೆ ವೇದಿಕೆ ಸಜ್ಜಾಗುತ್ತಿದೆ.

2016ರ ಫೆಬ್ರವರಿಯಲ್ಲಿ 150 ಹುದ್ದೆ ನೇಮಕಾತಿಗೆ ಸಮ್ಮಿಶ್ರ ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ಪರೀಕ್ಷೆ ಮುಗಿದು 2019ರ ಜುಲೈನಲ್ಲಿ 129 ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆ ಪಟ್ಟಿ ಬಿಡುಗಡೆ ಮಾಡಲಾಗಿತ್ತು. ಆದರೆ, ಸೇವಾನುಭವ ಪತ್ರ ಸಲ್ಲಿಕೆ ವಿಚಾರವಾಗಿ ಆಯ್ಕೆ ವಂಚಿತರು ಕೆಎಟಿ ಮೆಟ್ಟಿಲೇರಿದ್ದರು. ಆದರೀಗ ಹೈಕೋರ್ಟ್ ಆದೇಶದ ಹೊರತಾಗಿಯೂ ತಾನೇ ರೂಪಿಸಿದ್ದ ವಾಹನ ದುರಸ್ತಿ ಸೇವಾನುಭವ ಪ್ರಮಾಣ ಪತ್ರದ ಅರ್ಹತೆ ಕೈಬಿಟ್ಟು ನೇಮಕಾತಿಗೆ ಕೆಪಿಎಸ್ಸಿ ಮುಂದಾಗಿದೆ.

ಕೆಪಿಎಸ್ಸಿ ನಿರ್ಧಾರದಿಂದಾಗಿ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿದ್ದ 129 ಅಭ್ಯರ್ಥಿಗಳಿಗೆ ಅನ್ಯಾಯವಾಗಲಿದೆ. ನೇಮಕಾತಿ ಅಧಿಸೂಚನೆ ಪ್ರಕಾರ ವಾಹನ ದುರಸ್ತಿ ತರಬೇತಿ ಪಡೆದಿರುವ ಸೇವಾನುಭವ ಪತ್ರ ಸಲ್ಲಿಸಬೇಕು ಎಂದು ನಿಯಮವಿತ್ತು. ಅದರಂತೆಯೇ ನೇಮಕಾತಿ ಪ್ರಕ್ರಿಯೆ ನಡೆಸಿದ್ದ ಕೆಪಿಎಸ್ಸಿ, ತಾತ್ಕಾಲಿಕ ಆಯ್ಕೆ ಪಟ್ಟಿ ಬಿಡುಗಡೆ ಮಾಡಿತ್ತು. ಆದರೀಗ ಹಠಾತ್ತನೆ ತನ್ನದೇ ನಿಯಮ ಬದಲಾಯಿಸಿ ಹೊಸದಾಗಿ ನೇಮಕಾತಿ ಪ್ರಕ್ರಿಯೆ ನಡೆಸಲಾಗುತ್ತದೆ ಎಂದು ಹೇಳುತ್ತಿರುವ ಕೆಪಿಎಸ್ಸಿ ನಡೆ ಬಗ್ಗೆ ಅಭ್ಯರ್ಥಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ.

ಆರ್​ಟಿಒ ಇನ್​ಸ್ಪೆಕ್ಟರ್​ಗಳ ನೇಮಕಾತಿ ವಿಚಾರ ವಾಗಿ ನ್ಯಾಯಾಲಯದ ನಿರ್ದೇಶನವಿದೆ. ಈ ವಿಷಯದಲ್ಲಿ ಯಾವುದೇ ಪ್ರತಿಕ್ರಿಯೆ ನೀಡಲಾಗಲ್ಲ. | ಜಿ.ಸತ್ಯವತಿ ಕಾರ್ಯದರ್ಶಿ, ಕೆಪಿಎಸ್ಸಿ

ಕೆಪಿಎಸ್ಸಿ ಎಡವಟ್ಟೇನು?

