ರುದ್ರಮುನಿ ಗೆಲುವು ಅತ್ಯವಶ್ಯ: ಬಳ್ಳೇಕೆರೆ

veerashaiva
ಮಹಾಸಭಾದ ಪ್ರಧಾನ ಕಾರ್ಯದರ್ಶಿ ಸಿ.ಮಹೇಶ್‌ಮೂರ್ತಿ, ಪ್ರಮುಖರಾದ ಮಲ್ಲಿಕಾರ್ಜುನ ಕಾನೂರ, ಅನಿತಾ ರವಿಶಂಕರ್, ಗೀತಾ ರವೀಂದ್ರ, ಕೆ.ಆರ್. ಸೋಮನಾಥ್, ಜಯಶಂಕರ್, ಹಾಲಸ್ವಾಮಿ, ಸೋಮಶೇಖರ್ ಸುದ್ದಿಗೋಷ್ಠಿಯಲ್ಲಿದ್ದರು.
Published on

ಶಿವಮೊಗ್ಗ: ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಮರು ಆಯ್ಕೆ ಬಯಸಿರುವ ರುದ್ರಮುನಿ ಎನ್.ಸಜ್ಜನ್ ಹಾಗೂ ಶಿವಮೊಗ್ಗ ತಾಲೂಕು ಘಟಕದ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿರುವ ಜಿ.ಎಂ.ಮಲ್ಲಿಕಾರ್ಜುನ ಸ್ವಾಮಿ ಅವರನ್ನು ಜು.21ರಂದು ನಡೆಯುವ ಚುನಾವಣೆಯಲ್ಲಿ ಗೆಲ್ಲಿಸಬೇಕು. ಆಮೂಲಕ ಸಂಘಟನೆಯನ್ನು ಬಲಪಡಿಸಬೇಕೆಂದು ಮಹಾಸಭಾದ ಜಿಲ್ಲಾ ಉಪಾಧ್ಯಕ್ಷ ಎಂ.ಪಿ.ಆನಂದ ಮೂರ್ತಿ ಹಾಗೂ ಬಳ್ಳೇಕೆರೆ ಸಂತೋಷ್ ಮಂಗಳವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಕಳೆದ 15 ವರ್ಷಗಳಿಂದ ರುದ್ರಮುನಿ ಎನ್.ಸಜ್ಜನ್ ಮಹಾಸಭಾ ಬೆಳವಣಿಗೆಗೆ ಶ್ರಮಿಸಿದ್ದಾರೆ. ಕುವೆಂಪು ನಗರದಲ್ಲಿ ಮಹಾಸಭಾದ ಕಟ್ಟಡ ನಿರ್ಮಾಣ ಮಾಡುವಲ್ಲಿ ವಿಶೇಷ ಪಾತ್ರ ವಹಿಸಿದ್ದಾರೆ. ಇವರಿಗೆ ಮತ್ತೊಮ್ಮೆ ಅವಕಾಶ ನೀಡಬೇಕಿದೆ ಎಂದರು.
ಕೆಳದಿ ಶಿವಪ್ಪನಾಯಕ ಪ್ರಶಸ್ತಿ ಪ್ರದಾನ ಆರಂಭಿಸಿದವರು ರುದ್ರಮುನಿ ಎನ್.ಸಜ್ಜನ್. ಪ್ರತಿಭಾ ಪುರಸ್ಕಾರ ನೀಡುವ ಮೂಲಕ ಅನೇಕರಿಗೆ ಸ್ಪೂರ್ತಿ ತುಂಬಿದ್ದಾರೆ. ಇವರು ಮತ್ತೊಮ್ಮೆ ಆಯ್ಕೆಯಾದರೆ ಇನ್ನಷ್ಟು ಕೆಲಸಗಳು ಆಗಲಿವೆ ಎಂದ ವಿಶ್ವಾಸ ವ್ಯಕ್ತಪಡಿಸಿದರು.
ಭದ್ರಾವತಿ ತಾಲೂಕಿನಲ್ಲಿ ಅಧ್ಯಕ್ಷರು ಮತ್ತು ನಿರ್ದೇಶಕ ಸ್ಥಾನಗಳಿಗೆ, ಶಿಕಾರಿಪುರ ತಾಲೂಕಿನಲ್ಲಿ ಅಧ್ಯಕ್ಷ ಸ್ಥಾನಕ್ಕೆ, ಸೊರಬ ತಾಲೂಕಿನಲ್ಲಿ ನಿರ್ದೇಶಕರ ಆಯ್ಕೆಗೆ ಚುನಾವಣೆ ನಡೆಯಲಿದೆ. ಉಳಿದ ತಾಲೂಕುಗಳಲ್ಲಿ ಅವಿರೋಧ ಆಯ್ಕೆ ನಡೆದಿದೆ. ಜು.21ರ ಬೆಳಗ್ಗೆ 8 ರಿಂದ ಸಂಜೆ 5ರವರೆಗೆ ಶಿವಮೊಗ್ಗದ ಬಸವೇಶ್ವರ ವಿದ್ಯಾ ಸಂಸ್ಥೆಯಲ್ಲಿ ಮತದಾನ ನಡೆಯಲಿದೆ.
ಶಿಕಾರಿಪುರದ ಬಸವಾಶ್ರಮ, ಭದ್ರಾವತಿಯ ವೀರಭದ್ರೇಶ್ವರ ಸಭಾ ಭವನ, ಸಾಗರದ ವೀರಶೈವ ವಿದ್ಯಾರ್ಥಿ ನಿಲಯ, ಸೊರಬದ ಮುರುಘಾ ಮಠ, ಹೊಸನಗರ ಮತ್ತು ತೀರ್ಥಹಳ್ಳಿ ತಾಲೂಕುಗಳಿಗೆ ಹೊಸನಗರದ ಬ್ರಹ್ಮೇಶ್ವರ ದೇವಸ್ಥಾನದಲ್ಲಿ ಮತದಾನ ನಡೆಯಲಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net