ರುಕ್ಮಿಣಿಯ ಶರಣಾಗತಿ

edit 3
Published on

| ಸುಬ್ರಹ್ಮಣ್ಯ ಸೋಮಯಾಜಿ

ಒಮ್ಮೆ ಶ್ರೀಕೃಷ್ಣನು ರುಕ್ಮಿಣಿಗೆ ಹೀಗೆ ಹೇಳುತ್ತಾನೆ-‘ರಾಜಕುಮಾರಿ, ಐಶ್ವರ್ಯ, ಶ್ರೀಮಂತಿಕೆ, ಬಲದಲ್ಲಿ ನನಗಿಂತ ಹೆಚ್ಚು ಪ್ರಭಾವಿಗಳಾದ ಹಲವಾರು ರಾಜರು ನಿನ್ನನ್ನು ವಿವಾಹವಾಗಲು ಬಯಸಿದ್ದರು. ನಿನ್ನ ಪಾಲಕರೂ ನಿನ್ನನ್ನು ಶಿಶುಪಾಲನಂಥ ಪ್ರತಿಷ್ಠಿತ ರಾಜನಿಗೆ ಮದುವೆ ಮಾಡಿಕೊಡಲು ಒಪ್ಪಿ ವಾಗ್ದಾನವನ್ನೂ ಮಾಡಿದ್ದರು. ಆದರೂ ದುಡುಕಿ ನೀನು ನನ್ನನ್ನು ವರಿಸಿಬಿಟ್ಟೆ. ನಾನು ನಿನಗೆ ಸಮಾನನಲ್ಲ. ರಾಜನೂ ನಾನಲ್ಲ. ನನ್ನ ಮಾರ್ಗ ಅಸ್ಪಷ್ಟ, ಬಡವ ಮತ್ತು ಸದಾ ಬಡವರನ್ನೇ ಪ್ರೀತಿಸುವವನು. ದರಿದ್ರರಾದ ಭಿಕ್ಷುಗಳಿಂದ ಸ್ತುತಿಸಲ್ಪಡುವವನು. ಇಂತಹವನನ್ನು ದೂರದೃಷ್ಟಿಯಿಲ್ಲದೆ ಬಯಸಿ ಮದುವೆಯಾಗಿಬಿಟ್ಟೆ’.