  • ವಾಹನ ದುರಸ್ತಿ ತರಬೇತಿ ಪಡೆದಿರುವ 1 ವರ್ಷದ ಸೇವಾನುಭವ ಪ್ರಮಾಣಪತ್ರ ಸಲ್ಲಿಸಬೇಕೆಂದು ಅರ್ಜಿ ಆಹ್ವಾನದ ವೇಳೆ ಅಧಿಸೂಚನೆ ಹೊರಡಿಸಿತ್ತು
  • ಅಭ್ಯರ್ಥಿಗಳು ಸಲ್ಲಿಸಿದ್ದ ಸೇವಾನುಭವ ಪ್ರಮಾಣಪತ್ರಗಳನ್ನು ಆರ್​ಟಿಒ ಮತ್ತು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳೇ ಖುದ್ದು ಪರಿಶೀಲಿಸಿ, ಸರಿಯಾಗಿವೆ ಎಂದು ವರದಿ ಕೊಟ್ಟ ನಂತರವೇ ಆಯ್ಕೆ ಪಟ್ಟಿ ಬಿಡುಗಡೆ ಮಾಡಲಾಗಿದೆ.
  • ಕೇವಲ ಪರೀಕ್ಷೆ ಅಂಕಗಳ ಆಧಾರದ ಮೇಲೆ ನೇಮಕಾತಿ ನಡೆಸುವಂತೆ ಹೈಕೋರ್ಟ್ ಹೇಳಿಲ್ಲ ಬದಲಾಗಿ 2016ರಲ್ಲಿ ಹೊರಡಿಸಿದ್ದ ಅಧಿಸೂಚನೆ ಪ್ರಕಾರವೇ ನೇಮಕಾತಿ ನಡೆಸುವಂತೆ ಸೂಚಿಸಿದೆ
  • ಹೈಕೋರ್ಟ್ ಸೂಚಿಸಿದ್ದರೂ ಸೇವಾನುಭವ ಪ್ರಮಾಣಪತ್ರಗಳ ಅರ್ಹತೆ ಕೈಬಿಟ್ಟು ಹೊಸದಾಗಿ ನೇಮಕ ಪ್ರಕ್ರಿಯೆ ನಡೆಸಲು ಕೆಪಿಎಸ್ಸಿ ಹೊರಟಿರುವುದೇಕೆ?
  • ಈಗ ಕೇವಲ ಅಂಕಗಳ ಆಧಾರದ ಮೇಲೆ ನೇಮಕಾತಿ ನಡೆಸಿದರೆ ಕೆಪಿಎಸ್ಸಿ, ತನ್ನದೇ ನಿಯಮ ಉಲ್ಲಂಘಿಸಿದಂತಾಗುತ್ತದೆ. ಜತೆಗೆ ತಾತ್ಕಾಲಿಕ ಪಟ್ಟಿಯಲ್ಲಿ ಆಯ್ಕೆಯಾಗಿದ್ದ 129 ಅಭ್ಯರ್ಥಿಗಳಿಗೆ ಅನ್ಯಾಯ ಮಾಡಿದಂತಾಗುತ್ತದೆ

ಭವಿಷ್ಯ ಅತಂತ್ರ

  • ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಆಯ್ಕೆಯಾಗಿರುವ 129 ಅಭ್ಯರ್ಥಿಗಳು ಕಳೆದ 6 ವರ್ಷದಿಂದ ನೇಮಕಾತಿಗಾಗಿ ಕಾಯುತ್ತಿದ್ದಾರೆ
  • ಬಹುತೇಕ ಅಭ್ಯರ್ಥಿಗಳ ವಯೋಮಿತಿ ಮೀರಿದೆ. ಒಂದು ವೇಳೆ ಈ ಉದ್ಯೋಗ ಸಿಗದಿದ್ದರೆ ಬೇರೆ ಸರ್ಕಾರಿ ಉದ್ಯೋಗಕ್ಕೆ ಅರ್ಜಿ ಸಲ್ಲಿಸಲೂ ಅರ್ಹರಲ್ಲ
  • ತಾನೇ ರೂಪಿಸಿರುವ ನಿಯಮಾವಳಿಯನ್ನು ಬದಲಾಯಿಸಿದರೆ ಕೆಪಿಎಸ್ಸಿ ಮೇಲಿನ ನಂಬಿಕೆ ಹಾಗೂ ವಿಶ್ವಾಸಾರ್ಹತೆಗೆ ಧಕ್ಕೆಯಾಗುತ್ತದೆ
  • ಅಭ್ಯರ್ಥಿಗಳು ಸುಪ್ರೀಂಕೋರ್ಟ್ ಮೆಟ್ಟಿಲೇರಲು ಸಿದ್ಧತೆ ನಡೆಸಿರುವುದರಿಂದ ನೇಮಕಾತಿ ಪ್ರಕ್ರಿಯೆ ಇನ್ನಷ್ಟು ದಿನ ನನೆಗುದಿಗೆ ಬೀಳುವ ಸಾಧ್ಯತೆ ಇರುತ್ತದೆ

