ಸಂಪಾದಕೀಯ: ಚೀನಾ ಉದ್ಧಟತನ

china
Published on

ಲಡಾಖ್​ನಲ್ಲಿ ವಿವಾದದ ಕಿಡಿಗಳನ್ನು ಎಬ್ಬಿಸಿದ್ದ ಚೀನಾ ಏಕಾಏಕಿ ಹಿಂಸೆಗೆ ಇಳಿದಿದ್ದು, ಭಾರತ-ಚೀನಾ ಗಡಿಯಲ್ಲಿ 45 ವರ್ಷಗಳ ನಂತರ ಮೊದಲ ಬಾರಿಗೆ ತೀವ್ರ ಪ್ರಮಾಣದ ಘರ್ಷಣೆಯಾಗಿದೆ. ಲಡಾಖ್​ನ ಪೂರ್ವಭಾಗದ ಗಲ್ವಾನ್ ಕಣಿವೆಯಲ್ಲಿ ಸೋಮವಾರ ರಾತ್ರಿ ನಡೆದ ಸೇನಾ ಘರ್ಷಣೆಯಲ್ಲಿ ಭಾರತದ ಓರ್ವ ಮೇಜರ್ ಜನರಲ್, ಇಬ್ಬರು ಸೈನಿಕರು ಹುತಾತ್ಮರಾಗಿದ್ದಾರೆ. ಚೀನಾ ಯೋಧರೂ ಮೃತಪಟ್ಟಿದ್ದಾರೆ. ಕಳೆದ ಹಲವು ವಾರಗಳಿಂದ ಗಡಿಯಲ್ಲಿ ಉದ್ವಿಗ್ನ ಸ್ಥಿತಿ ತಲೆದೋರಿದ್ದು, ಎರಡೂ ದೇಶಗಳು ಸೈನಿಕರ ನಿಯೋಜನೆ ಪ್ರಮಾಣ ಹೆಚ್ಚಿಸಿದ್ದವು. ಬಳಿಕ ಮಾತುಕತೆಯ ನಂತರ ಉದ್ವಿಗ್ನತೆ ಸ್ವಲ್ಪ ತಗ್ಗಿತ್ತು. ಆದರೆ, ಸೋಮವಾರ ರಾತ್ರಿ ಚೀನಾ ಏಕಾಏಕಿ ದಾಳಿ ನಡೆಸುವ ಮೂಲಕ ಉದ್ಧಟತನ ತೋರಿದ್ದು, ಗಡಿವಿವಾದ ತಾರಕಕ್ಕೆ ಏರಿದೆ. ಈ ಹಿಂದೆ ಡೋಕ್ಲಾಂ ಬಿಕ್ಕಟ್ಟು ತಲೆದೋರಿದಾಗ ಅದನ್ನು ಭಾರತ ರಾಜತಾಂತ್ರಿಕ ಮಟ್ಟದಲ್ಲಿ ಯಶಸ್ವಿಯಾಗಿ ನಿರ್ವಹಿಸಿತ್ತು. ಪರಿಣಾಮ, ಚೀನೀ ಸೇನೆ ಹಿಂದೆ ಸರಿದಿತ್ತು.

