

RSS: ನಾನು ಯಾವುದೇ ತಪ್ಪು ಮಾಡಿಲ್ಲ. ಯಾರ ಮನಸ್ಸನ್ನು ನೋಯಿಸುವ ಉದ್ದೇಶ ನನ್ನದಲ್ಲ. ಆದರೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಇಂಡಿಯಾ ಮೈತ್ರಿ ಕೂಟದ ನಾಯಕರಿಗೆ ನೋವಾಗಿದ್ದರೆ ಕ್ಷಮೆ ಕೋರುತ್ತೇನೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.
ವಿಧಾನಸೌಧದಲ್ಲಿ ಮಂಗಳವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು. ವಿಧಾನಸಭೆಯಲ್ಲಿ ಆರ್ಎಸ್ಎಸ್ಗೀತೆಯ ಸಾಲುಗಳನ್ನು ಉಲ್ಲೇಖಿಸಿದ್ದರ ಬಗ್ಗೆ ಸ್ಪಷ್ಟನೆ ನೀಡಿದರು. ನಾನು ಕೆಲವು ದಿನಗಳ ಹಿಂದೆ ಸದನದಲ್ಲಿ ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದ ಚರ್ಚೆ ವೇಳೆ ನಮ್ಮ ಪರಮೇಶ್ವರ್ ಸಮರ್ಥಿಸಿಕೊಳ್ಳುತ್ತಾ, ನಾನು ಅವರ ಗರಡಿಯಲ್ಲಿ ಬೆಳೆದಿದ್ದೇನೆ ಎಂದು ಹೇಳಿದೆ. ಕೆಣಕಿದ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರ ಕಾಲೆಳೆಯಲು ಅವರು ಬೆಳೆದು ಬಂದಿರುವ ಹಿನ್ನೆಲೆಯೂ ನನಗೆ ಗೊತ್ತಿದೆ ಎಂದು RSS ಗೀತೆಯ ಎರಡು ಸಾಲು ಹೇಳಿದೆ. RSS ಹೊಗಳುವುದು ನನ್ನ ಉದ್ದೇಶವಾಗಿರಲಿಲ್ಲ. ಆದರೆ ನಿರ್ದಿಷ್ಟ ಭಾಗವನ್ನು ಮಾತ್ರ ಕಟ್ ಅಂಡ್ ಪೇಸ್ಟ್ ಮಾಡಿ, ಬೇರೆ ವಿಚಾರಗಳ ಜೊತೆ ಬೆರೆಸಿ ರಾಷ್ಟ್ರ ಮಟ್ಟದ ಸುದ್ದಿ ಮಾಡಲಾಗಿದೆ ಎಂದು ಹೇಳಿದರು.
1979 ರಿಂದ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡು ವಿದ್ಯಾರ್ಥಿ ನಾಯಕನಾಗಿ ಕೆಲಸ ಮಾಡಿಕೊಂಡು ಬಂದವನು. ನಾನು ಹೊಸದಾಗಿ ಪಕ್ಷ ಸೇರಿದವನಲ್ಲ. ಯಾರಿಂದಲೂ ಪಾಠ ಹೇಳಿಸಿಕೊಳ್ಳುವ ಅವಶ್ಯಕತೆಯೂ ಇಲ್ಲ. ಇಂದಿರಾ ಗಾಂಧಿ ಅವರು ನಿಧನ ಹೊಂದಿದ ಸಂದರ್ಭದಲ್ಲಿ ನನ್ನ ಟೂರಿಂಗ್ ಟಾಕೀಸ್ ಗೆ ಇಂದಿರಾ ಚಿತ್ರಮಂದಿರ ಎಂದು ಹೆಸರಿಟ್ಟವನು ನಾನು. ನನ್ನ ಹಾಗೂ ಗಾಂಧಿ ಕುಟುಂಬದ ನಡುವಿನ ಸಂಬಂಧ ಭಕ್ತ ಹಾಗೂ ಭಗವಂತನ ನಡುವಣ ಸಂಬಂಧ ಎಂದರು.
“ನನ್ನ ಇತಿಹಾಸ, ನನ್ನ ಬದ್ಧತೆ, ನನ್ನ ಸಿದ್ಧಾಂತದ ಬಗ್ಗೆ ಗೊತ್ತಿಲ್ಲದೆ ರಾಜಕೀಯ ಮಾಡಿದರೆ, ಅದು ಅವರ ಇಚ್ಛೆ. ನನ್ನ ಪಕ್ಷದ ಕೆಲವು ಸಹೋದ್ಯೋಗಿಗಳು ಕೂಡ ನನ್ನ ಬಗ್ಗೆ ಟೀಕೆ ಮಾಡುತ್ತಿದ್ದಾರೆ. ನಾನು ಇಂಡಿಯಾ ಮೈತ್ರಿಕೂಟದ ನಾಯಕರಿಗೆ ಕ್ಷಮೆ ಕೋರುತ್ತೇನೆಯೇ ವಿನಃ ರಾಜಕೀಯ ಮಾಡುವವರಿಗೆ ಹೆದರುವುದಿಲ್ಲ” ಎಂದು ಸ್ಪಷ್ಟಪಡಿಸಿದರು.
“ನನ್ನನ್ನು ಬೆದರಿಸಿ ಕ್ಷಮೆ ಕೇಳಿಸಲಾಗಿದೆ ಎಂಬ ಭಾವನೆ ಬೇಡ. ಬೆದರಿಕೆಗಳಿಗೆ ಹೆದರುವ ರಕ್ತ ನನ್ನದಲ್ಲ. ಕುಮಾರಸ್ವಾಮಿ ಸಿಎಂ ಆಗಿದ್ದಾಗ ನಡೆದ ಸಾತನೂರು ಘಟನೆ, ಬೇರೆ ಬೇರೆ ಘಟನೆಗಳು, ಸದನದಲ್ಲಿ ನಡೆದ ಘಟನೆಗಳು, ಆಪರೇಷನ್ ಕಮಲ ಆದಾಗ ಏನಾಯ್ತು? ಯಾರು, ಯಾರು ಯಾವ ಮೂಲದಿಂದ ನಮ್ಮ ಪಕ್ಷಕ್ಕೆ ಬಂದಿದ್ದಾರೆ, ಬೇರೆ ಪಕ್ಷಕ್ಕೆ ಹೇಗಿದ್ದಾರೆ ಎಂಬುದು ಗೊತ್ತಿರಬೇಕು” ಎಂದು ತಿರುಗೇಟು ನೀಡಿದರು.