ಆಗ ರುಕ್ಮಿಣಿ ಹೇಳಿದ ಮಾತುಗಳು ಶರಣಾಗತಿಗೆ ಹಿಡಿದ ಕೈಗನ್ನಡಿ-‘ಶ್ರೀಕೃಷ್ಣನೇ ನನ್ನ ಉಸಿರು. ನಿನ್ನ ಅನಿರೀಕ್ಷಿತವಾದ ಈ ಮಾತುಗಳಿಂದ ಉಸಿರೇ ನಿಂತತಾಯಿತು. ಹೌದು ನಿನಗೆ ಸಮಾನಳು ನಾನಲ್ಲ. ತ್ರಿಗುಣಾತೀತನಾಗಿ ಸದಾ ಒಳಗಿನ ಆನಂದಸಾಗರದಲ್ಲಿ ರಮಿಸುವ ನೀನೆಲ್ಲಿ, ತ್ರಿಗುಣಾತ್ಮಕಳಾಗಿ ಪ್ರಕೃತಿಸ್ವರೂಪಿಣಿಯಾದ ನಾನೆಲ್ಲಿ? ಸತ್ವ-ರಜಸ್ಸು-ತಮಸ್ಸು ಎಂಬ ತ್ರಿಗುಣಸ್ವರೂಪಿಗಳಾದ ಶತ್ರುಗಳಿಗೆ ಹೆದರಿ ಅಂತಃಕರಣ ರೂಪವಾದ ಸಮುದ್ರದಲ್ಲಿ ಇರುವವನು ನೀನು. ಕಾಮಾದಿ ಅರಿಷಡ್ವರ್ಗಗಳೆಂಬ ಬಲಿಷ್ಟರೊಡನೆ ನಿನಗೆ ವೈರ ಸಹಜ. ರಾಜಪದವಿ ಇಲ್ಲವೆಂದೆ. ಹೌದು ಲೋಕವನ್ನೆಲ್ಲ ಬೆಳಗುವ ಆತ್ಮರಾಜ್ಯದ ಅಧಿಪತಿ ನೀನು. ಹೊರಗಿನ ರಾಜಪದವಿಯಿಂದ ನಿನಗೆ ಆಗಬೇಕಾದುದು ಏನಿದೆ? ನಿನ್ನ ಮಾರ್ಗ ನಿನಗೆ ಮಾತ್ರವೇ ಸ್ಪಷ್ಟ. ಋಷಿ ಮುನಿಗಳಿಗೂ ನಿನ್ನ ಲೀಲಾಮಾರ್ಗಗಳು ಅಸ್ಪಷ್ಟವಿರುವಾಗ ನಿನ್ನನ್ನು ಪೂರ್ತಿಯಾಗಿ ತಿಳಿದವರು ಯಾರಿದ್ದಾರೆ? ಇನ್ನು ಬಡತನ-ಹೌದು ನಿನ್ನನ್ನು ಬಿಟ್ಟು ಈ ಜಗತ್ತಿನಲ್ಲಿ ಪಡೆಯಬೇಕಾದುದು ಯಾವುದೂ ಇಲ್ಲ. ನೀನು ಸಿಕ್ಕಿದಮೇಲೆ ಇನ್ನಾವುದು ಬೇಕಾಗಿಲ್ಲ. ಆದ್ದರಿಂದ ಆ ಬಡತನ ಒಳ್ಳೆಯದೇ. ಜಗತ್ತಿಗೇ ಸ್ವಾಮಿಯಾದವನಿಗೆ ಧನಕನಕಗಳಿಂದ ಆಗಬೇಕಾದುದಾದರೂ ಏನು? ನಿನ್ನನ್ನು ಅಪೇಕ್ಷಿಸುವವರು ಹೊರಧನಕ್ಕೆ ಆಸೆಪಡುವುದೂ ಇಲ್ಲ. ಅಂತಹವರೇ ನಿನಗೆ ಪ್ರಿಯರು ಎಂಬುದೂ ಸಹಜವಾಗಿಯೇ ಇದೆ. ನೀನು ಆತ್ಮಕಾಮನು. ಭೌತಿಕ ಜಗತ್ತಿನ ವಿಷಯದಲ್ಲಿ ಉದಾಸೀನನಾಗಿರುವುದು ನಿನಗೆ ಸಹಜವಾದ ಸ್ವಭಾವವಾಗಿದೆ. ಪರಮಶಾಂತರಾದ, ಸದಾಕಾಲ ನಿನ್ನನ್ನೇ ತಮ್ಮೊಳಗೆ ಕಾಣುತ್ತಿರುವ ಭಿಕ್ಷುಗಳು ನಿನ್ನನ್ನು ಸ್ತುತಿಸುವುದು ಸಹಜ. ಅನ್ಯಥಾ ಶರಣಂ ನಾಸ್ತಿ ಎಂಬ ಜೀವನ ನಿಶ್ಚಯದಿಂದ ಅವರು ನಿನ್ನೆಡೆಗೆ ಧಾವಿಸಿಬರುತ್ತಾರೆ. ಹಾಗೆಯೇ ಶರಣಾಗತಳಾಗಿ ಅನನ್ಯ ಶರಣಳಾಗಿ ನಿನ್ನಲ್ಲಿಗೆ ಬಂದಿದ್ದೇನೆ. ನಿನ್ನ ಪದಕಮಲಗಳಲ್ಲಿ ಅನವರತವೂ ನನಗೆ ಆಶ್ರಯ ನೀಡು’.

(ಲೇಖಕರು ಆಧ್ಯಾತ್ಮಿಕ ಚಿಂತಕರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net