ಹಲವು ಆಂತರಿಕ ಸಮಸ್ಯೆಗಳನ್ನು ಎದುರಿಸುತ್ತಿರುವ ಚೀನಾ ರಷ್ಯಾದೊಂದಿಗಿನ ಗಡಿ ವಿವಾದಕ್ಕೂ ಜೀವ ತುಂಬಿದೆ. ಭಾರತದೊಂದಿಗೆ ಅನಗತ್ಯವಾಗಿ ಕಾಲುಕೆದರಿ ಜಗಳಕ್ಕೆ ಬಂದಿದೆ. ಇದೆಲ್ಲ ನಡೆಯುತ್ತಿರುವ ಸಮಯವನ್ನೂ ಒಮ್ಮೆ ಸೂಕ್ಷ್ಮವಾಗಿ ಗಮನಿಸಬೇಕಿದೆ. ಭಯೋತ್ಪಾದಕರನ್ನು ಭಾರತದ ಗಡಿಯೊಳಕ್ಕೆ ನುಸುಳಿಸುತ್ತಿರುವ ಪಾಕಿಸ್ತಾನ ಇಸ್ಲಾಮಾಬಾದನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಇಬ್ಬರು ಸಿಬ್ಬಂದಿಯನ್ನು ಸೋಮವಾರ ಬಂಧಿಸಿತ್ತು. ಭಾರತದ ತೀವ್ರ ಆಕ್ರೋಶಕ್ಕೆ ಮಣಿದು, ಕೆಲವು ಗಂಟೆಗಳ ನಂತರ ಅವರನ್ನು ಬಿಡುಗಡೆಗೊಳಿಸಿತು. ಮತ್ತೊಂದೆಡೆ, ಪುಟ್ಟರಾಷ್ಟ್ರ ನೇಪಾಳ ಕೂಡ ಭಾರತದ ಜತೆ ಗಡಿವಿವಾದವನ್ನು ಕೆದಕಿದೆ ಮತ್ತು ಚೀನಾದ ಕುಮ್ಮಕ್ಕಿನಿಂದ ಭಾರತದ ವಿರುದ್ಧ ಮಾತನಾಡುತ್ತಿದೆ. ಒಂದೇ ಸಮಯದಲ್ಲಿ ಈ ಎಲ್ಲ ಬೆಳವಣಿಗೆಗಳು ನಡೆಯುತ್ತಿರುವುದನ್ನು ಅವಲೋಕಿಸಿದರೆ ಇದು ಪೂರ್ವನಿಯೋಜಿತ ಕುತಂತ್ರವೇ ಎಂಬ ಅನುಮಾನ ಬಲಗೊಳ್ಳುತ್ತಿದೆ. ಚೀನಾ, ನೇಪಾಳ, ಪಾಕಿಸ್ತಾನ-ಮೂರೂ ಒಟ್ಟಾಗಿ ಭಾರತವನ್ನು ಪೇಚಿಗೆ ಸಿಲುಕಿಸುವ ವಿಷವ್ಯೂಹ ರಚಿಸಿಕೊಂಡಿವೆಯೇ ಎಂಬ ಶಂಕೆ ಗಟ್ಟಿಯಾಗುತ್ತಿದೆ.

ಇತ್ತೀಚಿನ ದಿನಗಳಲ್ಲಿ ಭಾರತ ಹಲವು ರಂಗಗಳಲ್ಲಿ ಗಣನೀಯ ಬೆಳವಣಿಗೆ ಸಾಧಿಸಿದೆಯಲ್ಲದೆ, ಚೀನಾಕ್ಕೆ ತೀವ್ರ ಸ್ಪರ್ಧೆ ನೀಡುತ್ತಿದೆ. ‘ಜಾಗತಿಕ ನಾಯಕ’ನಾಗುವ ಹಗಲುಗನಸು ಕಾಣುತ್ತಿರುವ ಚೀನಾ ಇದಕ್ಕೆ ಅಡ್ಡಿಯಾದವರನ್ನೆಲ್ಲ ತನ್ನ ಶತ್ರುಗಳಂತೆ ನೋಡುತ್ತಿದೆ. ತನ್ನ ದೇಶದ ಸುತ್ತಲಿನ ರಾಷ್ಟ್ರಗಳ ಜತೆಗೂ ಅದು ಶತ್ರುತ್ವ ಕಟ್ಟಿಕೊಂಡಿದೆ.

1962ರ ಭಾರತ ಈಗಿಲ್ಲ. ಅದು ತುಂಬ ಬಲಿಷ್ಠವಾಗಿದೆ, ಸಮರ್ಥ ನಾಯಕತ್ವ ಮತ್ತು ಯಾವುದೇ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳುವ ಚಾಣಾಕ್ಷತೆ ಹೊಂದಿದೆ ಎಂಬುದನ್ನು ಚೀನಾ ಮರೆತಂತಿದೆ. ಗಡಿ ಉದ್ವಿಗ್ನತೆಯ ಮಜಲು ದಾಟಿ ಅನಪೇಕ್ಷಣಿಯ ಕೃತ್ಯ ಎಸಗಿರುವ ಚೀನಾಕ್ಕೆ ತಕ್ಕ ಉತ್ತರ ನೀಡಲು ಭಾರತ ಸಮರ್ಥವಾಗಿದೆ. ಆದರೆ, ಗಡಿ ವಿವಾದವನ್ನು ಮಾತುಕತೆ ಮುಖಾಂತರ ಬಗೆಹರಿಸಿಕೊಳ್ಳುವುದು ಸರಿಯಾದ ಕ್ರಮ. ಇದನ್ನು ಮರೆತಿರುವ ಚೀನಾ ಹಿಂಸೆಗೆ ಇಳಿದು ದೊಡ್ಡ ಪ್ರಮಾದವನ್ನು ಎಸಗಿದೆ. ಈಗಲೂ, ಅದು ಮಾತುಕತೆಗೆ ಮುಂದಾಗಿ, ಉದ್ವಿಗ್ನತೆ ತಗ್ಗಿಸಲು ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಮತ್ತಷ್ಟು ಹದಗೆಡಬಹುದು. ಹಾಗಾಗುವ ಮುನ್ನ ಚೀನಾ ಎಚ್ಚೆತ್ತುಕೊಳ್ಳಲಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net