430 ಹುದ್ದೆಯಲ್ಲಿ 300 ಖಾಲಿ!: ಮಂಜೂರಾದ 430 ಮೋಟಾರು ವಾಹನ ಇನ್​ಸ್ಪೆಕ್ಟರ್ ಹುದ್ದೆ ಪೈಕಿ 300 ಹುದ್ದೆ ಖಾಲಿ ಉಳಿದಿವೆ. ಸಿಬ್ಬಂದಿ ಕೊರತೆಯಿಂದ ಕಾರ್ಯನಿರ್ವಹಣೆಗೆ ತೊಂದರೆ ಆಗುತ್ತಿದೆ. ಆದ್ದರಿಂದ ಆದಷ್ಟು ಬೇಗ ನೇಮಕಾತಿ ಪಕ್ರಿಯೆ ಮುಗಿಸುವಂತೆ ಸಾರಿಗೆ ಇಲಾಖೆ ಅಧಿಕಾರಿಗಳು ಕೆಪಿಎಸ್ಸಿಗೆ ಮನವಿ ಮಾಡಿದ್ದಾರೆ.

ಸುಪ್ರೀಂನಲ್ಲಿ ವಿಚಾರಣೆ: 2008ರಲ್ಲಿ 104 ಇನ್​ಸ್ಪೆಕ್ಟರ್​ಗಳ ನೇಮಕವಾಗಿತ್ತು. ಆದರೆ, ಸೇವಾನುಭವ ಪತ್ರ ಸಲ್ಲಿಕೆ ವಿಚಾರವಾಗಿ ಈ ಪ್ರಕರಣ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು, ವಿಚಾರಣೆ ನಡೆಯುತ್ತಿದೆ.

ಹೈಕೋರ್ಟ್ ಹೇಳಿದ್ದೇನು?: ಕೆಎಟಿ ಆದೇಶ ರದ್ದುಗೊಳಿಸಿದ್ದ ಹೈಕೋರ್ಟ್, 2016ರಲ್ಲಿ ಅಜಿ ಆಹ್ವಾನದ ಅಧಿಸೂಚನೆಯಲ್ಲಿ ಉಲ್ಲೇಖಿಸಿರುವಂತೆ ಸರ್ಕಾರ ರೂಪಿಸಿರುವ ನಿಯಮಾವಳಿ ಅನ್ವಯವೇ ನೇಮಕಾತಿ ಪ್ರಕ್ರಿಯೆ ಮುಂದುವರಿಸುವಂತೆ ಆದೇಶಿಸಿದೆ.

ಆದೇಶವೇನಿತ್ತು?: ವಾಹನ ದುರಸ್ತಿ ಸೇವಾನುಭವ ಪತ್ರ ಕಡ್ಡಾಯಗೊಳಿಸದೆ ಮೆರಿಟ್ ಹಾಗೂ ಮೀಸಲಾತಿ ಆಧಾರದಲ್ಲಿ ಹುದ್ದೆಗಳ ನೇಮಕಾತಿ ನಡೆಸುವಂತೆ ತಾತ್ಕಾಲಿಕ ಆಯ್ಕೆ ಪಟ್ಟಿ ರದ್ದುಗೊಳಿಸಿ, ಹೊಸದಾಗಿ ಆಯ್ಕೆ ಪ್ರಕ್ರಿಯೆ ನಡೆಸುವಂತೆ ಸೂಚಿಸಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಲಾಗಿತ್ತು.

ಅಭ್ಯರ್ಥಿಗಳ ಆರೋಪ

  • ಅಂಕಗಳ ಆಧಾರದ ಮೇಲೆ, ಅನರ್ಹಗೊಂಡಿ ರುವವರನ್ನು ಅರ್ಹರೆಂದು ಪರಿಗಣಿಸಿ ಅಕ್ರಮ ನೇಮಕ ನಡೆಸಲು ಕೆಪಿಎಸ್ಸಿ ಮುಂದಾಗಿದೆ.
  • ಹೈಕೋರ್ಟ್ ವಿಚಾರಣೆ ಸಂದರ್ಭದಲ್ಲಿ ಅನರ್ಹ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಹಾಗೂ ಅವರ ಅನರ್ಹತೆಗೆ ನಿರ್ದಿಷ್ಟ ಕಾರಣ ತಿಳಿಸಿ, ತನ್ನ ನಿರ್ಧಾರ ಸರಿಯಾಗಿದೆ ಎಂದು ಕೆಪಿಎಸ್ಸಿ ಪ್ರತಿಪಾದಿಸಿತ್ತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net